ಸರ್ಕಾರಿ ಸವಲತ್ತುಗಳನ್ನು ಅರ್ಹರಿಗೆ ತಲುಪಿಸಿ: ಡಾ. ಎಚ್. ಕೃಷ್ಣ

| Published : May 06 2025, 12:19 AM IST

ಸಾರಾಂಶ

ಎಲ್ಲ ಇಲಾಖೆಯ ಅಧಿಕಾರಿಗಳು ಇರುವ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡು ಜಿಲ್ಲೆಯಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿ. ನಮ್ಮ ಜತೆ ಕೈಜೋಡಿಸಿಕೊಂಡು ನಡೆದರೆ ಯಾವುದೇ ರೀತಿಯ ನ್ಯೂನತೆಗಳು ಆಗದ ಹಾಗೆ ನೋಡಿಕೊಂಡು ಹೋಗಬಹುದು

ಧಾರವಾಡ: ಸರ್ಕಾರ ಜನರಿಗೆ ಕೊಟ್ಟ ಸವಲತ್ತುಗಳನ್ನು ನಾವೆಲ್ಲರೂ ನಿಷ್ಠೆ, ಪ್ರಾಮಾಣಿಕವಾಗಿ ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ಹೇಳಿದರು.

ಜಿಲ್ಲಾಧಿಕಾರಿಗಳ ನೂತನ ಸಭಾಂಗಣದಲ್ಲಿ ರಾಜ್ಯ ಆಹಾರ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರುಗಳ ಸಹಯೋಗದಲ್ಲಿ ಜರುಗಿದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಎಲ್ಲ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡಿದರೆ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಒಳ್ಳೆಯ ಹೆಸರು ತಂದಂತೆ ಆಗುತ್ತದೆ. ಸರ್ಕಾರಕ್ಕೆ ಒಂದು ಒಳ್ಳೆಯ ಹೆಸರು ಬರಬೇಕು ಎಂದರೆ ನಿಮ್ಮ ಒಂದು ನಿಷ್ಠೆ, ಪ್ರಮಾಣಿಕತೆಯು ಅವಶ್ಯಕ ಎಂದರು.

ಎಲ್ಲ ಇಲಾಖೆಯ ಅಧಿಕಾರಿಗಳು ಇರುವ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡು ಜಿಲ್ಲೆಯಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿ. ನಮ್ಮ ಜತೆ ಕೈಜೋಡಿಸಿಕೊಂಡು ನಡೆದರೆ ಯಾವುದೇ ರೀತಿಯ ನ್ಯೂನತೆಗಳು ಆಗದ ಹಾಗೆ ನೋಡಿಕೊಂಡು ಹೋಗಬಹುದು ಎಂದರು.

ಜಿಪಂ ಸಿಇಓ ಭುವನೇಶ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿನ ಇಲಾಖೆ ಅಧಿಕಾರಿಗಳು ಸರ್ಕಾರದ ನಿಯಮಾನುಸಾರ ಪಾಲನೆ ಮಾಡಿ. ಆಹಾರವನ್ನು ಕೊಡುವುದು ಅಷ್ಟೇ ಅಲ್ಲ, ಅದು ಸರಿಯಾಗಿ ಇದೆ, ಇಲ್ಲವೇ ಎಂಬುದನ್ನು ನೋಡಿಕೊಳ್ಳುವುದು ಸಹ ಅಧಿಕಾರಿಗಳ ಜವಾಬ್ದಾರಿ ಆಗಿರುತ್ತದೆ ಎಂದರು.

ಸಭೆಯಲ್ಲಿ ರಾಜ್ಯ ಆಹಾರ ಆಯೋಗದ ಸದಸ್ಯರಾದ ರಾಜ ಕೋಟೆ, ಸುಮಂತ ರಾವ್, ಮಾರುತಿ ಎಂ. ದೊಡ್ಡಲಿಂಗಣ್ಣವರ, ರೋಹಿಣಿ ಪ್ರಿಯ, ಕೆ.ಎಸ್. ವಿಜಯಲಕ್ಷ್ಮಿ ಸೇರಿದಂತೆ ಹಲವರಿದ್ದರು.