ಸಾರಾಂಶ
ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ । ಪ್ರಾಧಿಕಾರದ ಜಿಲ್ಲಾಧ್ಯಕ್ಷ
ಕನ್ನಡಪ್ರಭ ವಾರ್ತೆ ಕೊಪ್ಪಳರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಹೆಚ್ಚು ಪ್ರಚಾರ ನೀಡುವುದರ ಮೂಲಕ ಸಾರ್ವಜನಿಕರಿಗೆ ಈ ಯೋಜನೆಗಳ ಮಾಹಿತಿ ತಲುಪಿಸುವ ಕೆಲಸವನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾಡಬೇಕೆಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು.
ನಗರದ ಜಿಪಂನ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜರುಗಿದ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜನಸಾಮಾನ್ಯರ ಏಳ್ಗೆಗಾಗಿ ರಾಜ್ಯ ಸರ್ಕಾರವು ಶಕ್ತಿ ಯೋಜನೆ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಯುವನಿಧಿ ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಈ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಇವುಗಳ ಲಾಭ ಜಿಲ್ಲೆಯ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ಸಿಗಬೇಕು. ಅರ್ಹ ಫಲಾನುಭವಿಗಳು ಈ ಯೋಜನೆಗಳಿಂದ ಹೊರಗುಳಿಯದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿ ತಿಂಗಳು ನಡೆಯುವ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಭೆಯ ನಡುವಳಿಗಳನ್ನು ಆಯಾ ತಿಂಗಳ 15ನೇ ತಾರೀಕಿನೊಳಗೆ ಜಿಲ್ಲಾ ಸಮಿತಿಗೆ ಸಲ್ಲಿಸಬೇಕು. ಇದರಿಂದ ಜಿಲ್ಲಾ ಮಟ್ಟದಲ್ಲಿ ಅವಶ್ಯಕ ವಿಷಯಗಳ ಕುರಿತು ಚರ್ಚಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.ಗೃಹಲಕ್ಷ್ಮಿ ಯೋಜನೆಯಡಿ ಬಾಕಿ ಇರುವ ಅರ್ಜಿಗಳ ವಿಲೇವಾರಿ ಮಾಡಲು ಆಯಾ ತಾಲೂಕಿನ ಸಿಡಿಪಿಒಗಳು ಕ್ರಮ ವಹಿಸಬೇಕು. ಬಸ್ ವ್ಯವಸ್ಥೆ ಸರಿಯಾಗಿ ನಿರ್ವಹಣೆಗೆ ಸೂಕ್ತ ಕ್ರಮ ವಹಿಸಬೇಕೆಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ವಿತರಣೆಗೆ ಕ್ರಮ ಕೈಗೊಳ್ಳಬೇಕು. ನ್ಯಾಯಬೆಲೆ ಅಂಗಡಿಗಳನ್ನು ಸರಿಯಾದ ಸಮಯಕ್ಕೆ ತೆರೆದು ಜನರಿಗೆ ಆಹಾರ ಧಾನ್ಯಗಳನ್ನು ಸರಿಯಾದ ಪ್ರಮಾಣದಲ್ಲಿ ವಿತರಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ವಹಿಸಬೇಕು. ಸಾರ್ವಜನಿಕರೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸುವಂತೆ ಎಲ್ಲಾ ನ್ಯಾಯಬೆಲೆ ಅಂಡಿಗಳ ಮಾಲೀಕರಿಗೆ ನಿರ್ದೇಶನ ನೀಡಬೇಕು ಎಂದು ಸೂಚಿಸಿದರು.ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಬಿ. ಖಾದ್ರಿ, ಅಮರೇಶಪ್ಪ ಎಸ್.ಜಿ., ನಾಗರಾಜ ಅರಳಿ ಹಾಗೂ ಖಾಸಿಂ ಸಾಬ್, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಮುಖ್ಯ ಯೋಜನಾ ನಿರ್ದೇಶಕ ಡಿ. ಮಂಜುನಾಥ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಜಿಲ್ಲಾ ಉದ್ಯೋಗ್ಯ ವಿನಿಮತ ಅಧಿಕಾರಿ ಪ್ರಾಣೇಶ್, ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರುಶುರಾಮ ವೈ.ಎಸ್., ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಹಾಗೂ ತಾಲೂಕಾ ಅಧ್ಯಕ್ಷರು ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.
ಅಧಿಕಾರಿಗಳ ಮಾಹಿತಿ:ಗೃಹಲಕ್ಷ್ಮಿಯಡಿ ಜಿಲ್ಲೆಯಲ್ಲಿ 3,21,494 ಯಜಮಾನಿಯರು ನೋಂದಣಿ ಮಾಡಿಕೊಂಡಿದ್ದು, ಆ. 2023ರಿಂದ ಆ.2024 ರವರೆಗೆ ಡಿಬಿಟಿ ಮೂಲಕ ಒಟ್ಟು 779 ಕೋಟಿ 35 ಲಕ್ಷ 72 ಸಾವಿರ ರೂ. ಪಾವತಿಸಲಾಗಿದೆ.
ಗೃಹ ಜ್ಯೋತಿಯಡಿ ಜಿಲ್ಲೆಯಲ್ಲಿ ಒಟ್ಟು 2,75,487 ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಆ. 2023ರಿಂದ ಅ.2024ರ ಅಂತ್ಯಕ್ಕೆ ಸಬ್ಸಿಡಿ ಮೂಲಕ ಒಟ್ಟು ₹162.3 ಕೋಟಿಯನ್ನು ಪಾವತಿಸಲಾಗಿದ್ದು, ಶೇ. 97.10ರಷ್ಟು ಪ್ರಗತಿ ಜಿಲ್ಲೆಯಲ್ಲಿ ಸಾಧಿಸಲಾಗಿದೆ.ಯುವನಿಧಿ ಯೋಜನೆಯಡಿ ಡಿ.2023ರಿಂದ ಇಲ್ಲಿಯವರೆಗೆ 14,265 ಪದವೀಧರರಿಗೆ ತಿಂಗಳಿಗೆ ₹ 3,000ರಂತೆ ಹಾಗೂ 182 ಡಿಪ್ಲೋಮಾ ಅಭ್ಯರ್ಥಿಗಳಿಗೆ ತಿಂಗಳಿಗೆ ₹1,500 ರಂತೆ ಒಟ್ಟು 14,447 ಫಲಾನುಭವಿಗಳಿಗೆ ಡಿ.ಬಿ.ಟಿ. ಮೂಲಕ ಹಣ ವರ್ಗಾಯಿಸಲಾಗಿದೆ.
ಅನ್ನಭಾಗ್ಯದಡಿ ಜಿಲ್ಲೆಯಲ್ಲಿರುವ ಒಟ್ಟು 3,22,209 ಪಡಿತರ ಚೀಟಿಗಳ ಪೈಕಿ ಆ.2024ರ ಮಾಹೆಗೆ 2,94,969 ಪಡಿತರ ಚೀಟಿಗಳಿಗೆ ₹17.98 ಕೋಟಿ ಪಾವತಿಸಲು ಕ್ರಮವಹಿಸಲಾಗಿದೆ. ಇದರಲ್ಲಿ 2,35,108 ಪಡಿತರ ಚೀಟಿಗಳಿಗೆ ಈಗಾಗಲೇ ಡಿಬಿಟಿ ಮೊತ್ತವನ್ನು ಪಾವತಿಸಲಾಗಿದೆ ಹಾಗೂ ಉಳಿದ 59,861 ಚೀಟಿಗಳಿಗೆ ₹3.64 ಕೋಟಿ ಪಾವತಿ ಕಾರ್ಯ ಪ್ರಗತಿಯಲ್ಲಿದೆ.ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 5.45 ಕೋಟಿ ಮಹಿಳಾ ಪ್ರಯಾಣಿಕರು ಜೂ.2023ರಿಂದ ಅ.2024ರವರೆಗೆ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.