ಸಾರಾಂಶ
ಮಕ್ಕಳಿಗೆ ಶರಣ ಸಂದೇಶಗಳನ್ನು ತಲುಪಿಸಿ, ಸಾಂಸ್ಕೃತಿಕ - ಸಾಮಾಜಿಕ ನಡುವಳಿಕೆ, ಬಾಂಧವ್ಯ ಬೆಸೆಯುವ ಕೆಲಸ ಅತ್ಯವಶ್ಯವಾಗಿ ನಡೆಯಬೇಕು ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕು ಕಾರ್ಯದರ್ಶಿ ಎಸ್.ವಿ. ಹೊಸಮನಿ ಹೇಳಿದರು.
ಹಾನಗಲ್ಲ: ಮಕ್ಕಳಿಗೆ ಶರಣ ಸಂದೇಶಗಳನ್ನು ತಲುಪಿಸಿ, ಸಾಂಸ್ಕೃತಿಕ - ಸಾಮಾಜಿಕ ನಡುವಳಿಕೆ, ಬಾಂಧವ್ಯ ಬೆಸೆಯುವ ಕೆಲಸ ಅತ್ಯವಶ್ಯವಾಗಿ ನಡೆಯಬೇಕು ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕು ಕಾರ್ಯದರ್ಶಿ ಎಸ್.ವಿ. ಹೊಸಮನಿ ಹೇಳಿದರು.
ಗುರುವಾರ ಹಾನಗಲ್ಲ ತಾಲೂಕಿನ ದ್ಯಾಮನಕೊಪ್ಪದ ಸರ್ಕಾರಿ ಶಾಲೆಯಲ್ಲಿ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ ಬ್ಯಾಡಗಿಯ ಸಾಹಿತಿ ಸಂಕಮ್ಮ ಸಂಕಮ್ಮನವರ ಸ್ಥಾಪಿಸಿದ ಪ್ರಮೀಳಾ ಪುಟ್ಟಪ್ಪ ಮೋಟೆಬೆನ್ನೂರ ಅವರ ದತ್ತಿ ಕಾರ್ಯಕ್ರಮದ ಅಂಗವಾಗಿ ವಚನ ವಾಚನ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಶರಣರ ಸಂದೇಶಗಳು ಸಾರ್ವಕಾಲಿಕ ಸತ್ಯಗಳಾಗಿವೆ. ಎಲ್ಲ ಕಾಲಕ್ಕೂ ಸಲ್ಲುವ ಈ ಶರಣರ ವಚನಗಳನ್ನು ಬಾಲ್ಯದಲ್ಲಿಯೇ ಮಕ್ಕಳಿಗೆ ತಿಳಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಅಲ್ಲದೆ ಇಂದಿನ ನಾಗರಿಕ ವ್ಯವಸ್ಥೆಯ ಹೆಸರಿನಲ್ಲಿ ನಡೆಯುತ್ತಿರುವ ಅವಘಡಗಳಿಗೆ ತಿಲಾಂಜಲಿ ಹಾಡಲು ಸಾಧ್ಯ. ಎಲ್ಲ ಮನೆಗಳಲ್ಲಿ ವಚನ ಪುಸ್ತಕಗಳಿರಲಿ. ಅಲ್ಲದೆ ನಿತ್ಯ ವಚನಗಳ ಸಾರ ಅರಿಯುವ ಯತ್ನ ಸಫಲವಾದರೆ ಮನುಷ್ಯನ ಬದುಕು ಕೂಡ ಹಸನ್ಮುಖದ ಸಾರ್ಥಕ ಜೀವನಕ್ಕೆ ಸಾಕ್ಷಿಯಾಗುತ್ತದೆ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಮುಖ್ಯೋಪಾಧ್ಯಾಯ, ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕತ ಶಿಕ್ಷಕ ಎಸ್.ಎಫ್. ಕಠಾರಿ ಮಾತನಾಡಿ, ಮಕ್ಕಳು ನಿತ್ಯ ವಚನ ಪಠನ ಮಾಡುವುದರಿಂದ ಉತ್ತಮ ಸಂಸ್ಕಾರ ಪಡೆಯಲು ಸಾಧ್ಯ. ಅತ್ಯಂತ ಸರಳವಾಗಿರುವ ವಚನಗಳು ಎಲ್ಲ ಮಕ್ಕಳಿಗೆ ಸುಲಭವಾಗಿ ಆರ್ಥವೂ ಆಗುವುದರಿಂದ ಉತ್ತಮ ಪರಿಣಾಮ ಬೀರಬಲ್ಲವು. ಮಕ್ಕಳ ಬದುಕು ರೂಪಿಸಲು ವಚನಗಳು ಸಹಕಾರಿ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪುರ ಮಾತನಾಡಿ, ಶಾಲೆ, ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಸಂಯೋಜಿಸುವ ಮೂಲಕ ಶಾಲಾ ಹಂತದಲ್ಲಿ ವಚನಗಳ ಪರಿಚಯಕ್ಕೆ ಪರಿಶ್ರಮಿಸಬೇಕಾಗಿದೆ. ಇಂದಿನ ಮಕ್ಕಳು ಯುವಕರಿಗೆ ವಚನಗಳ ಪರಿಚಯ ಅಗತ್ಯವಾಗಿದೆ ಎಂದರು.ಗ್ರಾಪಂ ಸದಸ್ಯ ಭರಮಗೌಡ ಚನ್ನಗೌಡರ, ಶಾಲಾ ಆಭಿವೃದ್ಧಿ ಸಮಿತಿ ಸದಸ್ಯ ಶಿವಪ್ಪ ಕುರುಡಿ, ಶಿಕ್ಷಕಿ ಆಶ್ವಿನಿ ಕುರುಡಿ ಪಾಲ್ಗೊಂಡಿದ್ದರು. ವಚನ ವಾಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ರೋಹಿತ ತಳವಾರ, ದ್ವಿತೀಯ ಸ್ಥಾನ ಪಡೆದ ಸಮರ್ಥ ಜಾಡರ, ತೃತೀಯ ಸ್ಥಾನ ಪಡೆದ ಯುವರಾಜ ಲಾಂಡಿಗೇರ ಅವರನ್ನು ಸನ್ಮಾನಿಸಿ, ಬಹುಮಾನ ವಿತರಿಸಲಾಯಿತು.