ಸಾರಾಂಶ
-ಸುರಪುರ: ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಭೆ
----ಕನ್ನಡಪ್ರಭ ವಾರ್ತೆ ಸುರಪುರ
ಕಾಂಗ್ರೆಸ್ ಪಕ್ಷ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ, ಗೃಹ ಜ್ಯೋತಿ ಯೋಜನೆ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ, ಯುವ ನಿಧಿ ಯೋಜನೆ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಬೀರಲಿಂಗ ಬಾದ್ಯಾಪುರ ಹೇಳಿದರು.ನಗರದ ತಾ.ಪಂ ಕಚೇರಿಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಭೆಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಲ್ಲಿ ತಾಲೂಕಿನಲ್ಲಿ 56,143 ಫಲಾನುಭವಿಗಳಿದ್ದು, ಪ್ರತಿಯೊಬ್ಬರೂ ಮಾಸಿಕ 2000 ತಲುಪಿಸಬೇಕು. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಬಗ್ಗೆ ವ್ಯಾಪಕ ಪ್ರಚಾರ ಮತ್ತು ಮಾಹಿತಿ ನೀಡಬೇಕು ಎಂದರು.
ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ನಿಲ್ದಾಣದಲ್ಲಿದ್ದಾಗ ಬಸ್ ನಿಲ್ಲಿಸುವುದಿಲ್ಲ ಎನ್ನುವ ದೂರುಗಳಿವೆ. ಇದು ಮುಂದುವರಿದರೆ ಶಾಸಕರ ಗಮನಕ್ಕೆ ತರಲಾಗುತ್ತದೆ ಎಂದು ಕೆಎಸ್ಸಾರ್ಟಿಸಿ ಘಟಕ ವ್ಯವಸ್ಥಾಪಕರಿಗೆ ಎಚ್ಚರಿಕೆ ನೀಡಿದರು.ಅನ್ನಭಾಗ್ಯ ಯೋಜನೆ ಕಡುಬಡವರಿಗೆ ತಲುಪಬೇಕು. ನ್ಯಾಯಬೆಲೆ ಅಂಗಡಿಗಳು ಸಮಯಕ್ಕೆ ಸರಿಯಾಗಿ ತೆಗೆಯಬೇಕು. ಬಯೋಮೆಟ್ರಿಕ್ ನೀಡಿದ ತಕ್ಷಣ ರೇಷನ್ ನೀಡಬೇಕು. ಇದರ ಬಗ್ಗೆ ದೂರು ಬಂದರೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಪ್ರತಿ ತಿಂಗಳು ದಿನಾಂಕ ಹಾಗೂ ವೇಳೆಯನ್ನು ನಿಗದಿಪಡಿಸಿ ವಿತರಿಸಬೇಕು ಎಂದರು.
ತಾ.ಪ ಸಿಇಒ ಬಸವರಾಜ ಸಜ್ಜನ್ ಮಾತನಾಡಿ, ಗೃಹಜೋತಿ ಯೋಜನೆಯು ಸಾರ್ವಜನಿಕರಿಗೆ ಸಮರ್ಪಕವಾದ ಮಾಹಿತಿಯಿಲ್ಲ. ತಾಲೂಕಿನಾದ್ಯಂತ ವ್ಯಾಪಕ ಪ್ರಚಾರ ಮಾಡಬೇಕು. ಗೃಹಲಕ್ಷ್ಮಿ ಯೋಜನೆಯಡಿ 366 ಫಲಾನುಭವಿಗಳಿಗೆ ಅನುದಾನ ಬಾಕಿಯಿದೆ ಪರಿಶೀಲಿಸಿ ಅನುದಾನ ಪಾತಿಸಲಾಗುವುದು ಎಂದು ತಿಳಿಸಿದರು.ಗ್ಯಾರಂಟಿ ಯೋಜನೆ ಸಮಿತಿ ಸದಸ್ಯ ವಿಜಯಕುಮಾರ್, ವಿಶ್ವ ದೀವಳಗುಡ್ಡ, ಪಾರಪ್ಪ ದೇವತ್ಕಲ್, ವೆಂಕಟೇಶ್, ಶೇಖಪ್ಪ ಬಡಿಗೇರ್, ಕಿರಣ್ ಕುಮಾರ್, ಖಾದರ್ ನಗನೂರು, ಪರಮಣ್ಣ ಕಕ್ಕೇರಾ, ಪರಶುರಾಮ ಚಿಂಚೋಳಿ, ಭೀಮಣ್ಣ ದೊಡ್ಡಮನಿ, ಕೆಎಸ್‌ಆರ್‌ಟಸಿ ಘಟಕ ವ್ಯವಸ್ಥಾಪಕ ಭೀಮಸಿಂಗ್ ರಾಠೋಡ, ಸಿಡಿಪಿಒ ಅನಿಲ್‌ಕುಮಾರ್ ಕಾಂಬ್ಳೆ, ಆಹಾರ ಇಲಾಖೆ ಚಿದಾನಂದ, ಜೆಸ್ಕಾಂ ಅಧಿಕಾರಿಗಳು , ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ತಾ.ಪಂ. ಸಿಬ್ಬಂದಿ ಇದ್ದರು.
----ಫೋಟೊ: ಸುರಪುರ ನಗರದ ತಾಲೂಕು ಪಂಚಾಯತ್ ಕಚೇರಿಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಭೆ ನಡೆಯಿತು.
6ವೈಡಿಆರ್9