ಅರ್ಹ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸಿ: ಡಾ.ಕುಮಾರ

| Published : Mar 25 2025, 12:48 AM IST

ಸಾರಾಂಶ

ಸರ್ಕಾರದಿಂದ ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡಲಾಗುವ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರದಿಂದ ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡಲಾಗುವ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಸೂಚಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಉದ್ಯೋಗಿನಿ, ಚೇತನ, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ, ಹಾಗೂ ಧನಶ್ರೀ ಯೋಜನೆಗಳಲ್ಲಿ ಆರ್ಥಿಕ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಆಯ್ಕೆಗಾಗಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಆಯ್ಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉದ್ಯೋಗಿನಿ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರು, ಎಚ್‌ಐವಿ ಸೋಂಕಿತರು ಹಾಗೂ ಧಮನಿತ ಮಹಿಳೆಯರಿಗೆ ತಲಾ ೩ ರಂತೆ ಒಟ್ಟು ೯ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ಚೇತನ ಯೋಜನೆಯಡಿ ಧಮನಿತ ಮಹಿಳೆಯರು (ಲೈಂಗಿಕ ವೃತ್ತಿ ನಿರತ ಮಹಿಳೆಯರು) ಈಗಿರುವ ವೃತ್ತಿಯಿಂದ ಹೊರಬಂದು ಆರ್ಥಿಕ ಅಭಿವೃದ್ಧಿ ಹೊಂದಲು ಪ್ರೇರೇಪಿಸಲು ಜಿಲ್ಲೆಯಲ್ಲಿ ೯ ಜನರಿಗೆ ತಲಾ ೩೦ ಸಾವಿರ ರು. ಧನಸಹಾಯ ನೀಡಲು ಈ ಯೋಜನೆ ರೂಪಿಸಲಾಗಿದ್ದು, ೨೩ ಜನ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು,

ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರು ಗೌರವಾನ್ವಿತ ಜೀವನ ನಡೆಸಲು ಜಿಲ್ಲೆಯಲ್ಲಿ ೩೦ ಜನರಿಗೆ ತಲಾ ೩೦ ಸಾವಿರ ರು. ನೀಡಲಾಗುತ್ತದೆ. ಈಗಾಗಲೇ ೧೯ ಜನ ಅರ್ಜಿ ಸಲ್ಲಿಸಿದ್ದರೆ, ಧನಶ್ರೀ ಯೋಜನೆಯಡಿ ಎಚ್‌ಐವಿ ಸೋಂಕಿತ ಮಹಿಳೆಯರು ಸ್ವ- ಉದ್ಯೋಗ ಕೈಗೊಂಡು ಆರ್ಥಿಕ ಅಭಿವೃದ್ಧಿ ಕಾಣಲು ತಲಾ ೩೦ ಸಾವಿರ ರು.ನಂತೆ ೧೪ ಮಂದಿಗೆ ಯೋಜನೆ ತಲುಪಿಸುವ ಗುರಿ ಹೊಂದಲಾಗಿದೆ ಎಂದರು.

ಈ ಎಲ್ಲ ಯೋಜನೆಗಳು ಫಲಾನುಭವಿಗಳಿಗೆ ತಲುಪಿಯೂ ಅವರು ಆರ್ಥಿಕ ಅಭಿವೃದ್ಧಿ ಹೊಂದದಿದ್ದರೆ ಯೋಜನೆಗಳು ವಿಫಲವಾದಂತೆ. ಹಿಂದಿನ ೩ ವರ್ಷಗಳಿಂದ ಯೋಜಯಡಿ ಪ್ರೋತ್ಸಾಹ ಧನ ಪಡೆದಿರುವವರು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂಬುದರ ಕುರಿತು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಿಇಒ ಕೆ.ಆರ್. ನಂದಿನಿ ಮಾತನಾಡಿ, ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹೆಚ್ಚಾಗಬೇಕು, ಸ್ಥಳೀಯವಾಗಿ ಯಾವ ವ್ಯಾಪಾರದಿಂದ ಆರ್ಥಿಕ ಸ್ಥಿರತೆ ಕಾಣಬಹುದು, ವೈಜ್ಞಾನಿಕವಾಗಿ ಹೇಗೆ ಉದ್ಯಮದಲ್ಲಿ ಯಶಸ್ಸು ಕಾಣಬಹುದು ಎಂಬುದರ ಕುರಿತು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕಾರ್ಯಾಗಾರ ನಡೆಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಮೂರ್ತಿ, ನಗರಸಭೆ ಪೌರಾಯುಕ್ತೆ ಪಂಪಾಶ್ರೀ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗೇಶ್ ಇತರರಿದ್ದರು.