ಸರ್ಕಾರಿ ಕೆಲಸ ಕಾರ್ಯಗಳಿಗಾಗಿ ಗ್ರಾಮೀಣ ಭಾಗದ ಜನರು ತಾಲೂಕು ಕೇಂದ್ರಕ್ಕೆ ಅಲೆಯುವುದನ್ನು ತಪ್ಪಿಸಿ ಜನರ ಮನೆ ಬಾಗಿಲಿಗೆ ಆಡಳಿತ ಸೇವೆ ಒದಗಿಸುವುದು ಪ್ರಜಾಸೇವಾ ಆಂದೋಲನದ ಪ್ರಮುಖ ಧ್ಯೇಯವಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ರಾಣಿಬೆನ್ನೂರು: ಸರ್ಕಾರಿ ಕೆಲಸ ಕಾರ್ಯಗಳಿಗಾಗಿ ಗ್ರಾಮೀಣ ಭಾಗದ ಜನರು ತಾಲೂಕು ಕೇಂದ್ರಕ್ಕೆ ಅಲೆಯುವುದನ್ನು ತಪ್ಪಿಸಿ ಜನರ ಮನೆ ಬಾಗಿಲಿಗೆ ಆಡಳಿತ ಸೇವೆ ಒದಗಿಸುವುದು ಪ್ರಜಾಸೇವಾ ಆಂದೋಲನದ ಪ್ರಮುಖ ಧ್ಯೇಯವಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ತಾಲೂಕಿನ ಚಿಕ್ಕಕುರವತ್ತಿ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲಾ ಇಲಾಖೆ ಅಧಿಕಾರಿಗಳು ತಪ್ಪದೇ ಜನಸೇವಾ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಜನರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಕಟ್ಟಿಬದ್ಧರಾಗಿರಬೇಕು ಹಾಗೂ ಅವುಗಳನ್ನು ತ್ವರಿತಗತಿಯಲ್ಲಿ ಬಗೆ ಹರಿಸಬೇಕು. ಬಡವರ ಸಂಕಷ್ಟಕ್ಕೆ ನೆರವಾಗುವುದು ರಾಜ್ಯ ಸರ್ಕಾರದ ಗುರಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗಿದೆ. ಗೃಹಲಕ್ಷ್ಮಿ, ಶಕ್ತಿ ಯೋಜನೆ ಮುಂತಾದವುಗಳಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಉನ್ನತ ವ್ಯಾಸಂಗದ ಪ್ರವೇಶದಲ್ಲಿ ವಿಶೇಷ ಮೀಸಲಾತಿ ಕಲ್ಪಿಸಿದೆ ಎಂದರು.

ನಮ್ಮ ಸಮಾಜದಲ್ಲಿ ದೇವಸ್ಥಾನಗಳಿಂದ ಧರ್ಮ, ನ್ಯಾಯ, ನೀತಿ ಉಳಿದಿದೆ. ನಾನು ಶಾಸಕನಾದ ಪ್ರಾರಂಭದ ಮೂರು ವರ್ಷಗಳಲ್ಲಿ ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರಕ್ಕಾಗಿ ನನ್ನ ಅನುದಾನ ನೀಡಿರುವೆ. ಮುಂದಿನ ಎರಡು ವರ್ಷಗಳಲ್ಲಿ ನನ್ನ ಅನುದಾನವನ್ನು ದೇವಸ್ಥಾನಗಳ ಅಭಿವೃದ್ಧಿಗೆ ನೀಡುವೆ ಎಂದರು.

ತಹಸೀಲ್ದಾರ್ ಆರ್.ಎಚ್. ಭಾಗವಾನ, ತಾಪಂ ಇಒ ಡಾ. ವೆಂಕಟೇಶ ಸಣ್ಣಬಿದರಿ, ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ., ಪಿಐ ನಾಗಯ್ಯ ಕಾಡದೇವರಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ, ಲೋಕೋಪಯೋಗಿ ಇಲಾಖೆ ಅಧಿಕಾರಿ ಜಗದೀಶ ಕೋಳಿವಾಡ, ಹೆಸ್ಕಾಂ ಅಧಿಕಾರಿ ನೀರಲಗಿ, ಯುಟಿಪಿ ಅಧಿಕಾರಿ ಆನಂದ ಕುಲಕರ್ಣಿ, ಕಂದಾಯ ವೃತ್ತ ನಿರೀಕ್ಷಕ ವಾಗೀಶ ಮಳೆಮಠ, ಚಂದ್ರಣ್ಣ ಬೇಡರ, ಬಸವರಾಜ ಹಲಗೇರಿ, ವಿರುಪಾಕ್ಷಪ್ಪ, ಇಕ್ಬಾಲ್‌ಸಾಬ ರಾಣಿಬೆನ್ನೂರ ಮತ್ತಿತರರಿದ್ದರು.

ಗ್ರಾಮದಲ್ಲಿ ಜರುಗಿದ ಜನಸೇವಾ ಆಂದೋಲನದಲ್ಲಿ ಪಂಚಾಯತ್ ರಾಜ್ 90, ಗ್ರಾಮೀಣ ನೀರು ಸರಬರಾಜು 5, ಕಂದಾಯ ಇಲಾಖೆ 11, ತುಂಗಾ ಮೇಲ್ದಂಡೆ ಯೋಜನೆ 1, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 2, ಭಾರತ್ ಸಂಚಾರ ನಿಗಮ ಲಿಮಿಟ್1, ಶಿಕ್ಷಣ 2, ಕರ್ನಾಟಕ ವಿದ್ಯುತ್ ನಿಗಮ 6, ಆಹಾರ 2, ಮಕ್ಕಳ ಅಭಿವೃದ್ಧಿ ಯೋಜನೆ 2 ಹಾಗೂ ಶಾಸಕರಿಗೆ ಸಲ್ಲಿಸಿದ 5 ಸೇರಿದಂತೆ ಒಟ್ಟು 127 ಅರ್ಜಿಗಳು ಸಲ್ಲಿಕೆಯಾಗಿವೆ.

ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ಎಲ್ಲ ಅರ್ಜಿಗಳನ್ನು ದಾಖಲು ಮಾಡಲಾಯಿತು.

ಬೆಳಗ್ಗೆ 11ಕ್ಕೆ ಕಾರ್ಯಕ್ರಮ ನಿಗದಿಯಾಗಿದ್ದು ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ಉಪಸ್ಥಿತರಿದ್ದರು. ಆದರೆ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಾಗಿದ್ದ ಶಾಸಕರು ಮಧ್ಯಾಹ್ನ 12.50ಕ್ಕೆ ಸಭೆಗೆ ಆಗಮಿಸಿದರು.

ಗೃಹ ಲಕ್ಷ್ಮಿ ಹಣ ನಿಯಮಿತವಾಗಿ ಬರುತ್ತಿಲ್ಲ ಎಂದು ಮಹಿಳೆಯೊಬ್ಬರು ಆರೋಪ ಮಾಡಿದರು.