ಜನಪದ ಕಲೆ, ಸಾಹಿತ್ಯ ಯುವಜನರ ತಲುಪಿಸಿ: ಪರಮೇಶ್ವರಪ್ಪ ಕತ್ತಿಗೆ

| Published : Apr 10 2025, 01:02 AM IST

ಸಾರಾಂಶ

ಇಂದಿನ ಯುವಜನತೆ ತಂತ್ರಜ್ಞಾನ ಆಧಾರಿತ ಸಂಸ್ಕೃತಿಗೆ ಮಾರುಹೋಗಿ ನಮ್ಮ ಮೂಲ ಸಂಸ್ಕೃತಿಯ ಬೇರು ಜನಪದವನ್ನು ಮರೆತು ಹೋಗಿದ್ದಾರೆ. ಎಷ್ಟೋ ಜನರಿಗೆ ಇದರ ಬಗ್ಗೆ ಗೊತ್ತೇ ಇಲ್ಲ ಎಂದು ತತ್ವಪದ ಗಾಯಕ ಪರಮೇಶ್ವರಪ್ಪ ಕತ್ತಿಗೆ ಅಭಿಪ್ರಾಯಪಟ್ಟಿದ್ದಾರೆ.

- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಉತ್ಸವ-2025 ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಇಂದಿನ ಯುವಜನತೆ ತಂತ್ರಜ್ಞಾನ ಆಧಾರಿತ ಸಂಸ್ಕೃತಿಗೆ ಮಾರುಹೋಗಿ ನಮ್ಮ ಮೂಲ ಸಂಸ್ಕೃತಿಯ ಬೇರು ಜನಪದವನ್ನು ಮರೆತು ಹೋಗಿದ್ದಾರೆ. ಎಷ್ಟೋ ಜನರಿಗೆ ಇದರ ಬಗ್ಗೆ ಗೊತ್ತೇ ಇಲ್ಲ ಎಂದು ತತ್ವಪದ ಗಾಯಕ ಪರಮೇಶ್ವರಪ್ಪ ಕತ್ತಿಗೆ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಜಾನಪದ ಉತ್ಸವ-2025 ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾಲೇಜು ಶಿಕ್ಷಣ ಇಲಾಖೆ ಮಹತ್ವದ ಆದೇಶದೊಂದಿಗೆ ಈ ಜನಪದ ಉಳವಿಕೆಯ ಕಾರ್ಯಕ್ರಮ ರಾಜ್ಯಾದಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಆಚರಿಸುವ ಮೂಲಕ ಗ್ರಾಮೀಣ ಸೊಗಡನ್ನು ಉಳಿಸುವ ಪ್ರಯತ್ನ ಸ್ವಾಗತಾರ್ಹ ಎಂದು ತಿಳಿಸಿದರು.

ಇಂದಿನ ಆಧುನಿಕ ಸಂಸ್ಕೃತಿಯ ನಡುವೆ ನಮ್ಮ ಮೂಲ ಸಂಸ್ಕೃತಿ ಜನಪದವು ಸರಿದುಹೋಗುತ್ತಿದೆ. ಇದು ಉಳಿದರೆ ನಮ್ಮ ಸಂಸ್ಕೃತಿ ಉಳಿದಂತೆ. ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ಉಳಿಸುವ ಕಾರ್ಯದಲ್ಲಿ ಎಲ್ಲರೂ ಭಾಗಿಯಾದಾಗ ಅವು ಉಳಿಯುತ್ತವೆ, ಬೆಳೆಯುತ್ತವೆ. ಮುಂದಿನ ಪೀಳಿಗೆಗೆ ಅದು ಇತಿಹಾಸವಾಗುತ್ತದೆ ಎಂದು ಹೇಳಿದರು.

ಇಂತಹ ಸಂಸ್ಕೃತಿಯು ಪ್ರತಿವರ್ಷ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಆಚರಣೆಯಾಗಲಿ. ಇದರಿಂದ ವಿದ್ಯಾರ್ಥಿಗಳಲ್ಲಿ ನಮ್ಮ ಗ್ರಾಮೀಣ ಜೀವನ, ಅವರ ಬದುಕು, ಎಲ್ಲವೂ ತಿಳಿಸಿದಂತಾಗುತ್ತದೆ ಎಂದರು.

ಆರಂಭದಲ್ಲಿ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಜನಪದ ಸಂಸ್ಕೃತಿಗಳಾದ ಬಂಜಾರ, ತುಳು, ಕೊಡವ ಸಂಸ್ಕೃತಿಗಳ ಆಚರಣೆ ಕಾಲೇಜಿನಲ್ಲಿ ವಿಜೃಂಭಿಸಿತು. ಎಲ್ಲ ಸಂಸ್ಕೃತಿಗಳನ್ನು ಬಿಂಬಿಸುವ ನೃತ್ಯಗಳು ಕಾಲೇಜಿನಲ್ಲಿ ಪ್ರದರ್ಶನಗೊಂಡವು. ಕಂಸಾಳೆ, ವೀರಗಾಸೆ, ನಂದಿಕೋಲು ಕುಣಿತಗಳಲ್ಲಿ ವಿದ್ಯಾರ್ಥಿಗಳು ಉತ್ಸುಕರಾಗಿ ಭಾಗವಹಿಸಿದ್ದರು. ಜೊತೆಗೆ ದೇಸಿ ಆಹಾರ ಮೇಳ ಸಹ ಆಯೋಜಿಸಲಾಗಿತ್ತು.

ಪ್ರಾಚಾರ್ಯ ಪ್ರೊ. ಬಿ.ಸಿ. ತಹಸೀಲ್ದಾರ್ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿಗಳು ದೇಶಿ ಉಡುಗೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

- - -

(ಕೋಟ್)ವಿದ್ಯಾರ್ಥಿಗಳಲ್ಲಿ ಕೌಶಲ್ಯಗಳು ಇವೆ. ಆದರೆ ಅವುಗಳನ್ನು ಪ್ರಸ್ತುತಪಡಿಸಲು ಇಂತಹ ವೇದಿಕೆಗಳು ನಿರ್ಮಾಣವಾಗುವುದು ಮುಖ್ಯ. ಇಂದಿನ ದಿನಗಳಲ್ಲಿ ಕಾಲೇಜಿನಲ್ಲಿಯೇ ಯುವ ಸೌರಭ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳು ಇರತಕ್ಕಂತ ಕೌಶಲ್ಯಗಳನ್ನು ಹೊರತೆಗೆಯುವ ಪ್ರಯತ್ನ ಇಲಾಖೆಯಿಂದ ಮಾಡಲಾಗುವುದು

ರವಿಚಂದ್ರ, ಸಹಾಯಕ ನಿರ್ದೇಶಕ, ಕನ್ನಡ ಸಂಸ್ಕೃತಿ ಇಲಾಖೆ

- - -

-9ಕೆಡಿವಿಜಿ49: ದಾವಣಗೆರೆಯ ಸರ್ಕಾರಿ ಪ್ರದ ಕಾಲೇಜಿನಲ್ಲಿಂದು ನಡೆದ ಜಾನಪದ ಉತ್ಸವ-2025 ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಕಾರ್ಯಕ್ರಮವನ್ನು ಪರಮೇಶ್ವರಪ್ಪ ಕತ್ತಿಗೆ ಉದ್ಘಾಟಿಸಿದರು. -9ಕೆಡಿವಿಜಿ50: ದಾವಣಗೆರೆಯ ಸರ್ಕಾರಿ ಪ್ರದ ಕಾಲೇಜಿನಲ್ಲಿ ನಡೆದ ಜಾನಪದ ಉತ್ಸವದಲ್ಲಿ ಭಾಗವಹಿಸಿದ ಪ್ರಾಚಾರ್ಯರು , ಗಣ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು.