ಸಾರಾಂಶ
ಬಳ್ಳಾರಿ : ಬಾಣಂತಿಯರ ಸಾವಿನ ಪ್ರಕರಣದ ಬಳಿಕ ಇಲ್ಲಿನ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗಳ ಪ್ರಮಾಣದಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ. ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗೆ ಬೆಚ್ಚಿ ಬಿದ್ದು ಸುರಕ್ಷಿತ ಹೆರಿಗೆಗೆ ಖಾಸಗಿ ಆಸ್ಪತ್ರೆಗಳ ಕಡೆ ಜನ ಮುಖ ಮಾಡಿದ್ದಾರೆ.
ಜಿಲ್ಲಾಸ್ಪತ್ರೆಯ ಮುಖ್ಯಸ್ಥರೇ ಹೇಳುವಂತೆ ಬಾಣಂತಿಯರ ಸರಣಿ ಸಾವುಗಳ ಬಳಿಕ ಹೆರಿಗೆಗಳ ಪ್ರಮಾಣದಲ್ಲಿ ಶೇ.50ರಷ್ಟು ಕುಸಿತ ಕಂಡಿದೆ. ಜಿಲ್ಲಾಸ್ಪತ್ರೆಯಲ್ಲಿ ಸರಾಸರಿ ತಿಂಗಳಿಗೆ 550ಕ್ಕೂ ಹೆಚ್ಚು ಹೆರಿಗೆಗಳಾಗುತ್ತವೆ. ಆದರೆ, ಬಾಣಂತಿಯರ ಸಾವಿನ ಪ್ರಕರಣದ ಬಳಿಕ ಹೆರಿಗೆಗಳ ಸಂಖ್ಯೆ ಮಾಸಿಕ 300 ಸಹ ದಾಟುತ್ತಿಲ್ಲ. ಕಳೆದ ಸೆಪ್ಟಂಬರ್‌ನಲ್ಲಿ 585, ಅಕ್ಟೋಬರ್‌ನಲ್ಲಿ 577 ಹೆರಿಗೆಗಳಾಗಿವೆ. ನವೆಂಬರ್ ತಿಂಗಳಲ್ಲಿ ಬರೀ 289 ಹೆರಿಗೆಗಳಾಗಿವೆ ಎಂದು ಜಿಲ್ಲಾಸ್ಪತ್ರೆಯ ಅಂಕಿ-ಅಂಶಗಳೇ ದೃಢಪಡಿಸುತ್ತಿವೆ. ಡಿಸೆಂಬರ ತಿಂಗಳಲ್ಲಿ 14ರವರೆಗೆ 75 ಹೆರಿಗೆ ಆಗಿದೆ.
ಗುಣಮಟ್ಟದ ಚಿಕಿತ್ಸೆಗೆ ಹೆಸರಾಗಿತ್ತು:
ನಗರದ ಸರ್ಕಾರಿ ಜಿಲ್ಲಾಸ್ಪತ್ರೆ ಗುಣಮಟ್ಟದ ಚಿಕಿತ್ಸೆಗೆ ಹೆಸರಾಗಿತ್ತು. ಇಲ್ಲಿನ ವೈದ್ಯಕೀಯ ಸಿಬ್ಬಂದಿ ಅತ್ಯುತ್ತಮ ಸೇವೆ ನೀಡುತ್ತಾರೆ ಎಂಬ ಕಾರಣಕ್ಕಾಗಿಯೇ ನೆರೆಯ ಆಂಧ್ರದಿಂದಲೂ ಜಿಲ್ಲಾಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಐಎಎಸ್, ಐಪಿಎಸ್ ಅಧಿಕಾರಿಗಳ ಪತ್ನಿಯರು, ನ್ಯಾಯಾಧೀಶರು, ಅನೇಕ ಜನಪ್ರತಿನಿಧಿಗಳ ಪತ್ನಿಯರು ಸಹ ಇಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುವುದರಿಂದ ಜಿಲ್ಲಾಸ್ಪತ್ರೆ ಹೆಚ್ಚು ಗಮನ ಸೆಳೆದಿತ್ತು. ಈ ಆಸ್ಪತ್ರೆಯಲ್ಲಿರುವ ವೈದ್ಯಕೀಯ ಚಿಕಿತ್ಸೆಯಿಂದಾಗಿಯೇ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಜಿಲ್ಲಾಸ್ಪತ್ರೆಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಆದರೆ, ಬಾಣಂತಿಯರ ಸಾವಿನ ಪ್ರಕರಣದಿಂದ ಬೆಚ್ಚಿ ಬಿದ್ದಿರುವ ಜನರು, ಸುರಕ್ಷಿತ ಹೆರಿಗೆಯ ಬಗ್ಗೆ ಸಂಶಯ ವ್ಯಕ್ತಪಡಿಸುವಂತಾಗಿದೆ.
ವೈದ್ಯರೂ ಬೆಚ್ಚಿಬಿದ್ದಿದ್ದಾರೆ:
ಬಾಣಂತಿಯರ ಸಾವಿನ ಪ್ರಕರಣದಿಂದ ಸಾರ್ವಜನಿಕರು ಅಷ್ಟೇ ಅಲ್ಲ; ಜಿಲ್ಲಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ವೈದ್ಯರೂ ಬೆಚ್ಚಿ ಬಿದ್ದಿದ್ದಾರೆ. ಈವರೆಗೆ ಗುಣಮಟ್ಟದ ಸೇವೆ ನೀಡುತ್ತಾ ಬರಲಾಗಿದೆ. ಆದರೆ, ಬಾಣಂತಿಯರ ಸಾವಿನ ಪ್ರಕರಣದಿಂದ ಇಡೀ ಆಸ್ಪತ್ರೆಗೆ ಕೆಟ್ಟ ಹೆಸರು ಬರುವಂತಾಯಿತು. ಪ್ರಕರಣದ ಬಳಿಕ ವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗುತ್ತಿದ್ದು, ಆತಂಕದಿಂದಲೇ ಕಾರ್ಯ ನಿರ್ವಹಿಸುವಂತಾಗಿದೆ ಎಂದು ಕೆಲ ವೈದ್ಯರು ಬೇಸರ ವ್ಯಕ್ತಪಡಿಸುತ್ತಾರೆ.
ಇದೇ ವೇಳೆ, ನಗರದ ಖಾಸಗಿ ಆಸ್ಪತ್ರೆಗಳು ಹೌಸ್‌ಫುಲ್ ಆಗುತ್ತಿವೆ. ಖಾಸಗಿ ಆಸ್ಪತ್ರೆಗಳಿಗೆ ನಿಯಂತ್ರಣವಿಲ್ಲದಂತಾಗಿದ್ದು, ಒಂದು ಹೆರಿಗೆಗೆ ₹60ರಿಂದ ₹70 ಸಾವಿರವರೆಗೆ ಖರ್ಚಾಗುತ್ತಿದೆ.
ಬಾಣಂತಿಯರ ಸಾವಿನ ಪ್ರಕರಣದ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಪ್ರಮಾಣ ಸಾಕಷ್ಟು ಕುಸಿದಿರುವುದು ನಿಜ. ಆದರೆ, ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ವ್ಯವಸ್ಥೆಯಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ.
- ಡಾ.ಬಸಾರೆಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕ, ಬಳ್ಳಾರಿ ಜಿಲ್ಲಾಸ್ಪತ್ರೆ.