ಸಾರಾಂಶ
ವಿದ್ಯಾರ್ಥಿನಿಯರಿಗೆ ದರ್ಪ, ಅನುಚಿತ ವರ್ತನೆ ತೋರಿದ ಮಹಿಳಾ ಕಂಡಕ್ಟರ್ ಮೇಲೆ ಶಿಸ್ತು ಕ್ರಮ ಜರುಗಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಮನವಿ ಸಲ್ಲಿಸಿದರು.
ರಾಣಿಬೆನ್ನೂರು: ನಗರದ ಹಲಗೇರಿ ರಸ್ತೆಯ ಎಸ್.ಆರ್.ಕೆ. ಬಡಾವಣೆ ಹತ್ತಿರದ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಕಡ್ಡಾಯವಾಗಿ ಬಸ್ ನಿಲ್ಲಿಸಲು ಹಾಗೂ ವಿದ್ಯಾರ್ಥಿನಿಯರಿಗೆ ದರ್ಪ, ಅನುಚಿತ ವರ್ತನೆ ತೋರಿದ ಮಹಿಳಾ ಕಂಡಕ್ಟರ್ ಮೇಲೆ ಶಿಸ್ತು ಕ್ರಮ ಜರುಗಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಶುಕ್ರವಾರ ಸಾರಿಗೆ ನಿಯಂತ್ರಣಾಧಿಕಾರಿ ಉಮೇಶ್ ನಾಯಕ ಅವರಿಗೆ ಮನವಿ ಸಲ್ಲಿಸಿದರು.
ನಗರದ ಹೊರವಲಯದಲ್ಲಿ ಬಾಲಕಿಯರ ವಸತಿ ನಿಲಯವಿದ್ದು, ೧೫೦ಕ್ಕೂ ಅಧಿಕ ವಿದ್ಯಾರ್ಥಿನಿಯರು ನಗರದ ವಿವಿಧ ಕಾಲೇಜುಗಳಿಗೆ ಪ್ರತಿನಿತ್ಯ ತೆರಳುತ್ತಾರೆ. ಅಧಿಕೃತವಾಗಿ ಕೋರಿಕೆ ನಿಲುಗಡೆಗೆ ಅವಕಾಶವಿದ್ದು, ವಿದ್ಯಾರ್ಥಿನಿಯರನ್ನು ನಗರದ ಕೇಂದ್ರ ಬಸ್ ನಿಲ್ದಾಣದಿಂದ ಹತ್ತಿಸಿಕೊಂಡು ವಸತಿ ನಿಲಯಕ್ಕೆ ನಿಲ್ಲಿಸದೆ ೮ ಕಿಮೀ ದೂರದ ಹಲಗೇರಿ ಗ್ರಾಮಕ್ಕೆ ಬಿಡುತ್ತಾರೆ. ಇಲ್ಲವೇ ನಡು ರಸ್ತೆಯಲ್ಲಿ ಇಳಿಸಿ ಹೋಗುತ್ತಾರೆ. ಈ ರೀತಿಯ ಅಮಾನವೀಯವಾಗಿ ವಿದ್ಯಾರ್ಥಿನಿಯರನ್ನು ಕೆಲ ಕಂಡಕ್ಟರ್ ಹಾಗೂ ಡ್ರೈವರ್‌ಗಳು ನಡೆಸಿಕೊಳ್ಳುವ ರೀತಿಯನ್ನು ಎಸ್‌ಎಫ್‌ಐ ಖಂಡಿಸುತ್ತದೆ. ವಾಹನಕ್ಕೆ ಅಡ್ಡಗಟ್ಟಿ ಬಸ್ ನಿಲ್ಲಿಸಿ ಹತ್ತಿದ ವಿದ್ಯಾರ್ಥಿನಿಯರಿಗೆ ಮಹಿಳಾ ಕಂಡಕ್ಟರ್ ನಮ್ಮ ಬಸ್ ಮಾತ್ರವೇ ಇರೋದಾ? ಬೇರೆ ಬಸ್‌ಗೆ ಹೋಗಿ ನಮ್ಮ ಬಸ್ ಹತ್ತಬೇಡಿ, ನಿಲ್ಲಿಸಬೇಡಿ. ಇದೆ ಕೊನೆ, ಇನ್ನೊಮ್ಮೆ ಈ ರೀತಿ ನಮ್ಮ ಬಸ್‌ಗೆ ಬಂದರೆ ಸರಿ ಇರುವುದಿಲ್ಲ ಎಂದು ಕೈ ಮಾಡಿ ದರ್ಪ ತೋರಿದಲ್ಲದೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ವಸತಿ ನಿಲಯದ ವಿದ್ಯಾರ್ಥಿನಿಯರು ದೂರಿದ್ದಾರೆ. ಕೂಡಲೇ ಎಲ್ಲ ಬಸ್‌ಗಳು ಕಡ್ಡಾಯವಾಗಿ ನಿಲ್ಲಿಸಲು ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ಶಾಲಾ-ಕಾಲೇಜ್ ವಿದ್ಯಾರ್ಥಿಗಳಿಂದ ಬಸ್ ನಿಲ್ದಾಣ ಬಂದ್ ಮಾಡಲಾಗುವುದು ಎಂದು ಎಚ್ಚರಿಸಲಾಯಿತು.ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್., ಮುಖಂಡರಾದ ನಂದೀಶ್ ಕುರುವತ್ತಿ, ಹಾಲಸ್ವಾಮಿ ಜಿ.ಪಿ., ನಂದೀಶ್ ಅಸ್ವಾಲಿ, ಪುನೀತ್ ಬಣಗಾರ, ವಿದ್ಯಾರ್ಥಿನಿಯರಾದ ಐಶ್ವರ್ಯಾ ಎಸ್.ಎಚ್., ಸಂಗೀತಾ ಎಲ್.ಎಸ್., ಅನುಷ್ ಬಿ.ಕೆ., ನಿವೇದಿತಾ ಬಿ., ಅಶ್ವಿನಿ ಬಿ.ಕೆ., ನಾಗವೇಣಿ ಬಿ., ಶೈಲಾ ಎಂ., ಆರ್. ಅಶ್ವಿನಿ ಸೇರಿದಂತೆ ಇತರರಿದ್ದರು.