ಸಾರಾಂಶ
ಕರ್ಕಶ ಶಬ್ದ ಮಾಡುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಬೈಕ್ ಸವಾರರ ಮೇಲೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಾಗರಿಕರು ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಹೆಚ್ಚುವರಿ ಎಸ್‌ಪಿ ಸಿ. ಗೋಪಾಲ ಅವರಿಗೆ ಮನವಿ ಸಲ್ಲಿಸಿದರು.
ರಾಣಿಬೆನ್ನೂರು:ಕರ್ಕಶ ಶಬ್ದ ಮಾಡುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಬೈಕ್ ಸವಾರರ ಮೇಲೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಾಗರಿಕರು ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಹೆಚ್ಚುವರಿ ಎಸ್‌ಪಿ ಸಿ. ಗೋಪಾಲ ಅವರಿಗೆ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ರವೀಂದ್ರಗೌಡ ಪಾಟೀಲ ಮಾತನಾಡಿ, ನಗರದ ಪ್ರಮುಖ ರಸ್ತೆಗಳ ಅಕ್ಕಪಕ್ಕದಲ್ಲಿ ಹಲವು ಆಸ್ಪತ್ರೆಗಳು, ಶಾಲಾ-ಕಾಲೇಜುಗಳು, ದೇವಸ್ಥಾನಗಳು, ಮಸೀದಿಗಳಿವೆ. ಕೆಲವು ಕಿಡಿಗೇಡಿಗಳು, ಅನಾಗರಿಕ ಯುವಕರು ತಮ್ಮ ಮೋಟರ್ ಸೈಕಲ್‌ನಿಂದ ಕರ್ಕಶವಾದ ಹಾರ್ನ್ ಮಾಡುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದಾರೆ. ಅತಿ ವೇಗವಾಗಿ ಬೈಕ್ ಓಡಿಸುವುದಲ್ಲದೆ ಅದರ ಸೈಲೆನ್ಸರ್ ಪೈಪ್ ತೆಗೆದು ಕರ್ಕಶವಾದ ಶಬ್ದ ಮಾಡುತ್ತ, ಹಾರ್ನ್ ಮಾಡುತ್ತಾ ರೋಗಿಗಳಿಗೆ, ವಿದ್ಯಾರ್ಥಿಗಳಿಗೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ, ನಮಾಜ ಮಾಡುತ್ತಿರುವವರಿಗೆ, ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. ರಾತ್ರಿ ಸಮಯದಲ್ಲಂತೂ ಪ್ರಶಾಂತವಾಗಿ ಜನತೆ ಮಲಗಿ ನಿದ್ರಿಸುತ್ತಿರುವಾಗ ಸೈಲೆನ್ಸರ್ ಪೈಪ್ ತೆಗೆದು ವಿಚಿತ್ರವಾದ ಸೌಂಡ್, ಹಾರ್ನ್ ಮಾಡುತ್ತಾರೆ. ಶಬ್ದಮಾಲಿನ್ಯ ಮತ್ತು ವಾಯುಮಾಲಿನ್ಯ ಮಾಡುತ್ತಾ ಅನಾಗರಿಕರಂತೆ ವರ್ತಿಸುತ್ತಿರುವ ಕಿಡಿಗೇಡಿಗಳಿಗೆ ಕಾನೂನಿನ ಮುಖಾಂತರ ಶಿಕ್ಷೆ ನೀಡಬೇಕು.ಸಿ.ಸಿ. ಕ್ಯಾಮೆರಾ ಇತರ ತಾಂತ್ರಿಕತೆ ಬಳಸಿ, ಯುವ ಪೊಲೀಸ್ ಪಡೆ ರಚಿಸಿ, ಈ ಕಿಡಿಗೇಡಿಗಳನ್ನು ಬೆನ್ನಟ್ಟಿ ಹಿಡಿದು ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಿದರೆ ಮಾತ್ರ ಇಂಥ ಕೃತ್ಯಗಳನ್ನು ತಡೆಗಟ್ಟಲು ಸಾಧ್ಯವಿದೆ. ಬೇಗನೆ ಈ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.
ಶಹರ ಸಿಪಿಐ ಡಾ. ಶಂಕರ್ ಎಸ್.ಕೆ. ಗ್ರಾಮೀಣ ಪಿಐ ಎನ್.ಪ್ರವೀಣಕುಮಾರ, ಕುಮಾರಪಟ್ಟಣಂ ಸಿಪಿಐ ಶಿದ್ದೇಶ್, ಟ್ರಾಫಿಕ್ ಪಿಎಸ್‌ಐ ಪ್ರವೀಣಕುಮಾರ ಪಿ., ರೈತ ಮುಖಂಡರಾದ ಕೃಷ್ಣಮೂರ್ತಿ ಲಮಾಣಿ, ಹನುಮಂತಪ್ಪ ಕಬ್ಬಾರ, ಮಾರುತಿ ಎನ್., ಮಲ್ಲಿಕಾರ್ಜುನ ಅಂಗಡಿ, ಗದಿಗೆಪ್ಪ ಹೊಟ್ಟೆಗೌಡ್ರ ಉಪಸ್ಥಿತರಿದ್ದರು.