ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಕ್ರಮಕ್ಕೆ ಆಗ್ರಹ

| Published : Oct 25 2024, 01:01 AM IST

ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಕ್ರಮಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರಿಗೆ ಶಿಕ್ಷೆ ವಿಧಿಸಬೇಕು. ಕಾಯಿದೆಯನ್ನು ಮೀರಿ ಜಾತಿ/ಸಿಂಧುತ್ವ ಪ್ರಮಾಣಪತ್ರ ನೀಡುವ ದುಸ್ಸಾಹಸಕ್ಕೆ ಕೈ ಹಾಕಿದಲ್ಲಿ ರಾಜ್ಯಾದ್ಯಂತ ಪ್ರತಿಘಟನೆ ಮಾಡುವುದು ಅನಿವಾರ್ಯವಾಗಲಿದೆ.

ಕಾರವಾರ: ಜಿಲ್ಲೆಯಲ್ಲಿ ಪರಿಶಿಷ್ಟರ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದ ಮೀನುಗಾರ ಮೊಗೇರ ಸಮುದಾಯದ ವಿರುದ್ಧ ಕಾನೂನು ಕ್ರಮ ವಹಿಸುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಉತ್ತರ ಕನ್ನಡ ಜಿಲ್ಲಾ ಅನುಸೂಚಿತ ಜಾತಿ/ಬುಡಕಟ್ಟು ಸಾಂವಿಧಾನಿಕ ಹಕ್ಕುಗಳ ರಕ್ಷಣಾ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ಹಿಂದುಳಿದ ಪ್ರವರ್ಗ- ೧ರ ಯಾದಿಯಲ್ಲಿ ಬರುವ ಮೀನುಗಾರ ಮೊಗೇರ ಜಾತಿಯವರು ಅನುಸೂಚಿತ ಜಾತಿ ಪಟ್ಟಿಯ ಕ್ರಮ ಸಂಖ್ಯೆ 78ರಲ್ಲಿ ಮೊಗೇರ ಜಾತಿಯವರೆಂದು ಬಿಂಬಿಸಿ, ಸಕ್ಷಮ ಪ್ರಾಧಿಕಾರದಿಂದ ಸಾವಿರಾರು ಸಂಖ್ಯೆಯಲ್ಲಿ ಅನುಸೂಚಿತ ಜಾತಿ ಪ್ರಮಾಣಪತ್ರ ಪಡೆದು ಭಾರತ ಸಂವಿಧಾನದ ಪರಿಚ್ಛೇದ ೩೪ರಂತೆ ಜಿಲ್ಲೆಯಲ್ಲಿ ದೌರ್ಜನ್ಯಕ್ಕೊಳಗಾದ ಅನುಸೂಚಿತ ಜಾತಿಯವರಿಗೆ ದೊರಕಬೇಕಾದ ಶೈಕ್ಷಣಿಕ ಸೀಟುಗಳನ್ನು, ಉದ್ಯೋಗ, ರಾಜಕೀಯ ಮೀಸಲಾಗಿ ಸೀಟುಗಳನ್ನು ಅನುಭವಿಸುತ್ತಿದ್ದಾರೆ. ನಿರಂತರವಾಗಿ ಜಿಲ್ಲೆಯ ನೈಜ ಪರಿಶಿಷ್ಟರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ರೀತಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರಿಗೆ ಶಿಕ್ಷೆ ವಿಧಿಸಬೇಕು. ಕಾಯಿದೆಯನ್ನು ಮೀರಿ ಜಾತಿ/ಸಿಂಧುತ್ವ ಪ್ರಮಾಣಪತ್ರ ನೀಡುವ ದುಸ್ಸಾಹಸಕ್ಕೆ ಕೈ ಹಾಕಿದಲ್ಲಿ ರಾಜ್ಯಾದ್ಯಂತ ಪ್ರತಿಘಟನೆ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಗೂ ಪೂರ್ವ ನಗರದ ಡಾ. ಅಂಬೇಡ್ಕರ್‌ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದರು. ತುಳಸಿದಾಸ ಪಾವುಸ್ಕರ, ಕಿರಣ ಶಿರೂರು, ಸುಭಾಸ ಕಾನಡೆ, ಎನ್.ಆರ್. ಮುಕ್ರಿ, ಅಶೋಕ ಕೊಂಚಾಡಿ, ವಿಠ್ಠಲ ಕೊಂಚಾಡಿ ಮೊದಲಾದವರು ಇದ್ದರು.ದಾಂಡೇಲಿಯಲ್ಲಿ ಪೋಲಿಯೋ ಜಾಗೃತಿ ರ‍್ಯಾಲಿ

ದಾಂಡೇಲಿ: ದಾಂಡೇಲಿಯ ರೋಟರಿ ಕ್ಲಬ್‌ನಿಂದ ವಿಶ್ವ ಪೋಲಿಯೋ ದಿನಾಚರಣೆ ಪ್ರಯುಕ್ತ ಜಾಗೃತಿ ರ‍್ಯಾಲಿಯು ನಗರದಲ್ಲಿ ಗುರುವಾರ ನಡೆಯಿತು.ಪೋಲಿಯೋ ಮುಕ್ತ ವಿಶ್ವ ನಿರ್ಮಾಣಕ್ಕಾಗಿ ನಡೆದ ರ‍್ಯಾಲಿಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರ‍್ಯಾಲಿಯಲ್ಲಿ ಶಾಲಾ ವಿದ್ಯಾರ್ಥಿಗಳು, ಪೊಲೀಸ್ ಇಲಾಖೆ ಸಿಬ್ಬಂದಿ, ಇನ್ನರ್‌ವೀಲ್ ಕ್ಲಬ್‌ನ ಸದಸ್ಯರು ಪಾಲ್ಗೊಂಡಿದ್ದರು.

ಪೋಲಿಯೋ ಪೀಡಿತರ ನೇತೃತ್ವದಲ್ಲಿ ರ‍್ಯಾಲಿ ನಡೆಯಿತು. ರೋಟರಿ ಕ್ಲಬ್‌ನ ಅಧ್ಯಕ್ಷ ರಾಹುಲ್ ಬಾವಾಜಿ, ಕಾರ್ಯದರ್ಶಿ ಅಶುತೋಷ್ ಕುಮಾರ್ ರೈ, ಕ್ಲಬ್‌ನ ಪ್ರಮುಖರಾದ ಎಸ್.ಜಿ. ಬಿರಾದಾರ್, ಆರ್.ಪಿ. ನಾಯ್ಕ್, ಪಿ.ವಿ. ಹೆಗಡೆ, ಸುಧಾಕರ ಶೆಟ್ಟಿ, ಅನುಪ್ ಮಾಡೋಳ್ಕರ್, ಮಿಥುನ್ ನಾಯಕ್, ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷೆ ಸ್ನೇಹಲ್ ಕಂಬದಕೋಣೆ, ಕಾರ್ಯದರ್ಶಿ ವಿಜಯಲಕ್ಷ್ಮಿ ನಾಯ್ಕವಾಡ, ಕರುಣಾ ಕಂಬದಕೋಣೆ, ಮಧು ಅಂಕೋಲೇಕರ, ಅನುಷಾ ಮಡದೋಳ್ಕರ್, ಪಿಎಸ್‌ಐ ಐ.ಆರ್. ಗಾಡೇಕರ್, ಪಿಎಸ್‌ಐ ಯಲ್ಲಪ್ಪ ಎಸ್., ವೆಂಕಟೇಶ್ ಹರಿಜನ, ಜನ್ನು, ವಿದ್ಯಾರ್ಥಿಗಳು, ಶಿಕ್ಷಕರು ಸಾರ್ವಜನಿಕರು ಭಾಗವಹಿಸಿದ್ದರು.