ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಅಕ್ರಮ ಕೋಚಿಂಗ್ ಸೆಂಟರ್‌ಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಒತ್ತಾಯಿಸಿ ಶಹಾಪುರ ಖಾಸಗಿ ಶಾಲೆಗಳ ಒಕ್ಕೂಟ ಹೋರಾಟ ಸಮಿತಿ ವತಿಯಿಂದ ನಗರದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಅನಿರ್ದಿಷ್ಟ ಧರಣಿ ನಡೆಸಿ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಮತ್ತು ತಹಸೀಲ್ದಾರ್ ಉಮಾಕಾಂತ ಹಳ್ಳೆ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ತಾಲೂಕಿನಲ್ಲಿರುವ ಅನೇಕ ಅನಧಿಕೃತ ಕೋಚಿಂಗ್ ಸೆಂಟರ್‌ಗಳು ಸರ್ಕಾರದಿಂದ ಮಾನ್ಯತೆ ಪಡೆಯದೆ, ಶಿಕ್ಷಣ ಇಲಾಖೆಯ ನಿಯಮಗಳನ್ನೂ ಗಾಳಿಗೆ ತೂರಿ ರಾಜಾರೋಷವಾಗಿ ನಾಯಿಕೊಡೆಯಂತೆ ತಲೆ ಎತ್ತಿವೆ. ಇದಕ್ಕೆ ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳ ಕುಮ್ಮಕ್ಕು ಕಾರಣ ಎಂದು ಒಕ್ಕೂಟ ಆರೋಪಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಆರ್.ಚನ್ನಬಸ್ಸು ವನದುರ್ಗ, ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದೆ ತಾಲೂಕಿನಲ್ಲಿ ಅನಧಿಕೃತವಾಗಿ ಕೋಚಿಂಗ್ ಸೆಂಟರ್‌ಗಳು ರಾಜಾರೋಷವಾಗಿ ನಡೆಯುತ್ತಿವೆ. ನವೋದಯ, ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ, ಆದರ್ಶ, ಸೈನಿಕ ಸೇರಿದಂತೆ ಇತರೆ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ ಕೊಡಿಸಲಾಗುವುದು ಎಂದು ಭರವಸೆ ನೀಡಿ ಮುಗ್ಧ ಪಾಲಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು.ಎಕ್ಸಲೆಂಟ್ ನವೋದಯ ತರಬೇತಿ ಕೇಂದ್ರ, ವಿದ್ಯಾದೀಪ (ಗಬ್ಬೂರು) ನವೋದಯ ತರಬೇತಿ ಕೇಂದ್ರ, ಜೀನಿಯಸ್ ತರಬೇತಿ ಕೇಂದ್ರ ಹಾಗೂ ಅಲ್ಲಮ ಪ್ರಭು (ಗಬ್ಬೂರ) ವಡಗೇರಾ ಕೇಂದ್ರಗಳು ಸೇರಿದಂತೆ ಇನ್ನು ಹಲವಾರು ಕೋಚಿಂಗ್ ಸೆಂಟರ್‌ಗಳು ತರಬೇತಿ ನೀಡುತ್ತಿವೆ. ಅನಧಿಕೃತ ತರಬೇತಿ ಕೇಂದ್ರಗಳಲ್ಲಿ ಸರಕಾರಿ ಮತ್ತು ಖಾಸಗಿ ಕನ್ನಡ ಮಾಧ್ಯಮದ ಶಾಲೆಗಳ ಮಕ್ಕಳು ತರಬೇತಿ ಕೇಂದ್ರಕ್ಕೆ ಹೋಗುತ್ತಿರುವುದರಿಂದ ಸರಕಾರಿ ಮತ್ತು ಖಾಸಗಿ ಶಾಲೆಗಳ ದಾಖಲಾತಿ ಕಡಿಮೆಯಾಗುತ್ತಿದೆ ಎಂದರು.
ಕೆಲವರು ಸರಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲಿಸಿ, ಸರ್ಕಾರಿ ಶಾಲೆಗೆ ಕಳುಹಿಸದೇ ಖಾಸಗಿಯಾಗಿ ನಡೆಸುವ ಕೋಚಿಂಗ್ ಸೆಂಟರ್‌ಗಳಿಗೆ ಕಳುಹಿಸುತ್ತಿದ್ದಾರೆ. ಇದರಿಂದ ಮಗುವಿನ ಹೆಸರಲ್ಲಿ ಸರ್ಕಾರದ ಸೌಲಭ್ಯಗಳು ದುರ್ಬಳಕೆಯಾಗುತ್ತಿವೆ. ಇದಕ್ಕೆ ಶಿಕ್ಷಣ ಇಲಾಖೆ ಪ್ರೋತ್ಸಾಹ ನೀಡುತ್ತಿರುವುದು ದುರಂತದ ಸಂಗತಿ ಎಂದು ಬೇಸರ ಹೊರ ಹಾಕಿದರು.ಈ ಕುರಿತು ಮನವಿ ಮಾಡಿದರೂ ಸಹಿತ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಕೇಂದ್ರಗಳಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದು ಹುಸಿ ಭರವಸೆ ನೀಡಿ, ಪೋಷಕರಿಂದ ದುಬಾರಿ ಹಣ ಪಡೆದು ಮಕ್ಕಳಿಗೆ, ವಿಶೇಷವಾಗಿ ಬಾಲಕಿಯರಿಗೆ ಸೂಕ್ತ ರಕ್ಷಣೆ ಇಲ್ಲದೇ ವಸತಿ ಶಾಲೆಗಳ ಮಕ್ಕಳ ಭವಿಷ್ಯದ ವಿಷಯದಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ತಿಮ್ಮಯ್ಯ ಪುರ್ಲೆ, ಒಕ್ಕೂಟದ ಕಾರ್ಯದರ್ಶಿ ವಿ. ಸತ್ಯಂರೆಡ್ಡಿ, ಹೊನ್ನಪ್ಪ ಗಂಗನಾಳ, ಸಹ ಕಾರ್ಯದರ್ಶಿ ತಿಪ್ಪಣ್ಣ ಕ್ಯಾತನಾಳ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಂತೋಷ್ ದೇಶಮುಖ್, ಎಸ್‌ಡಿಪಿಐ ರಾಜ್ಯ ಸಂಚಾಲಕ ಸೈಯದ್ ಇಸಾಕ್ ಹುಸೇನ್ ಖಾಲಿದ್ ಸೇರಿದಂತೆ ಒಕ್ಕೂಟದ ಹೋರಾಟಕ್ಕೆ ದಲಿತ ಸಂಘರ್ಷ ಸಮಿತಿ, ಕನ್ನಡ ಸಾಹಿತ್ಯ ಪರಿಷತ್, ತಾಲೂಕು ವಕೀಲರ ಸಂಘಗಳು ಬೆಂಬಲ ಸೂಚಿಸಿ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.