ಸಾರಾಂಶ
ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ಬಗ್ಗೆ ಭಾರಿ ವಿವಾದ- ಮೀಸಲಿಗೆ ಆಗ್ರಹಿಸಿ ಮುಸ್ಲಿಂ ಸಚಿವ, ಶಾಸಕ, ನಾಯಕರಿಂದ ಸಿದ್ದುಗೆ ಪತ್ರ
- ‘ಪರಿಶೀಲಿಸಿ’ ಎಂದು ವಿತ್ತ ಇಲಾಖೆಗೆ ಕಳುಹಿಸಿದ ಸಿಎಂ: ಭಾರೀ ವಿವಾದ- ಜಾಲತಾಣಗಳಲ್ಲಿ ಭಾರಿ ಚರ್ಚೆ । ವಕ್ಫ್ ಬಳಿಕ ಪ್ರತಿಪಕ್ಷಗಳಿಗೆ ಹೊಸ ಅಸ್ತ್ರ--ಏನಿದು ವಿವಾದ?- ಸರ್ಕಾರದ ಗುತ್ತಿಗೆ ಕಾಮಗಾರಿಗಳಲ್ಲಿ ಪ್ರವರ್ಗ 2ಬಿಗೆ 4% ಮೀಸಲು ನೀಡುವಂತೆ ಬೇಡಿಕೆ- ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್‌ರಿಂದ ಆಗಸ್ಟ್‌ನಲ್ಲೇ ಸಿದ್ದುಗೆ ಪತ್ರ- ಸಚಿವರಾದ ಜಮೀರ್, ರಹೀಂಖಾನ್ ಸೇರಿ ಹಲವು ಮುಸ್ಲಿಂ ಶಾಸಕರಿಂದ ಈ ಪತ್ರಕ್ಕೆ ಸಹಿ- ಪತ್ರ ಸ್ವೀಕರಿಸಿದ ಬಳಿಕ ‘ಪರಿಶೀಲಿಸಿ...’ ಎಂದು ಸಹಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ- ಪತ್ರ ಬಹಿರಂಗ. ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕಲ್ಪಿಸಲಾಗುತ್ತಿದೆ ಎಂದು ಸುದ್ದಿ- ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಭಾರಿ ಚರ್ಚೆ: ಬೆನ್ನಲ್ಲೇ ಪ್ರಸ್ತಾವ ಇಲ್ಲ ಎಂದ ಸಿಎಂ---
ಕನ್ನಡಪ್ರಭ ವಾರ್ತೆ ಬೆಂಗಳೂರುಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕಲ್ಪಿಸುವ ಬಗ್ಗೆ ವಿವಾದ ಎದ್ದ ಬೆನ್ನಲ್ಲೇ ಎಚ್ಚೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ಶೇ.4ರಷ್ಟು ಮೀಸಲಾತಿ ನೀಡುವಂತೆ ಬೇಡಿಕೆ ಬಂದಿರುವುದು ನಿಜ. ಆದರೆ, ಈ ಸಂಬಂಧ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಅವರು, ಮತ್ತೊಂದು ಹೊಸ ಸುಳ್ಳಿಗೆ ಸ್ಪಷ್ಟನೆ ನೀಡಬೇಕಾಗಿದೆ. ‘ಕಾಮಗಾರಿಯಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದೆ’ ಎಂಬ ವರದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಮುಸ್ಲಿಮರಿಗೆ ಮೀಸಲಾತಿ ನೀಡಬೇಕೆಂಬ ಬೇಡಿಕೆ ಬಂದಿರುವುದು ನಿಜ. ಆದರೆ, ಈ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಈ ವಿಚಾರವಾಗಿ ನಾನು ಸ್ಪಷ್ಟನೆ ನೀಡಿದ್ದೇನೆ. ಹಾಗಾಗಿ ಪಕ್ಷದ ಮುಸ್ಲಿಂ ನಾಯಕರು ಈ ಬಗ್ಗೆ ಹೇಳಿಕೆಗಳನ್ನು ನೀಡಬಾರದು ಎಂದು ಮುಖ್ಯಮಂತ್ರಿಯವರು ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
---ಕನ್ನಡಪ್ರಭ ವಾರ್ತೆ ಬೆಂಗಳೂರುಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕಲ್ಪಿಸುವಂತೆ ಸರ್ಕಾರದ ಕೆಲ ಸಚಿವ, ಶಾಸಕರೂ ಸೇರಿದಂತೆ ಸಮುದಾಯದ ಹಲವು ನಾಯಕರು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಬೇಡಿಕೆ ಇಟ್ಟಿದ್ದಾರೆ.
ಈ ಬೇಡಿಕೆ ಬೆನ್ನಲ್ಲೇ ಸರ್ಕಾರ ಮೀಸಲು ನೀಡಲು ಮುಂದಾಗಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ಆರಂಭವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂತಹ ಬೇಡಿಕೆ ಸಲ್ಲಿಕೆಯಾಗಿದೆ. ಆದರೆ, ಸರ್ಕಾರ ಮೀಸಲು ನೀಡುವ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಇದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಕಳೆದ ಆಗಸ್ಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಗುತ್ತಿಗೆ ಕಾಮಗಾರಿಗಳಲ್ಲಿ ಅಲ್ಪಸಂಖ್ಯಾತರ ಪ್ರವರ್ಗ-2 ಬಿಗೆ ಶೇ.4 ಕ್ಕೂ ಹೆಚ್ಚು ಮೀಸಲಾತಿ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ಈ ಪತ್ರಕ್ಕೆ ಸಚಿವರಾದ ಜಮೀರ್ ಅಹ್ಮದ್ ಖಾನ್, ರಹೀಂ ಖಾನ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ತನ್ವೀರ್ ಸೇಠ್, ಅಬ್ದುಲ್ ಜಬ್ಬಾರ್, ಎನ್.ಎ.ಹ್ಯಾರಿಸ್, ರಿಜ್ವಾನ್ ಅರ್ಷದ್, ಇಕ್ಬಾಲ್ ಹುಸೇನ್, ಬಲ್ಕೀಸ್ ಬಾನು ಮತ್ತಿತರರು ಸಹಿ ಹಾಕಿದ್ದಾರೆ. ಈ ಪತ್ರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಿ ಮಾಡಿದ್ದು, ‘ಅಪರ ಮುಖ್ಯಕಾರ್ಯದರ್ಶಿಗಳು, ಆರ್ಥಿಕ ಇಲಾಖೆ... ಪರಿಶೀಲಿಸಿ..’ ಎಂದು ಬರೆಯಲಾಗಿದೆ.ಇತ್ತೀಚೆಗೆ ಬರೆಯಲಾದ ಈ ಪತ್ರ ಬಹಿರಂಗಗೊಳ್ಳುತ್ತಿದ್ದಂತೆಯೇ ಮುಸ್ಲಿಂ ಸಮುದಾಯಕ್ಕೆ ಸರ್ಕಾರ ಗುತ್ತಿಗೆ ಕಾಮಗಾರಿಗಳಲ್ಲಿ ಶೇ.4ರಷ್ಟು ಮೀಸಲಾತಿ ಕಲ್ಪಿಸಲು ಮುಂದಾಗಿದೆ ಎಂದು ಸುದ್ದಿಯಾಗಿತ್ತು. ಕಾಂಗ್ರೆಸ್ ಮುಸ್ಲಿಂ ಓಲೈಕೆ ಮಾಡುತ್ತಿದೆ ಎಂದು ಆರೋಪಿಸುತ್ತಿರುವ ಪ್ರತಿಪಕ್ಷ ಬಿಜೆಪಿಗೆ ಉಪಚುನಾವಣೆ ಸಮಯದಲ್ಲಿ ವಕ್ಫ್ ವಿವಾದದ ಬಳಿಕ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.
---------ಬೇಡಿಕೆ ಪತ್ರದಲ್ಲೇನಿದೆ?
2023-24ನೇ ಸಾಲಿನ ಆಯವ್ಯಯದಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ-1 ಮತ್ತು 2ಎ ಗಳಿಗೆ ಗುತ್ತಿಗೆ ಕಾಮಗಾರಿಗಳಲ್ಲಿ 1 ಕೋಟಿ ರು. ವರೆಗೆ ಮೀಸಲಾತಿಯನ್ನು ನೀಡುವ ಬಗ್ಗೆ ತಾವು ಘೋಷಿಸಿದ್ದು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (2ನೇ ತಿದ್ದುಪಡಿ) ವಿಧೇಯಕ 2023ರ ಅನ್ವಯ ಹಿಂದುಳಿದ ವರ್ಗಗಳ ಪ್ರವರ್ಗ-1ಕ್ಕೆ ಶೇ.4, ಪ್ರವರ್ಗ 2ಎಗೆ ಶೇ.15 ಮೀಸಲಾತಿ ನೀಡುವ ಬಗ್ಗೆ ಪಾರದರ್ಶಕ ಕಾಯಿದೆಗೆ ತಿದ್ದುಪಡಿ ತಂದು ಅನುಕೂಲ ಕಲ್ಪಿಸಲಾಗಿರುತ್ತದೆ.ಆದರೆ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದ 2ಬಿ ಪ್ರವರ್ಗಕ್ಕೆ ಈ ಸೌಲಭ್ಯ ಕಲ್ಪಿಸಿರುವುದಿಲ್ಲ. ತಾವು ದಯವಿಟ್ಟು ಈ ಸೌಲಭ್ಯವನ್ನು ಅಲ್ಪಸಂಖ್ಯಾತರ ಪ್ರವರ್ಗ 2ಬಿಗೆ ಶೇ.4ರಷ್ಟು ಮೀಸಲಾತಿ ಸೌಲಭ್ಯವನ್ನು ವಿಸ್ತರಿಸಿ ಸೂಕ್ತ ಆದೇಶ ಹೊರಡಿಸುವಂತೆ ಸಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಮುಸ್ಲಿಂ ಸಮುದಾಯದ ನಾಯಕರು ಬರೆದಿರುವ ಪತ್ರದಲ್ಲಿ ಬೇಡಿಕೆ ಇಡಲಾಗಿದೆ.