ಸ್ಪರ್ಧಾತ್ಮಕ, ಆಧುನಿಕ ಯುಗದಲ್ಲಿ ಫೋಟೋಗ್ರಾಫರ್ಸ್, ವೀಡಿಯೋಗ್ರಾಫರ್ಸ್ ವೃತ್ತಿಯು ಸಂಕಷ್ಟದಲ್ಲಿದ್ದು, ತಂತ್ರಜ್ಞಾನ ಯುಗಕ್ಕೆ ತಕ್ಕಂತೆ ಹೊಸತನ ಮೈಗೂಡಿಸಿಕೊಳ್ಳಬೇಕು. ಆ ಮೂಲಕ ವೃತ್ತಿ ಬಾಂಧವರು ಬದಲಾವಣೆಗೆ ತಮ್ಮನ್ನು ತೆರೆದುಕೊಳ್ಳಬೇಕು ಎಂದು ಮುಜರಾಯಿ, ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಸಚಿವ ಕೆ.ಎಸ್.ಬಸವಂತಪ್ಪ ಹೇಳಿದ್ದಾರೆ.

- ವೃತ್ತಿ ಬಾಂಧವರು ಕಾಲಕ್ಕೆ ತಕ್ಕಂತೆ ಆಧುನಿಕತೆ ಮೈಗೂಡಿಸಿಕೊಳ್ಳಲು ಕೆ.ಎಸ್.ಬಸವಂತಪ್ಪ ಕರೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸ್ಪರ್ಧಾತ್ಮಕ, ಆಧುನಿಕ ಯುಗದಲ್ಲಿ ಫೋಟೋಗ್ರಾಫರ್ಸ್, ವೀಡಿಯೋಗ್ರಾಫರ್ಸ್ ವೃತ್ತಿಯು ಸಂಕಷ್ಟದಲ್ಲಿದ್ದು, ತಂತ್ರಜ್ಞಾನ ಯುಗಕ್ಕೆ ತಕ್ಕಂತೆ ಹೊಸತನ ಮೈಗೂಡಿಸಿಕೊಳ್ಳಬೇಕು. ಆ ಮೂಲಕ ವೃತ್ತಿ ಬಾಂಧವರು ಬದಲಾವಣೆಗೆ ತಮ್ಮನ್ನು ತೆರೆದುಕೊಳ್ಳಬೇಕು ಎಂದು ಮುಜರಾಯಿ, ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಸಚಿವ ಕೆ.ಎಸ್.ಬಸವಂತಪ್ಪ ಹೇಳಿದರು.

ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಜಿಲ್ಲಾ ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘ, ಫೋಟೋಗ್ರಾಫರ್ಸ್ ಯೂತ್ ವೆಲ್‌ಫೇರ್ ಅಸೋಸಿಯೇಷನ್‌ ವತಿಯಿಂದ ಶನಿವಾರದಿಂದ ಹಮ್ಮಿಕೊಂಡ 2 ದಿನಗಳ ದೇವನಗರಿ ಪ್ರೊ ಇಮೇಜ್-2026 ಅಂತಾರಾಷ್ಟ್ರೀಯ ಛಾಯಾಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ಕ್ಷೇತ್ರದಲ್ಲಿ ಇರುವಂತೆ ಈ ವೃತ್ತಿ ಬಾಂಧವರಿಗೂ ಸಾಕಷ್ಟು ಸವಾಲು, ಸಂಕಷ್ಟ, ಸಮಸ್ಯೆಗಳೂ ಇವೆ. ಹಿಂದೆಲ್ಲಾ ಇಂತಹ ಮೇಳ ಎಂದರೆ ಬೆಂಗಳೂರು, ಮುಂಬೈ ಸೇರಿದಂತೆ ಹೊರ ರಾಜ್ಯಕ್ಕೆ ಹೋಗಬೇಕಿತ್ತು. ಅಂತಹದ್ದರಲ್ಲಿ ನಮ್ಮ ಊರಿನಲ್ಲೇ 3 ವರ್ಷದಿಂದ ಫೋಟೋಗ್ರಾಫರ್ಸ್ ಅಂಡ್ ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ನಿಂದ ದೇವನಗರಿ ಪ್ರೊ ಇಮೇಜ್ ಅಂತರಾಷ್ಟ್ರೀಯ ಛಾಯಾ ಮೇಳ ಆಯೋಜಿಸುತ್ತಾ ಬಂದಿದೆ. ಈ ವೃತ್ತಿಯವರಿಗೂ ಸಾಕಷ್ಟು ಅನುಕೂಲವಾಗಿದೆ ಎಂದರು.

ಯಾರು ಚೆಂದ ಇರಲ್ವೋ ಅಂತಹವರನ್ನು ಚೆಂದ ಮಾಡಿ ತೋರಿಸುವ ಕೆಲಸ ಮಾಡುವವರೆಂದರೆ ಫೋಟೋಗ್ರಾಫರ್ ಗಳು. ಅಂತಹ ಕೈಚಳಕ ತೋರಿಸಿ ತಮ್ಮದೇ ಆದ ಕಲೆ ಬಳಸಿ ಜನರನ್ನು ಅಂದವಾಗಿ ಕಾಣುವಂತಹ ಕೆಲಸ ಫೋಟೋಗ್ರಾಫರ್ ಮಾಡುತ್ತಿದ್ದಾರೆ. ಫೋಟೋಗ್ರಾಫರ್ಸ್‌ಗಳಿಗೆ ನಿರಂತರ ದುಡಿಮೆ ಇರುವುದಿಲ್ಲ. ಕುಟುಂಬ ನಿರ್ವಹಣೆ ಬಹಳ ಕಷ್ಟವಾಗಿರುತ್ತದೆ. ಇಂತಹ ಫೋಟೋ, ವಿಡಿಯೋಗ್ರಾಫರ್‌ಗಳಿಗೆ ಸರ್ಕಾರದಿಂದ ಸಹಕಾರ ನೀಡಲು ನಿಮ್ಮ ಜೊತೆಗಿರುತ್ತದೆ ಎಂದು ಭರವಸೆ ನೀಡಿದರು.

ಸಾನಿಧ್ಯ ವಹಿಸಿದ್ದ ಕೊಟ್ಟೂರು ಹಿರೇಮಠದ ಶ್ರೀ ಶಿವಪ್ರಕಾಶ ಸ್ವಾಮೀಜಿ ಮಾತನಾಡಿ, ಫೋಟೋ, ವಿಡಿಯೋಗ್ರಾಫರ್ಸ್ ತಮ್ಮ ಸ್ವಉದ್ಯೋಗದಲ್ಲಿ ಸ್ವಾವಲಂಬಿ ಕಾಯಕವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಕ್ಯಾಮರಾ ಬೆಲೆ ಲಕ್ಷಗಟ್ಟಲೇ ಇದೆ. ಕ್ಯಾಮರಾ ಬೆಲೆ ದೊಡ್ಡದಲ್ಲ, ಅದನ್ನು ಬಳಸುವ ನಿಮ್ಮ ಮನಸ್ಸು ದೊಡ್ಡದು. ಯಾವುದೇ ಛಾಯಾಚಿತ್ರ ತೆಗೆಯಿರಿ ಮನಸ್ಸಿಟ್ಟು, ಏಕಾಗ್ರತೆಯಿಂದ ತೆಗೆಯಿರಿ. ಒಂದು ಕ್ಷಣದಲ್ಲಿ ನೀವು ತೆಗೆಯುವ ಫೋಟೋ ನೂರಾರು ವರ್ಷ ಬದುಕುತ್ತದೆ. ಅಂತಹ ಸೇವೆ ನಿಮ್ಮದು. ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಇಂತಹ ಛಾಯಾಮೇಳಗಳು ನಡೆಯುವಂತಾಗಲಿ. ಬೇರೆ ಜಿಲ್ಲೆ, ರಾಜ್ಯಗಳಿಂದಲೂ ಫೋಟೋ- ವೀಡಿಯೋಗ್ರಾಫರ್ಸ್ ಮೇಳದಲ್ಲಿ ಸೇರುವಂತಾಗಲಿ ಎಂದರು.

ಸಂಘದ ಅಧ್ಯಕ್ಷ ವಿಜಯ ಕುಮಾರ ಜಾಧವ್ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಮಾಜಿ ಸದಸ್ಯ ಜಿ.ಎಸ್.ಮಂಜುನಾಥ ಗಡಿಗುಡಾಳ, ದೇವನಗರಿ ಪ್ರೊ ಇಮೇಜ್ ಸಂಸ್ಥಾಪಕ ಶ್ರೀನಾಥ ಪಿ.ಅಗಡಿ, ಅಸೋಸಿಯೇಷನ್ ಅಧ್ಯಕ್ಷ ಎಸ್.ಆರ್.ತಿಪ್ಪೇಸ್ವಾಮಿ, ಎಚ್.ಕೆ.ಸಿ. ರಾಜು, ವಿವಿಧ ಜಿಲ್ಲೆಗಳ ಸಂಘಗಳ ಅಧ್ಯಕ್ಷರಾದ ಹಾವೇರಿ ರಾಜೇಂದ್ರ ರಿತ್ತಿ, ಗದಗ್ನ ಪವನ್ ಕೆ.ಮೆಹರವಾಡೆ, ಚಿತ್ರದುರ್ಗದ ಸೈಯ್ಯದ್ ರಹಮತ್ತುಲ್ಲಾ, ವಿಜಯನಗರ ಕರಿಬಸಯ್ಯ, ಶಿವಮೊಗ್ಗ ಎನ್.ರಾಜು, ಬಳ್ಳಾರಿ ನಾಡಗೌಡ ಚಂದ್ರಮೋಹನ, ಧಾರವಾಡ ಅನಿಲ ಕಲಾಲ್, ಹುಬ್ಬಳ್ಳಿಯ ದಿನೇಶ ದಾಬಡೆ ಸೇರಿದಂತೆ ಇತರರು ಇದ್ದರು. ಹಿರಿಯ ಫೋಟೋಗ್ರಾಫರ್‌ಗಳಿಗೆ ಸನ್ಮಾನಿಸಲಾಯಿತು.

ಮೇಳದಲ್ಲಿ ದಾವಣಗೆರೆ ಸೇರಿದಂತೆ ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಹೊರ ರಾಜ್ಯದ ಬಾಂಬೆ. ದೆಹಲಿ, ಹೈದರಾಬಾದ್ ಗಳ ಫೋಟೋ ಸಲಕರಣೆಗಳ ಶಾಪ್‌ನವರಿಂದ ಹೊಸ ಬಗೆಯ ಕ್ಯಾಮರಾ, ಪ್ರಿಂಟರ್, ಲ್ಯಾಮಿನೇಷನ್, ಫ್ರೇಮ್, ಫೋಟೋ ಪ್ರಿಂಟಿಂಗ್, ಕ್ಯಾಮರಾ ರಿಪೇರಿ, ಸ್ಕ್ರೀನ್, ಹಳೆಯ ಹೊಸ ಕ್ಯಾಮರಾ ಮಾರಾಟ, ಆಲ್ಬಂ, ಎಲ್‌ಇಡಿ ಮಾನಿಟರ್, ರೆಡಿ ಫ್ರೇಂ, ಬ್ಯಾಗು, ಪೆನ್ ಡ್ರೈವ್ ಸೇರಿದಂತೆ ಅನೇಕ ಕ್ಯಾಮರಾ ಪರಿಕರಗಳ ಮಳಿಗೆಗಳು ಇದ್ದವು.

ಕಾರ್ಯಕ್ರಮದಲ್ಲಿ ಹಿರಿಯ ಛಾಯಾಗ್ರಾಹಕ ಡಾ.ಎಚ್.ಬಿ.ಮಂಜುನಾಥ, ಸಂಘದ ಎ.ಬಿ.ರುದ್ರಮ್ಮ, ಮಂಗಳ, ಎನ್.ಕೆ.ಕೊಟ್ರೇಶ, ಎಸ್.ದುಗ್ಗಪ್ಪ, ಎನ್.ಅರುಣಕುಮಾರ, ಕಿರಣ್ ಕುಮಾರ, ತಿಲಕ್ ಎಕನಾಥ ಬನಕಂಡಿ, ಮೃತ್ಯುಂಜಯ, ಶಂಭು, ಬಿ.ಎಂ.ಮಿಥುನ್, ಶ್ರೀನಿವಾಸ, ಎಚ್.ಎಸ್.ಮಹಾಂತೇಶ, ಕೆ.ಪಿ.ನಾಗರಾಜ, ಮಲ್ಲಿಕಾರ್ಜುನ ಇತರರು ಇದ್ದರು.

- - -

(ಬಾಕ್ಸ್‌)

* ಬ್ಯಾಂಕುಗಳು ಕಡಿಮೆ ದರದಲ್ಲಿ ಸಾಲ ನೀಡಲಿ

ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಮಾತನಾಡಿ, ಫೋಟೋಗ್ರಾಫರ್ಸ್, ವಿಡಿಯೋಗ್ರಾಫರ್ಸ್‌ಗಳಿಗೆ ವರ್ಷದ ಕೆಲ ತಿಂಗಳಷ್ಟೇ ಮಧುವೆ, ಶುಭ ಕಾರ್ಯ ಇರುತ್ತವೆ. ವರ್ಷವೆಲ್ಲಾ ದುಡಿಮೆ ಇರಲ್ಲ. ಸರ್ಕಾರ, ಡಿಸಿಸಿ ಬ್ಯಾಂಕ್, ದೂಡಾ, ಪಾಲಿಕೆಯಿಂದ ಕ್ಯಾಮರಾ ಕೊಡಿಸುವುದೂ ಸೇರಿದಂತೆ ಏನಾದರೂ ಸೌಲಭ್ಯ ಕಲ್ಪಿಸಲು ನಾನೂ ಒತ್ತಾಯಿಸುತ್ತೇನೆ. ಇಂತಹ ಮೇಳದಿಂದ ನಿಮಗೆ ಅನುಕೂಲವಾಗಬೇಕು. ಈ ವೃತ್ತಿಯವರು ಆರ್ಥಿಕ ಸಬಲರಲ್ಲ. ಸರ್ಕಾರಿ ಕೆಲಸವಿಲ್ಲದೇ ಈ ವೃತ್ತಿ ಮಾಡುತ್ತಾ ಬಂದಿದ್ದೀರಿ. ದಾವಣಗೆರೆಯಲ್ಲಿ ಸಾವಿರಾರು ಫೋಟೋಗ್ರಾಫರ್ಸ್ ಇದ್ದು, ಇಂತಹವರಿಗೆ ಬ್ಯಾಂಕುಗಳು ಕಡಿಮೆ ದರದಲ್ಲಿ ಸಾಲ ಕೊಟ್ಟರೆ ಅನುಕೂಲ ಎಂದರು.

- - -

(ಟಾಪ್‌ ಕೋಟ್‌) ಸರ್ಕಾರದ ಯೋಜನೆಗಳಲ್ಲಿ ಫೋಟೋಗ್ರಾಫರ್ಸ್ಗಳಿಗೆ ರಾಜ್ಯದಲ್ಲಿ ಒಂದು ನಿಗಮ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಜೊತೆಗೆ ಈ ಬಗ್ಗೆ ಚರ್ಚಿಸುತ್ತೇನೆ. ನಿಗಮ ಸ್ಥಾಪನೆಯಾದರೆ ಧನಸಹಾಯ, ಮಕ್ಕಳ ಶಿಕ್ಷಣ, ಆರೋಗ್ಯ ಸೇರಿದಂತೆ ಅನುಕೂಲವಾಗುತ್ತದೆ. ದೂಡಾ ದಿಂದ ನೀಡಿರುವ ಸಿಎ ಜಾಗ ನೀಡಿದ್ದು, ಹಣ ಪಾವತಿಸಲು ರಿಯಾಯಿತಿ ಬಗ್ಗೆ ತಿಳಿಸಿದ್ದೀರಿ. ಅದರಂತೆ ನಾವು ಸಚಿವ ಎಸ್ಸೆಸ್ಸೆಂ ಸರ್ಕಾರದೊಂದಿಗೆ ಚರ್ಚಿಸಿ ನಿಮಗೆ ಹೊರೆಯಾಗದ ರೀತಿಯಲ್ಲಿ ಅತೀ ಹೆಚ್ಚಿನ ರಿಯಾಯಿತಿ ನೀಡುವಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.- ಕೆ.ಎಸ್.ಬಸವಂತಪ್ಪ, ಸಚಿವ

- - -

-29ಕೆಡಿವಿಜಿ32, 33: ದಾವಣಗೆರೆಯಲ್ಲಿ ನಡೆದ ದೇವನಗರಿ ಪ್ರೊ ಇಮೇಜ್ ಅಂತರ ರಾಷ್ಟ್ರೀಯ ಛಾಯಾಮೇಳದಲ್ಲಿ ನೂತನ ಕ್ಯಾಮರಾವನ್ನು ಪರಿಚಯಿಸುತ್ತಿರುವ ಸಚಿವ ಕೆ.ಎಸ್.ಬಸವಂತಪ್ಪ, ಕೊಟ್ಟೂರು ಶಿವಪ್ರಕಾಶ ಸ್ವಾಮೀಜಿ, ದಿನೇಶ ಶೆಟ್ಟಿ.

-29ಕೆಡಿವಿಜಿ34: ದಾವಣಗೆರೆಯಲ್ಲಿಂದು ನಡೆದ ದೇವನಗರಿ ಪ್ರೊ ಇಮೇಜ್ ಅಂತರಾಷ್ಟ್ರೀಯ ಛಾಯಾಮೇಳದ ವೇದಿಕೆ ಕಾರ್ಯಕ್ರಮವನ್ನು ಸಚಿವ ಕೆ.ಎಸ್.ಬಸವಂತಪ್ಪ ಉದ್ಘಾಟಿಸಿದರು. ಕೊಟ್ಟೂರು ಶಿವಪ್ರಕಾಶ ಸ್ವಾಮೀಜಿ, ದಿನೇಶ ಶೆಟ್ಟಿ, ವಿಜಯ್ ಜಾಧವ್, ಕಬಾಡೆ ಮಂಜುನಾಥ ಇತರರು ಇದ್ದರು.