ಸಾರಾಂಶ
ದೇವರ ನಾಮಸ್ಮರಣೆ ಮಾಡುವ ಹೆಸರಿಟ್ಟುಕೊಂಡಿರುವ ಎಚ್.ಆಂಜನೇಯ ಅವರು ಹಿಂದೂ ಧರ್ಮದ ಭಾವನೆಗೆ ಧಕ್ಕೆಯಾಗುವಂತೆ ಮಾತನಾಡಿದ್ದಾರೆ. ಅರ್ಚಕರು ಮತ್ತು ಪುರೋಹಿತ ಸಂಕುಲಕ್ಕೆ ಗೌರವ ಕಳೆಯುವಂತೆ ಮಾತನಾಡಿರುವುದು ಭಗವಂತನಿಗೆ ಅಪಮಾನ ಮಾಡಿದಂತೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಅರ್ಚಕರು ಮತ್ತು ಪುರೋಹಿತ ಕುಲಕ್ಕೆ ಅಪಮಾನವಾಗುವ ರೀತಿ ಹೇಳಿಕೆ ನೀಡಿರುವ ಮಾಜಿ ಸಚಿವ ಎಚ್.ಆಂಜನೇಯ ಈ ಕೂಡಲೇ ಸಾರ್ವಜನಿಕವಾಗಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ತಾಲೂಕು ಮುಜರಾಯಿ ದೇವಸ್ಥಾನಗಳ ಅರ್ಚಕರ ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್ ಆಗ್ರಹಿಸಿದರು.ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಸಮುದಾಯವನ್ನು ಓಲೈಸಿಕೊಳ್ಳಲು ಎಚ್.ಆಂಜನೇಯ ಅವರು ತಮ್ಮ ನಾಲಿಗೆ ಹರಿಬಿಟ್ಟು ಅರ್ಚಕರು ಮತ್ತು ಪುರೋಹಿತರು ನಾಮ ಹಾಕಿಕೊಂಡು ತಟ್ಟೆ ಹಿಡಿದು ಕಾಸಿಗಾಗಿ ಬೇಡುತ್ತಾರೆಂದು ಹೇಳಿಕೆ ನೀಡಿರುವುದನ್ನು ತೀವ್ರವಾಗಿ ಖಂಡಿಸಿದರು.
ದೇವರ ನಾಮಸ್ಮರಣೆ ಮಾಡುವ ಹೆಸರಿಟ್ಟುಕೊಂಡಿರುವ ಎಚ್.ಆಂಜನೇಯ ಅವರು ಹಿಂದೂ ಧರ್ಮದ ಭಾವನೆಗೆ ಧಕ್ಕೆಯಾಗುವಂತೆ ಮಾತನಾಡಿದ್ದಾರೆ. ಅರ್ಚಕರು ಮತ್ತು ಪುರೋಹಿತ ಸಂಕುಲಕ್ಕೆ ಗೌರವ ಕಳೆಯುವಂತೆ ಮಾತನಾಡಿರುವುದು ಭಗವಂತನಿಗೆ ಅಪಮಾನ ಮಾಡಿದಂತೆ ಎಂದರು.ಮಾಜಿ ಸಚಿವನೇ ಆಗಿರಲಿ, ಎಷ್ಟೇ ದೊಡ್ಡ ವ್ಯಕ್ತಿಯಾಗಿರಲಿ ಈ ಕೂಡಲೆ ಬಹಿರಂಗ ಕ್ಷಮೆಯಾಚನೆ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಲೂಕು ಮುಜರಾಯಿ ದೇವಸ್ಥಾನಗಳ ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಕೆ.ಎನ್.ರಂಗಸ್ವಾಮಿ ಮಾತನಾಡಿ, ರಾಜ್ಯದ ಯಾವ ಅರ್ಚಕರೂ ಕೂಡ ಎಚ್.ಆಂಜನೇಯ ಅವರ ಮನೆ ಮುಂದೆ ತಟ್ಟೆ ಹಿಡಿದು ಕಾಸು ಹಾಕಿ ಎಂದು ಕೇಳುವುದಿಲ್ಲ. ನಮ್ಮ ಹಿಂದುತ್ವ ಅಷ್ಟು ಕೇವಲವಾಗಿಲ್ಲ. ಒಂದು ಸಮುದಾಯದ ಓಲೈಕೆಯಾಗಿ ಹಿಂದೂ ಅರ್ಚಕರ ಮತ್ತು ಹಿಂದುತ್ವದ ಬಗ್ಗೆ ಅವಹೇಳನವಾಗಿ ಮಾತಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.ಅರ್ಚಕರ ಬಗ್ಗೆ ದುರಂಹಕಾರದಿಂದ ಮಾತನಾಡಿದ್ದಕ್ಕೆ ರಾಜಣ್ಣ ಸಚಿವ ಸ್ಥಾನ ಕಳೆದುಕೊಂಡಿರುವ ನಿದರ್ಶನವಿದೆ. ಅರ್ಚಕರ ಶಾಪ ಒಳ್ಳೆಯದಲ್ಲ. ಹಾಗಾಗಿ ಮಾಜಿ ಸಚಿವ ಎಚ್.ಆಂಜನೇಯ ಈ ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಬಿ.ಕೆ.ಲೋಕೇಶ್ ಕುಮಾರ್, ನಿರ್ದೇಶಕರಾದ ಲಕ್ಷ್ಮೀನಾರಾಯಣ, ಶ್ರೀನಿವಾಸಯ್ಯ ಇದ್ದರು.
;Resize=(128,128))
;Resize=(128,128))
;Resize=(128,128))