ಸಾರಾಂಶ
ಕಾರಟಗಿ : ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಸರ್ಕಾರದ ವಿರುದ್ಧ ಪಟ್ಟಣದಲ್ಲಿ ಗುರುವಾರ ತಾಲೂಕು ಪಂಚಮಸಾಲಿ ಘಟಕ ಪ್ರತಿಭಟನೆ ನಡೆಸಿತು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಕಳಕನಗೌಡ ಪಾಟೀಲ್ ಹಾಗೂ ಪಂಚಮಸಾಲಿ ಗುರುಪೀಠದ ದಾಸೋಹ ಸಮಿತಿ ರಾಜ್ಯಾಧ್ಯಕ್ಷ ಚನ್ನಬಸಪ್ಪ ಸುಂಕದ್ ಮಾತನಾಡಿ, ಬೆಳಗಾವಿಯಲ್ಲಿನ ಘಟನೆಯಿಂದ ನಮ್ಮ ಇಡೀ ಸಮುದಾಯಕ್ಕೆ ನೋವಾಗಿದೆ. ಸಮಾಜದವರು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಬಂದವರಲ್ಲ. ನ್ಯಾಯಯುತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದಾರೆ.
ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಪೊಲೀಸರು ಸಮಯದಾಯದ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ನೆಪದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರಿಂದ ಗಾಯಗೊಂಡ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕ ಕುಟುಂಬಗಳು ಇದರಿಂದ ನೋವು ಅನುಭವಿಸುತ್ತಿವೆ. ಹೋರಾಟವನ್ನು ನಿಯಂತ್ರಿಸಲೇಬೇಕು ಎಂಬ ಧೋರಣೆಯಿಂದ ಲಾಠಿ ಚಾರ್ಜ್ ಮಾಡಿರುವ ಕ್ರಮ ಸರಿಯಲ್ಲ. ಈ ಬಗ್ಗೆ ಎಡಿಜಿಪಿ ಹಿತೇಂದ್ರ ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು. ಅಲ್ಲದೇ ಸಿಎಂ ಸಿದ್ದರಾಮಯ್ಯ ಸಮುದಾಯದ ಕ್ಷಮೆ ಕೇಳಬೇಕು. ರೈತರು ಹಾಗೂ ಸಮುದಾಯದ ಹೋರಾಟಗಾರರ ವಿರುದ್ಧ ದಾಖಲಿಸಲಾದ ಪ್ರಕರಣ ಹಿಂಪಡೆಯಬೇಕು. ಕಿಡಿಗೇಡಿಗಳು ಕಲ್ಲು ತೂರುವ ಮೂಲಕ ಹೋರಾಟದ ದಿಕ್ಕು ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಸರ್ಕಾರ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವಹಿಸುವಂತೆ ಆಗ್ರಹಿಸಿದರು.
ಪ್ರಮುಖರಾದ ಬಸವರಾಜ ತೊಂತನಾಳ, ಗುಂಡಪ್ಪ ಕುಳಗಿ, ಅಮರೇಶ ಕುಳಗಿ, ಪಾಲಾಕ್ಷಪ್ಪ ಕೆಂಡದ್, ಬಸವರಾಜ್ ಎತ್ತಿನಮನಿ, ಶರಣಪ್ಪ ಶಿವಶಕ್ತಿ, ಶಿವಶರಣಪ್ಪ ಶಿವಪೂಜಿ, ವೀರೇಶ ಪನ್ನಾಪುರ, ಬಸವರಾಜಪ್ಪ ಚಳ್ಳೂರು, ಶಿವಶರಣೆಗೌಡ ಯರಡೋಣಾ, ಬಸವರಾಜ ಶಿವಶಕ್ತಿ, ರವಿ ತಿಮ್ಮಾಪುರ, ತ್ರಿಲೋಚನ, ತಿಮ್ಮನಗೌಡ, ಗುಂಡಪ್ಪ ಕುಳಗಿ, ವಿರೂಪಾಕ್ಷ ಗುಂಡೂರು, ಅಮರೇಶ್ ಪಾಟೀಲ್, ರಮೇಶ ಅಯೋಧ್ಯ, ನಾಗರಾಜ್ ಗುಂಡೂರು, ಮುರುಡಪ್ಪ ಹೊಸಮನಿ, ಶರಣಪ್ಪ ಹೊಸಮನಿ, ವಿಜಯ ಕೋಲ್ಕಾರ್, ಸಂಗನಗೌಡ, ಶಿವರಾಜ್, ಶಿವು ಮೇಲ್ಗಡೆ, ಮಂಜು ಬಸಾಪುರ, ಭದ್ರಗೌಡ ಪನ್ನಾಪುರ, ಬಸವರಾಜ್ ಗುಂಡೂರು ಸೇರಿ ಇತರರಿದ್ದರು.
20ಕ್ಕೂ ಹೆಚ್ಚು ನಿಮಿಷಗಳ ಕಾಲ ರಸ್ತೆ ಸಂಚಾರ ತಡೆ:
ಪ್ರತಿಭಟನೆ ರ್‍ಯಾಲಿ ಪಟ್ಟಣದ ಪುರಸಭೆ ಕಚೇರಿಯಿಂದ ಕನಕದಾಸ ವೃತ್ತದವರೆಗೆ ಸಾಗಿತು. ನಂತರ ಮಾನವ ಸರಪಳಿ ನಿರ್ಮಿಸಿ ಟೈರ್ ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಸುಮಾರು 20 ನಿಮಿಷಕ್ಕೂ ಹೆಚ್ಚಿನ ಸಮಯ ರಸ್ತೆ ಸಂಚಾರ ತಡೆ ನಡೆಸಿದರು. ಬಳಿಕ ಕಂದಾಯ ಇಲಾಖೆ ಅಧಿಕಾರಿ ಉಮಾ ಮಹೇಶ್ವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.