ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಹುದ್ದೆಗಾಗಿ ಉರ್ದು ಭಾಷೆ ಕಡ್ಡಾಯ ಗೊಳಿಸಿರುವುದನ್ನು ಕೂಡಲೇ ರದ್ದುಗೊಳಿಸುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶಿಕಾರಿಪುರ ತಾಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.ಈ ವೇಳೆ ಹಿಂದೂ ಜನಜಾಗೃತಿ ಸಮಿತಿ ಸಂಚಾಲಕ ಪರಶುರಾಮ ಮಾತನಾಡಿ, ಕರ್ನಾಟಕ ರಾಜ್ಯದ ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಉರ್ದು ಭಾಷೆಯನ್ನು ಆಯ್ಕೆ ಮಾಡದಿದ್ದರೆ ಅರ್ಜಿಯ ಮುಂದಿನ ಪ್ರಕ್ರಿಯೆ ಮಾಡಲು ಸಾಧ್ಯವಿಲ್ಲ, ಕರ್ನಾಟಕದಲ್ಲಿ ಕನ್ನಡವೇ ರಾಜ್ಯಭಾಷೆ ಆಗಿರುವಾಗ ಈ ರೀತಿ ಉರ್ದು ಭಾಷೆ ಕಡ್ಡಾಯ ಮಾಡಿ ಕನ್ನಡಿಗರನ್ನು ಅವಮಾನ ಮಾಡಿರುವುದು ಕಂಡು ಬರುತ್ತದೆ.
ಈ ಹುದ್ದೆಯನ್ನು ಪಡೆಯಬೇಕಾದರೆ ಉರ್ದು ಕಲಿಯುವ ಅನಿವಾರ್ಯತೆಯನ್ನು ಮಾಡಿ ಉರ್ದು ಭಾಷೆ ವೈಭವೀಕರಣವನ್ನು ಮಾಡುವ ಪ್ರಯತ್ನ ನಡೆಯುತ್ತಿದೆಯಾ ಎಂಬ ಪ್ರಶ್ನೆ ಮೂಡುತ್ತದೆ. ಅಷ್ಟೇ ಅಲ್ಲದೆ ಕೇವಲ ಉರ್ದು ಭಾಷಿಕ ಮಹಿಳೆಯರೇ ಇನ್ನು ಅಂಗನವಾಡಿ ಕೇಂದ್ರಗಳನ್ನು ನಡೆಸಲು ಅವಕಾಶ ನೀಡಲಾಗುತ್ತಿದೆಯೇ ಮತ್ತು ಈ ಹುದ್ದೆ ಇನ್ನು ಕೇವಲ ಅವರಿಗೆ ಮಾತ್ರ ಸೀಮಿತವೇ ಎಂಬ ಭೀತಿ ಈಗ ಜನರಲ್ಲಿ ನಿರ್ಮಾಣವಾಗಿದೆ ಎಂದು ತಿಳಿಸಿದರು.ಈಗಾಗಲೇ ಈ ಬಗ್ಗೆ ಚಿಕ್ಕಮಗಳೂರಿನ ಜಾಗೃತ ಕನ್ನಡಿಗರು ವಿರೋಧವನ್ನು ವ್ಯಕ್ತಪಡಿಸಿ ಸಂಬಂಧಿಸಿದ ಅಧಿಕಾರಿಗಳ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ ಕಾಂಗ್ರೆಸ್ ಶಾಸನವಿರುವ ಕರ್ನಾಟಕದಲ್ಲಿ ಪದೇ ಪದೇ ಹಿಂದೂಗಳ ಬಗ್ಗೆ ತುಷ್ಟಿಕರಣ ನೀತಿ ಅನುಸರಿಸುವುದು ಗಮನಕ್ಕೆ ಬರುತ್ತದೆ ಕೇವಲ ಇದೊಂದೇ ಘಟನೆ ಅಲ್ಲದೆ ಇತ್ತೀಚಿಗೆ ರಾಜ್ಯದಲ್ಲಿ ನಡೆದ ಅನೇಕ ಘಟನೆಗಳು ಕಾಂಗ್ರೆಸ್ಸಿನ ಓಲೈಕೆ ರಾಜಕಾರಣದ ಷಡ್ಯಂತರವನ್ನು ಎತ್ತಿ ತೋರಿಸುತ್ತದೆ.ಕಳೆದ ಸೆ.5 ರ ಶಿಕ್ಷಕರ ದಿನಾಚರಣೆಯ ವೇಳೆ ಉಡುಪಿಯ ಪ್ರಾಂಶುಪಾಲ ಬಿ ಜಿ ರಾಮಕೃಷ್ಣ ಅವರು ಹಿಜಾಬ್ ಧರಿಸಿ ಬರಲು ವಿರೋಧಿಸಿದ್ದರೆಂದು ಅವರಿಗೆ ಸಲ್ಲಬೇಕಾಗಿದ್ದ ಉತ್ತಮ ಶಿಕ್ಷಕ ಪ್ರಶಸ್ತಿ ರದ್ದುಗೊಳಿಸಲಾಯಿತು,ಸೆ.11ರಂದು ನಾಗಮಂಗಲದಲ್ಲಿ ನಡೆಯುತ್ತಿದ್ದ ಶಾಂತಿಯುತ ಗಣೇಶೋತ್ಸವದ ಮೇಲೆ ಮತಾಂದರು ಕಲ್ಲುತೂರಾಟ ಮಾಡಿದ್ದರೂ ಈ ಪ್ರಕರಣದಲ್ಲಿ ಆರೋಪಿ ನಂ.1 ರಿಂದ 23 ರ ವರೆಗೆ ಹಿಂದೂ ಕಾರ್ಯಕರ್ತರ ಹೆಸರುಗಳನ್ನು ಸೇರಿಸಲಾಗಿತ್ತು ಈ ಬಾರಿಯ ಗಣೇಶೋತ್ಸವ ಆಚರಣೆ ಸಮಯದಲ್ಲಿ ಸಹ ಪ್ರಸಾದಕ್ಕೆ ಬಿಬಿಎಂಪಿ FSSAI ಕಡ್ಡಾಯಗೊಳಿಸಿತ್ತು ಎಂದು ತಿಳಿಸಿದರು.
ಈ ಎಲ್ಲ ಘಟನೆಗಳಲ್ಲಿ ಕಾಂಗ್ರೆಸ್ ಹಿಂದೂಗಳ ಮೇಲೆ ನಡೆಸುತ್ತಿರುವ ಅನ್ಯಾಯಕ್ಕೆ ಕೊನೆಯೇ ಇಲ್ಲದಂತಾಗಿದೆ ಈಗ ಅಂಗನವಾಡಿ ಹುದ್ದೆಗಳ ಬಗ್ಗೆಯೂ ಸರ್ಕಾರದ ಈ ನಿಲುವಿನಿಂದ ಜನತೆಯಲ್ಲಿ ಅತ್ಯಂತ ಭಯದ ವಾತಾವರಣ ನಿರ್ಮಾಣವಾಗಿದ್ದು ಸಮಸ್ತ ಹಿಂದುಗಳು ಇದರ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ ಹಾಗಾಗಿ ಇಲಾಖೆಯ ಈ ಆದೇಶವನ್ನು ಕೂಡಲೇ ಹಿಂಪಡೆದು ಜಾಲತಾಣದಲ್ಲಿ ಅವಶ್ಯಕ ಬದಲಾವಣೆ ಮಾಡಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಶ್ರೀ ತುಳಜಾಭವಾನಿ ದೇವಸ್ಥಾನ ಸಮಿತಿ ಅಧ್ಯಕ್ಷ ಅರ್ಜುನ್ ರಾವ್,ವಿವಿಧ ಹಿಂದೂ ಪರ ಸಂಘಟನೆಯ ಮುಖಂಡ ಪಿ.ಎನ್ ವಿಶ್ವನಾಥ್,ಪ್ರಕಾಶ್ ಜಿನ್ನು,ಈರೇಶ್ ಶ್ರೀ ಪಾಂಡುರಂಗ ರುಕ್ಮಿಣಿ ದೇವಸ್ಥಾನ ಕಾರ್ಯದರ್ಶಿ ಪಿ. ನಾಗರಾಜ್,ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಟ್ರಸ್ಟ್ ನ ಕಾರ್ಯದರ್ಶಿ ವಿ.ರಘು,ಕರ್ನಾಟಕ ಜನಜಾಗೃತಿ ವೇದಿಕೆಯ ಸುರೇಶ್,ಕಿರಣ್ ಆಚಾರ್ ಮತ್ತಿತರರು ಹಾಜರಿದ್ದರು.