ಕಾರ್ಮಿಕರ ಸೌಲಭ್ಯಗಳ ಅರ್ಜಿ ಸ್ವೀಕಾರ ಮಾಡಲು ಆಗ್ರಹ

| Published : Jun 02 2024, 01:45 AM IST

ಸಾರಾಂಶ

ಕಟ್ಟಡ ಕಾರ್ಮಿಕರ ಸೌಲಭ್ಯಗಳ ಅರ್ಜಿಗಳನ್ನು ಕೂಡಲೇ ಸ್ವೀಕರಿಸಲು ಕ್ರಮವಹಿಸಬೇಕು ಮತ್ತು ಶೈಕ್ಷಣಿಕ ಅರ್ಜಿಗಳನ್ನು ಸ್ವೀಕರಿಸುವ ಅವಧಿಯನ್ನು ಆಗಸ್ಟ್‌ವರೆಗೆ ವಿಸ್ತರಿಸಬೇಕೆಂದು ಆಗ್ರಹ.

ಕಟ್ಟಡ ನಿರ್ಮಾಣ ಕಾರ್ಮಿಕರಿಂದ ಪ್ರತಿಭಟನೆ । ಕಾರ್ಮಿಕ ಸಚಿವರಿಗೆ ಮನವಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ತಡೆಹಿಡಿಯಲಾದ ಕಟ್ಟಡ ಕಾರ್ಮಿಕರ ಸೌಲಭ್ಯಗಳ ಅರ್ಜಿಗಳನ್ನು ಕೂಡಲೇ ಸ್ವೀಕರಿಸಲು ಕ್ರಮವಹಿಸಬೇಕು ಮತ್ತು ಶೈಕ್ಷಣಿಕ ಅರ್ಜಿಗಳನ್ನು ಸ್ವೀಕರಿಸುವ ಅವಧಿಯನ್ನು ಆಗಸ್ಟ್‌ವರೆಗೆ ವಿಸ್ತರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಭವನದ ಎದುರು ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಡಳಿತ ಮೂಲಕ ಕಾರ್ಮಿಕ ಸಚಿವ ಸಂತೋಷ ಲಾಡ್‌ಗೆ ಮನವಿ ಸಲ್ಲಿಸಿದರು.ಜಿಲ್ಲಾಧ್ಯಕ್ಷ ಕಾಸಿಂ ಸರದಾರ್ ಮಾತನಾಡಿ, ಕರ್ನಾಟಕ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳು ಚುನಾವಣೆ ಹೊತ್ತಿನಲ್ಲಿ ಯಾವುದೇ ತಡೆಯಿಲ್ಲದೆ ಜಾರಿಗೊಳ್ಳುತ್ತಿವೆ. ಆದರೆ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆ ನೆಪ ಹಾಗೂ ತಂತ್ರಾಂಶದ ನೆಪವೂಡ್ಡಿ ಫಲಾನುಭವಿ ಕಾರ್ಮಿಕರಿಗೆ ಪಿಂಚಣಿ, ವೈದ್ಯಕೀಯ, ಹೆರಿಗೆ, ಮದುವೆ ಸಹಾಯಧನ ಅರ್ಜಿ ಸ್ವೀಕರಿಸುತ್ತಿಲ್ಲ. ಈ ಮೂಲಕ ಬಡಕಾರ್ಮಿಕರಿಗೆ ನ್ಯಾಯಬದ್ದವಾಗಿ ಸಿಗಬೇಕಾದ ಸೌಲಭ್ಯಗಳನ್ನು ನಿರಾಕರಿಸುತ್ತಿರುವುದು ಸರಿಯಾದ ಕ್ರಮವಲ್ಲ. ಮಂಡಳಿ ಈ ಕ್ರಮವನ್ನು ವಿರೋಧಿಸಿ ರಾಜ್ಯದ ಕಾರ್ಮಿಕಾಧಿಕಾರಿಗಳು ಹಾಗೂ ತಾಲೂಕು ನಿರೀಕ್ಷಕರ ಕಚೇರಿ ಹಾಗೂ ಬೆಂಗಳೂರಿನಲ್ಲಿ ಕಲ್ಯಾಣ ಮಂಡಳಿ ಎದುರು ಪ್ರತಿಭಟನೆ ನಡೆಲಾಗುತ್ತಿದೆ ಎಂದರು.

ಕರ್ನಾಟಕ ಹೈಕೋರ್ಟ್‌ನಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಫೆಡರೇಶನ್ ನೇತೃತ್ವದಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತಾಗಿ ಮಧ್ಯಂತರ ಆದೇಶ ನೀಡಿರುವ ನ್ಯಾಯಾಲಯವು ಅರ್ಜಿದಾರರಾದ ಇಬ್ಬರು ವಿದ್ಯಾರ್ಥಿನಿಯರಿಗೆ ಅವರು ತುಂಬಿರುವ ಕಾಲೇಜು ಶುಲ್ಕವನ್ನು ಈ ಆದೇಶವಾಗಿರುವ ನಾಲ್ಕು ವಾರದೊಳಗೆ ಅವರ ಖಾತೆಗೆ ಪಾವತಿಸಲು ಮಹತ್ವದ ಆದೇಶ ನೀಡಿತ್ತು. ಆದರೆ ಇಬ್ಬರು ಕಟ್ಟಡ ಕಾರ್ಮಿಕರ ಮಕ್ಕಳಾದ ಅಮೃತಾ ಹಾಗೂ ಅಕ್ಷತಾ ಅವರಿಗೆ ೨೦೨೧ರ ಅಧಿಸೂಚನೆ ಅನ್ವಯ ನಾಲ್ಕುವಾರವಾಗುತ್ತಾ ಬಂದರೂ ಕಲ್ಯಾಣ ಮಂಡಳಿಯು ಹೈಕೋರ್ಟ್ ಮಧ್ಯಂತರ ಆದೇಶ ಜಾರಿ ಮಾಡದೇ ಉಲ್ಲಂಘಿಸಿದೆ ಎಂದು ಆರೋಪಿಸಿದರು.

ಕೂಡಲೇ ಆನ್‌ಲೈನ್ ನಲ್ಲಿ ಮಂಡಳಿಯ ಸೌಲಭ್ಯಗಳ ಅರ್ಜಿ ಸ್ವೀಕರಿಸಲು ಕ್ರಮವಹಿಸಬೇಕು. ಮೇ ೩೦ಕ್ಕೆ ಮುಕ್ತಾಯಗೊಂಡ ಶೈಕ್ಷಣಿಕ ಅರ್ಜಿಗಳ ಸ್ವೀಕಾರ ಅವಧಿಯನ್ನು ಆಗಸ್ಟ್ ೩೧ರವರೆಗೆ ವಿಸ್ತರಿಸಬೇಕು. ೨೦೨೩ರ ಅಧಿಸೂಚನೆಯನ್ನು ರದ್ದು ಮಾಡಿ ೨೦೨೧ರ ಅಧಿಸೂಚನೆ ಅನ್ವಯವೇ ಶೈಕ್ಷಣಿಕ ಧನ ಸಹಾಯ.

ಜಾರಿಗೊಳಿಸಬೇಕು. ನೈಜ ಕಟ್ಟಡ ಕಾರ್ಮಿಕರು ವಿವಿಧ ಸೌಲಭ್ಯಗಳಿಗೆ ಸಲ್ಲಿಸಿದ ಅರ್ಜಿಗಳನ್ನು ವಿನಾ ಕಾರಣ ತಿರಸ್ಕರಿಸುತ್ತಿರುವ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಹಾಗೂ ಎಕ್ಸಿಕ್ಯೂಟಿವ್ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ನೈಜ ಕಟ್ಟಡ ಕಾರ್ಮಿಕರನ್ನು ಸೌಲಭ್ಯಗಳಿಂದ ವಂಚಿತರನ್ನಾಗಿರುತ್ತಿರುವ ಅಧಿಕಾರಿಗಳು ಹಾಗೂ ಡಾಟಾ ಆಪರೇಟರ್‌ಗಳನ್ನು ವರ್ಗಾವಣೆ ಮಾಡಬೇಕು. ಹೊಸ ಅರ್ಜಿ ಹಾಗೂ ನವೀಕರಣ ಕುರಿತು ಉಂಟಾಗುತ್ತಿರುವ ತಾಂತ್ರಿಕ ಸಮಸ್ಯೆ ಬಗೆಹರಿಸಬೇಕು. ಎಲ್ಲ ರೀತಿಯ ಖರೀದಿ ನಿಲ್ಲಿಸಿ ಜಾರಿಯಲ್ಲಿರುವ ಎಲ್ಲ ಸೌಲಭ್ಯಗಳ ಸಹಾಯಧನವನ್ನು ನೇರ ವರ್ಗಾವಣೆ ಮೂಲಕವೇ ಪಾವತಿಸಬೇಕು. ಬಾಕಿ ಇರುವ ಸೌಲಭ್ಯಗಳ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಕಾಸಿಂ ಸರದಾರ್, ತಾಲೂಕಾಧ್ಯಕ್ಷ ಹನುಮೇಶ ಭೋವಿ, ಉಪಾಧ್ಯಕ್ಷ ಇಸ್ಮಾಯಿಲ್ ಇಟಗಿ, ಮುಖಂಡರಾದ ದುರ್ಗಮ್ಮ ವಡ್ಡರ್, ಮೆಹಬೂಬ್ ದಫೇದಾರ್, ಮೈಲಾರಪ್ಪ ಮುಂಡರಗಿ ಇತರರಿದ್ದರು.