ಬಚ್ಚಲಪುರಿ ವಿರುದ್ಧ ಕ್ರಮಕ್ಕೆ ಆಗ್ರಹ

| Published : Jan 13 2024, 01:32 AM IST

ಸಾರಾಂಶ

ಬೆಳಗಾವಿ ಮಹಾನಗರ ಪಾಲಿಕೆಯ ಕಚೇರಿಯ ಕಂದಾಯ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯಲ್ಲೇಶ ಬಚ್ಚಲಪುರಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ವಡ್ಡರ ಯುವಕ ಸಂಘದ ನೇತೃತ್ವದಲ್ಲಿ ಪಾಲಿಕೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಇಲ್ಲಿನ ಮಹಾನಗರ ಪಾಲಿಕೆಯ ಕಚೇರಿಯ ಕಂದಾಯ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯಲ್ಲೇಶ ಬಚ್ಚಲಪುರಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ವಡ್ಡರ ಯುವಕ ಸಂಘದ ನೇತೃತ್ವದಲ್ಲಿ ಪಾಲಿಕೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಪರಮೇಶ ಕ್ಯಾರಕಟ್ಟಿ ಮಾತನಾಡಿ, ಯಲ್ಲೇಶ ಬಚ್ಚಲಪುರಿ 2020 ರಲ್ಲಿ ಪ್ರಥಮ ದರ್ಜೆ ಸಹಾಯಕರು ಎಂದು ಸೇವೆಗೆ ಸೇರಿದ್ದಾರೆ. ಆದರೇ ಇವರು ರಾಜಕೀಯ ಪ್ರಭಾವದಿಂದ ಕಂದಾಯ ನಿರೀಕ್ಷರ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ಅವರಿಗೆ ಅನುಕೂಲವಾಗುವ 8 ವಾರ್ಡಗಳನ್ನು ಸತತವಾಗಿ 3 ವರ್ಷ ಕಳೆದರು ರಾಜಕೀಯ ಒತ್ತಡ, ಸಂಘಟನೆ ಒತ್ತಡ, ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ತಂದು ಒಂದೇ ಜಾಗದಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ದೂರಿದರು.

ಸಾರ್ವಜನಿಕರಿಗೆ ಪಿ.ಐ.ಡಿ ಖಾತಾ ಬದಲಾವಣೆ, ಉತಾರ ನೀಡಲು 1 ರಿಂದ 2 ತಿಂಗಳ ಮಟ್ಟಿಗೆ ತಡೆಹಿಡಿದುಕೊಂಡು ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಮಹಿಳಾ ವಸತಿ ನಿಲಯಕ್ಕೆ ಹೋಗಿ ಅಸಭ್ಯ ವರ್ತನೆ ಮಾಡಿದ್ದಾರೆ ಹಾಗೂ ಇವರು ಯಡಿಯೂರಪ್ಪ ಮಾರ್ಗದಲ್ಲಿ 2 ರಿಂದ 3 ಎಕರೆ ಜಾಗೆಯನ್ನು ಭೋವಿ ಮತ್ತು ನೇಕಾರ ಜನರಿಗೆ ಕೊಡಿಸಿ ಅವರಿಗೆ ಇನ್ನುವರೆಗೆ ಯಾವುದೇ ದಾಖಲೆಗಳನ್ನು ನೀಡದೇ ತಮ್ಮ ಹೆಸರಿನಲ್ಲಿ 20 ಗುಂಟೆ ಜಾಗವನ್ನು ಮಾಡಿಕೊಂಡಿರುತ್ತಾರೆ ಎಂದು ಆರೋಪಿಸಿದರು.

ಸ್ಥಳೀಯ ಜನರು ಜಾಗೆಯನ್ನು ಕೇಳಲು ಹೋದರೆ ಗುಂಡಾಗಳನ್ನು ಕರೆಸಿ ಜನರಿಗೆ ಹೆದರಿಸುತ್ತಿದ್ದಾರೆ. ಈ ಕುರಿತು ಶಹಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕರು ಮಹಾನಗರ ಪಾಲಿಕೆಯಲ್ಲಿ ಅನೇಕ ದೂರುಗಳು ನೀಡಿದ್ದರೂ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ . ಅವರ ಮೇಲೆ ಬಹಳಷ್ಟು ಪ್ರಕರಣಗಳು ಬಾಕಿ ಇದ್ದು, ಅದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಅವರ ಮೇಲೆ ಕ್ರಮ ಕೈಗೊಂಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.