ರಾಮನಗರ: ತಾಲೂಕಿನ ಬಿಡದಿ ಹೋಬಳಿ ಬಾನಂದೂರು ಡೇರಿಯಲ್ಲಿ ಅವ್ಯವಹಾರ ನಡೆಸಿರುವ ಸಂಘದ ಸಿಇಒ ಬಿ.ಎಂ.ಕುಮಾರ್ ವಿರುದ್ಧ ಕ್ರಮ ವಹಿಸುವಂತೆ ಒತ್ತಾಯಿಸಿ ಸಂಘದ ಅಧ್ಯಕ್ಷರು, ನಿರ್ದೇಶಕರು ಹಾಗೂ ಗ್ರಾಮದ ಮುಖಂಡರು ಬಮೂಲ್ ರಾಮನಗರ ಶಿಬಿರದ ಉಪ ವ್ಯವಸ್ಥಾಪಕ ಡಾ.ಗಣೇಶ್ ಅವರಿಗೆ ಮನವಿ ಸಲ್ಲಿಸಿದರು
ರಾಮನಗರ: ತಾಲೂಕಿನ ಬಿಡದಿ ಹೋಬಳಿ ಬಾನಂದೂರು ಡೇರಿಯಲ್ಲಿ ಅವ್ಯವಹಾರ ನಡೆಸಿರುವ ಸಂಘದ ಸಿಇಒ ಬಿ.ಎಂ.ಕುಮಾರ್ ವಿರುದ್ಧ ಕ್ರಮ ವಹಿಸುವಂತೆ ಒತ್ತಾಯಿಸಿ ಸಂಘದ ಅಧ್ಯಕ್ಷರು, ನಿರ್ದೇಶಕರು ಹಾಗೂ ಗ್ರಾಮದ ಮುಖಂಡರು ಬಮೂಲ್ ರಾಮನಗರ ಶಿಬಿರದ ಉಪ ವ್ಯವಸ್ಥಾಪಕ ಡಾ.ಗಣೇಶ್ ಅವರಿಗೆ ಮನವಿ ಸಲ್ಲಿಸಿದರು.
ನಗರದ ಕೆಂಪೇಗೌಡ ವೃತ್ತದಲ್ಲಿರುವ ಬಮುಲ್ ಉಪವಿಭಾಗದ ಶಿಬಿರ ಕಚೇರಿಗೆ ಆಗಮಿಸಿದ ಬಾನಂದೂರು ಎಂಪಿಸಿಎಸ್ ಸಂಘದ ಅಧ್ಯಕ್ಷ ಬಸವರಾಜು, ನಿರ್ದೇಶಕರು ಹಾಗೂ ಗ್ರಾಮಸ್ಥರು ಸೋಮವಾರ ಶಿಬಿರ ಉಪ ವ್ಯವಸ್ಥಾಪಕರನ್ನು ಭೇಟಿಯಾಗಿ ಹಾಲು ಉತ್ಪಾದಕರಿಗೆ ಅನ್ಯಾಯವಾಗುತ್ತಿದ್ದು, ಸರಿಪಡಿಸುವಂತೆ ಒತ್ತಾಯಿಸಿದರು.ಸಂಘಕ್ಕೆ ಹಲವು ತಿಂಗಳಿಂದ ವಿಸ್ತರಣಾಧಿಕಾರಿ ಭೇಟಿ ನೀಡಿಲ್ಲ. ಸಂಘದ ಆಡಳಿತ ಮಂಡಳಿ ಸಭೆಗಳಿಗೆ ವಿಸ್ತರಣಾಧಿಕಾರಿ ಗೈರಾಗುವ ಮೂಲಕ ಅವ್ಯವಹಾರದಲ್ಲಿ ಶಾಮೀಲಾಗಿರುವ ಮುಖ್ಯ ಕಾರ್ಯನಿರ್ವಾಹಕನ ರಕ್ಷಣೆಗೆ ನಿಂತಿದ್ದಾರೆ. ಪರೋಕ್ಷವಾಗಿ ಸಹಕಾರ ನೀಡುವ ಮೂಲಕ ಕಳಂಕಿತನ ವಿರುದ್ಧ ಕ್ರಮ ಜರುಗಿಸಲು ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಿಸ್ತರಣಾಧಿಕಾರಿಯನ್ನು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಾಮನಿರ್ದೇಶನ ಮಾಡಿರುವುದರಿಂದ ಆಡಳಿತ ಮಂಡಳಿ ಸಭೆಯಲ್ಲಿ ಅವರೂ ಒಬ್ಬರು ನಿರ್ದೇಶಕರಾಗಿದ್ದಾರೆ. ಜವಾಬ್ದಾರಿ ಇರುವವರು ನಾಲ್ಕೈದು ತಿಂಗಳಿಂದ ಹಾಲು ಉತ್ಪಾದಕರ ಸಹಕಾರ ಸಂಘದ ಕಡೆಗೆ ತಲೆ ಹಾಕಿಲ್ಲ ಎಂದರೆ ಏನರ್ಥ ಎಂದು ಉಪವ್ಯವಸ್ಥಾಪಕ ಡಾ.ಗಣೇಶ್ ಅವರನ್ನು ಪ್ರಶ್ನಿಸಿದರು.ಸಿಇಒ ರಕ್ಷಣೆಗಾಗಿ ಗೈರು:
ನಮ್ಮ ಸಂಘದ ಸಿಇಒ ವಿರುದ್ಧ ಹಣ ದುರ್ಬಳಕೆ ಹಾಗೂ ವಂಚನೆ ಆರೋಪವಿದ್ದು, ಈ ಸಂಬಂಧ ಸಹಕಾರ ನಿಯಮಾವಳಿ 64ರ ಅನುಸಾರ ತನಿಖೆ ನಡೆಸಲಾಗಿದೆ. ತನಿಖೆಯಲ್ಲಿ ಸಿಇಒ ತಪ್ಪು ಬೆಳಕಿಗೆ ಬಂದಿದ್ದು ಲಕ್ಷಾಂತರ ರು. ಸಂಘದ ಹಣ ದುರ್ಬಳಕೆ ಸಾಬೀತಾಗಿದೆ. ಹಣ ಜಮೆ ಮಾಡಿಸಿ ಆತನ ವಿರುದ್ಧ ಕ್ರಮ ಜರುಗಿಸಬೇಕಾದರೆ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯಿಸಿ ಆತನಿಗೆ ನೋಟೀಸ್ ನೀಡಬೇಕು. ವಿಸ್ತರಣಾಧಿಕಾರಿ ಸಭೆಗೆ ಬಾರದಿರುವುದರಿಂದ ಪ್ರಕ್ರಿಯೆಗೆ ಅಡ್ಡಿಯಾಗುತ್ತಿದೆ ಎಂದು ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರು ದೂರಿದರು.ರೈತರಿಗೆ ನಮ್ಮ ಡೇರಿಯಿಂದ ಸಮಪರ್ಕ ಸೇವೆ, ಸವಲತ್ತು ನೀಡಬೇಕು, ಸೂಕ್ತ ಬೆಲೆ ಸಿಗುವಂತಾಗಬೇಕು ಎಂದಾದಲ್ಲಿ ಸಿಇಒ ಸರಿಯಾಗಿ ಕೆಲಸ ಮಾಡಬೇಕು. ಆದರೆ, ಆತ ಆಡಳಿತ ಮಂಡಳಿ ಜೊತೆಗೆ ಸ್ಪಂದಿಸುತ್ತಿಲ್ಲ. ಹಾಗಾಗಿ ಸಭೆಗೆ ಬನ್ನಿ ಎಂದು ಖುದ್ದು ಅಧ್ಯಕ್ಷರು ಕರೆ ಮಾಡಿದರೂ ವಿಸ್ತರಣಾಧಿಕಾರಿ ಉಮೇಶ್ ನಿಮ್ಮ ಊರಿಗೆ ನಾನು ಬರುವುದಿಲ್ಲ ಎಂದು ಹೇಳುತ್ತಾರೆ. ನಮ್ಮ ಡೇರಿಗೆ ವಿಸ್ತರಣಾಧಿಕಾರಿ ನೇಮಿಸಿದ್ದರೆ ಯಾಕೆ ಅವರು ಡೇರಿಗೆ ಬರುತ್ತಿಲ್ಲ. ಈ ಬಗ್ಗೆ ನೀವು ಅವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಸಮಸ್ಯೆ ಪರಿಹರಿಸುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದರು.
ಬಮುಲ್ ಉಪ ವ್ಯವಸ್ಥಾಪಕ ಡಾ.ಗಣೇಶ್ ಪ್ರತಿಕ್ರಿಯಿಸಿ, ನಿಮ್ಮ ಸಂಘಕ್ಕೆ ನಿಯೋಜಸಿದ್ದ ವಿಸ್ತರಣಾಧಿಕಾರಿ ಯತೀಶ್‌ಗೆ ಜೂನ್ ತಿಂಗಳಲ್ಲಿ ಅಪಘಾತವಾಗಿ ಅವರು ರಜೆಯಲ್ಲಿದ್ದಾರೆ. ಮಹಿಳೆಯೊಬ್ಬರನ್ನು ನೇಮಿಸಿದ್ದು, ಅವರು ಕಾರಣಾಂತರದಿಂದ ಹೋಗುವುದಿಲ್ಲ ಎಂದ ಕಾರಣ ಒಂದೂವರೆ ತಿಂಗಳ ಹಿಂದೆ ಉಮೇಶ್‌ರನ್ನು ನೇಮಿಸಲಾಗಿದೆ. ಅವರು ಯಾಕೆ ಬಂದಿಲ್ಲ ಎಂದು ನನಗೂ ಗೊತ್ತಿಲ್ಲ. ವಿಚಾರ ಮಾಡಿ ಹೇಳುತ್ತೇನೆ ಎಂದರು.ಬಾಕ್ಸ್..............ಉಲ್ಟಾ ಹೊಡೆದ ವಿಸ್ತರಣಾಧಿಕಾರಿ:
ಹೊಸ ವಿಸ್ತರಣಾಧಿಕಾರಿಯನ್ನು ಸ್ಥಳಕ್ಕೆ ಕರೆಸಿ ಎಂದು ಡೇರಿ ಪದಾಧಿಕಾರಿಗಳು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಉಪವ್ಯವಸ್ಥಾಪಕರ ಕಚೇರಿಗೆ ಬಂದ ವಿಸ್ತರಣಾಧಿಕಾರಿ ನನಗೆ ಬಾನಂದೂರು ಡೇರಿ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ವಹಿಸಿದ್ದರು. ಆದರೆ, ನಾನು ಈ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ ಎಂದು ಬರೆದುಕೊಟ್ಟಿದ್ದೇನೆಂದರು.ಉಪ ವ್ಯವಸ್ಥಾಪಕರು ಮತ್ತು ವಿಸ್ತರಣಾಧಿಕಾರಿ ಹೇಳಿಕೆ ನಡುವೆ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಕೋಪಗೊಂಡ ಡೇರಿ ಪದಾಧಿಕಾರಿಗಳು ಇದು ನಿಮಗೆ ಶೋಭೆ ತರುವುದಲ್ಲ. ನಮ್ಮ ಸಮಸ್ಯೆಗೆ ಪರಿಹಾರ ಸಿಗುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದರು.
ಬಾಕ್ಸ್...........ಸಭೆ ನಡೆಸಲು ಅಧಿಕಾರಿಗಳ ಸಮ್ಮತಿ:
ಡೇರಿ ಪದಾಧಿಕಾರಿಗಳ ಬಿಗಿಪಟ್ಟಿನಿಂದಾಗಿ ಸಮಸ್ಯೆ ಪರಿಹರಿಸಲು ಸಹಮತ ವ್ಯಕ್ತಪಡಿಸಿದ ಅಧಿಕಾರಿಗಳು ಉಪವ್ಯವಸ್ಥಾಪಕರು ಮತ್ತು ವಿಸ್ತರಣಾಧಿಕಾರಿ ಜತೆಗೂಡಿ ಡೇರಿಗೆ ಬಂದು ಸಭೆ ನಡೆಸಿ ಸಮಸ್ಯೆ ಸರಿಪಡಿಸುತ್ತೇವೆಂದು ಭರವಸೆ ನೀಡಿದ ವೇಳೆ ವಿಸ್ತರಣಾಧಿಕಾರಿ ಉಮೇಶ್ ಪ್ರತಿಕ್ರಿಯಿಸಿ, ನೀವು ಜಗಳ ಮಾಡಿಕೊಳ್ಳದೆ ಸೌಹಾರ್ದಯುತವಾಗಿ ವರ್ತಿಸಿದರೆ ಮಾತ್ರ ಗ್ರಾಮಕ್ಕೆ ಬರುತ್ತೇನೆಂದು ತಿಳಿಸಿ, ಆಡಳಿತ ಮಂಡಳಿಯಿಂದ ಮನವಿ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಬಾನಂದೂರು ಡೇರಿ ನಿರ್ದೇಶಕರಾದ ಜಯಕುಮಾರ್, ಶ್ರೀಧರ್, ಜಿ.ಕುಮಾರ, ಗಿರಿಜಮ್ಮ, ಮಾಜಿ ಅಧ್ಯಕ್ಷ ನಾಗರಾಜು, ಮುಖಂಡರಾದ ಬಾಳೇನಹಳ್ಳಿ ರಾಜಣ್ಣ, ಜಗದೀಶ್ ಗೌಡ, ಮಾದೇಗೌಡ, ರಾಜೇಶ್, ಶಿವನಂಜಪ್ಪ, ರಾಜಶೇಖರ್, ಕಾನೂನು ಸಲಹೆಗಾರ ರಾಜಶೇಖರ್ ಇತರರು ಹಾಜರಿದ್ದರು.24ಕೆಆರ್ ಎಂಎನ್ 7.ಜೆಪಿಜಿ
ಬಮೂಲ್ ಉಪವಿಭಾಗದ ಕಚೇರಿಯಲ್ಲಿ ಬಾನಂದೂರು ಹಾಲಿನ ಡೇರಿ ಪದಾಧಿಕಾರಿಗಳು ಹಾಗೂ ಅಧಿಕಾರಿ ಜತೆಗೆ ಚರ್ಚಿಸುತ್ತಿರುವ ದೃಶ್ಯ.