ಸಾರಾಂಶ
ಕರ್ನಾಟಕದ ನೆಲದಲ್ಲಿ ಕನ್ನಡ ಭಾಷೆ ವಿರುದ್ಧ ಹುನ್ನಾರ ನಡೆಸುತ್ತಿರುವವರನ್ನು ಗಡಿಪಾರು ಮಾಡಬೇಕು ಮತ್ತು ಅವರು ನಡೆಸುತ್ತಿರುವ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು.
ಕನ್ನಡಪ್ರಭ ವಾರ್ತೆ ಖಾನಾಪುರ
ತಾಲೂಕಿನಲ್ಲಿ ಕನ್ನಡ ಭಾಷೆ ನಿರ್ಲಕ್ಷಿಸಿ ಮರಾಠಿ ಭಾಷೆಗೆ ಆದ್ಯತೆ ನೀಡುವಂತೆ ಹೇಳಿಕೆ ನೀಡುವ ಮೂಲಕ ಕನ್ನಡ ವಿರೋಧಿ ಧೋರಣೆ ತಳೆದಿರುವ ವಿಶ್ವ ಭಾರತೀ ಕಲಾ ಕ್ರೀಡಾ ಸಂಘಟನೆ, ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಎಂಇಎಸ್ ಯುವ ಅಘಾಡಿ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಕರ್ನಾಟಕ ಯುವ ರಕ್ಷಣಾ ವೇದಿಕೆ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಸಂಘಟನೆ ಅಧ್ಯಕ್ಷ ಪಾಂಡುರಂಗ ಗೂಳಣ್ಣವರ ಮಾತನಾಡಿ, ಇತ್ತೀಚೆಗೆ ವಿಶ್ವ ಭಾರತೀ ಕಲಾ ಕ್ರೀಡಾ ಸಂಘಟನೆ, ಎಂಇಎಸ್ ಮುಖಂಡರು ಖಾನಾಪುರ ತಾಲೂಕಿನಲ್ಲಿ ಕನ್ನಡ ನಿರ್ಲಕ್ಷಿಸಿ ಮರಾಠಿ ಭಾಷೆಗೆ ಆದ್ಯತೆ ನೀಡಬೇಕು ಎಂದು ಜನಜಾಗೃತಿ ಮೂಡಿಸುತ್ತಿದ್ದಾರೆ. ಈ ವಿಷಯವಾಗಿ ಶಾಸಕ ವಿಠ್ಠಲ ಹಲಗೇಕರಗೂ ಮನವಿ ಸಲ್ಲಿಸಿದ್ದಾರೆ. ಕರ್ನಾಟಕದ ನೆಲದಲ್ಲಿ ಕನ್ನಡ ಭಾಷೆ ವಿರುದ್ಧ ಹುನ್ನಾರ ನಡೆಸುತ್ತಿರುವವರನ್ನು ಗಡಿಪಾರು ಮಾಡಬೇಕು ಮತ್ತು ಅವರು ನಡೆಸುತ್ತಿರುವ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಇದಕ್ಕೆ ತಪ್ಪಿದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಗ್ರೇಡ್-2 ತಹಸೀಲ್ದಾರ್ ರಾಕೇಶ ಬುವಾ ಮನವಿ ಸ್ವೀಕರಿಸಿ ನಾಡ ವಿರೋಧಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಆಪ್ಜಲ್ ಐರಾಣಿ, ಸುಲೇಮಾನ ಕೋಟೂರ, ಆಶಿಪ ಬಾಬಣ್ಣವರ, ಆನಂದ ನಾಗನೂರ, ಜಗದೀಶ ಒಡೆಯರ, ಬಾಲಾಜಿ ಚೌಗುಲೆ ಹಾಗೂ ಇತರರು ಇದ್ದರು.