ನರಗುಂದ: ಪ್ರಚೋದನಕಾರಿ ಭಾಷಣ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನರಗುಂದ ಮಂಡಲ ಅಧ್ಯಕ್ಷ ಶರಣಬಸಪ್ಪ ಪಿಡನಾಯ್ಕರ ಆಗ್ರಹಿಸಿದ್ದಾರೆ.
ಬಿಜೆಪಿ ಯುವ ಮೋರ್ಚಾ ವತಿಯಿಂದ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಸಿಪಿಐ ಮಂಜುನಾಥ ನಡುವಿನಮನಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿದರು. ಆರ್‌ಎಸ್‌ಎಸ್ ಹಾಗೂ ಬಿಜೆಪಿ ಇವೆರಡೂ ವಿಷಸರ್ಪಗಳಿದ್ದಂತೆ, ಅವುಗಳನ್ನು ಕೊಲ್ಲದಿದ್ದರೆ, ನೀವು ಬದುಕುವುದಿಲ್ಲ. ನಮಾಜ್ ಮಾಡುವ ಸಂದರ್ಭದಲ್ಲಿ ವಿಷಸರ್ಪಗಳು ಬಂದರೆ, ಅವುಗಳನ್ನು ಕೊಲ್ಲಬೇಕು ಎಂದು ಕುರಾನ್‌ನಲ್ಲಿ ಹೇಳಿದೆ. ಹೀಗಾಗಿ ಮುಸಲ್ಮಾನರು ವಿಷಸರ್ಪದಂತಿರುವ ಆರ್‌ಎಸ್‌ಎಸ್, ಬಿಜೆಪಿ ಸದಸ್ಯರನ್ನು ಕೊಲ್ಲಬೇಕು ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಹೇಳಿದ್ದಾರೆ. ಅಲ್ಪಸಂಖ್ಯಾತರ ಓಲೈಕೆಯ ಹುಚ್ಚಿನಲ್ಲಿ ಬೇಜವಾಬ್ದಾರಿ, ಪ್ರಚೋದನಾಕಾರಿ ಹೇಳಿಕೆ ನೀಡಿದ್ದು, ದೇಶದಲ್ಲಿರುವ ಲಕ್ಷಾಂತರ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸದಸ್ಯರ ಜೀವಕ್ಕೆ ಅಪಾಯವೊಡ್ಡಿದೆ. ಆತಂಕದ ವಿಷಯವೆಂದರೆ ಖರ್ಗೆ ಅವರು ಇಸ್ಲಾಂನ ಪವಿತ್ರ ಗ್ರಂಥವಾದ ಕುರಾನ್ ಉಲ್ಲೇಖಿಸಿ, ಹತ್ಯೆ ಮಾಡುವುದು ನ್ಯಾಯ ಎಂದಿರುವುದು ಸಮುದಾಯದ ಮೂಲಭೂತವಾದಿಗಳಿಗೆ ಹತ್ಯೆ ಮಾಡಲು ಉತ್ತೇಜನ ನೀಡಿದಂತಾಗಿದೆ ಎಂದರು.ಪ್ರಧಾನ ಕಾರ್ಯದರ್ಶಿ ಮಂಜುನಾಥ ಇಂದಲಕರ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರ ಪ್ರಚೋದನೆಯ ಪರಿಣಾಮ ಉಂಟಾಗಿರುವ ಸೂಕ್ಷ್ಮ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಂಘ ಪರಿವಾರದ ಕಾರ್ಯಕರ್ತರನ್ನು ರಕ್ಷಿಸಲು ಭದ್ರತಾ ವ್ಯವಸ್ಥೆ ಮಾಡಬೇಕು ಮತ್ತು ಲಕ್ಷಾಂತರ ಕಾರ್ಯಕರ್ತರನ್ನು ಹತ್ಯೆ ಮಾಡಲು ಪ್ರಚೋದಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೂಡಲೇ ಬಂಧಿಸಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದರು.
ಸಿಪಿಐ ಮಂಜುನಾಥ ನಡುವಿನಮನಿವರು ಬಿಜೆಪಿ ಕಾರ್ಯಕರ್ತರ ಮನವಿ ಸ್ವೀಕರಿಸಿ ಮೇಲಧಿಕಾರಿಗಳಗೆ ರವಾನೆ ಮಾಡಲಾಗುವುದೆಂದು ಹೇಳಿದರು.ಈ ಸಂದರ್ಭದಲ್ಲಿ ಬಿಜೆಪಿ ನರಗುಂದ ಮಂಡಲದ ಪ್ರ.ಕಾರ್ಯದರ್ಶಿ ಬಸನಗೌಡ ಗಡಿಯಪ್ಪಗೌಡ್ರ, ವಿಠ್ಠಲ ಹವಾಲ್ದಾರ, ಶಿವು ಅಂಗಡಿ, ಪುನೀತ ಜೋಗಣ್ಣವರ, ರಾಮು ಕಾಳೆ, ಸೇರಿದಂತೆ ಮುಂತಾದವರು ಇದ್ದರು.