ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಲೋಕಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹3 ಕೋಟಿಗೂ ಅಧಿಕ ಅನುದಾನ ಬಂದಿದೆ. ಆದರೆ ಕೆಲ ಆರ್‌ಟಿಐ ಕಾರ್ಯಕರ್ತರು, ಸಂಘಟನೆಗಳವರ ಕಾರಣಕ್ಕೆ ಯಾರೂ ಟೆಂಡರ್ ಹಾಕದೇ, ಅಭಿವೃದ್ಧಿ ಕುಂಠಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಪಂ ಸದಸ್ಯರು, ಗ್ರಾಮ ಮುಖಂಡರು ಜಿಲ್ಲಾಡಳಿತ, ಜಿಪಂ ಸಿಇಒ, ಜಿಲ್ಲಾ ಪೊಲೀಸ್ ಇಲಾಖೆಗೆ ಒತ್ತಾಯಿಸಿದರು.ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಗ್ರಾಪಂ ಸದಸ್ಯ ಕೆ.ಓಬಳೇಶ, ಲೋಕಿಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಟೆಂಡರ್ ಕರೆದರೂ ಗುತ್ತಿಗೆದಾರರು ಕಾಮಗಾರಿ ಕೈಗೊಳ್ಳಲು ಮುಂದೆ ಬರುತ್ತಿಲ್ಲ. ಕಾರಣ ಕೇಳಿದರೆ ಕೆಲ ಸಂಘಟನೆಗಳು, ಆರ್‌ಟಿಐ ಕಾರ್ಯಕರ್ತರ ಹೆಸರಿನಲ್ಲಿ ನೀಡುತ್ತಿರುವ ತೊಂದರೆ, ಕಿರುಕುಳವೇ ಕಾರಣ ಎನ್ನುತ್ತಾರೆ ಎಂದರು.
ಗ್ರಾಪಂ ಬಗ್ಗೆ ಅಪಪ್ರಚಾರ ಮಾಡುತ್ತ, ಮಾಧ್ಯಮಗಳಲ್ಲೂ ಸುಳ್ಳು ಮಾಹಿತಿ ಹರಡುತ್ತ ಅಭಿವೃದ್ಧಿಗೆ ಕೆಲವರು ಅಡ್ಡಗಾಲಾಗಿದ್ದಾರೆ. ಪರಿಶಿಷ್ಟ ಜಾತಿ -ಪಂಗಡಗಳ ಕುಂದುಕೊರತೆ ಸಭೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಬರುತ್ತಾರೆಂಬ ವಿಚಾರಕ್ಕೆ ಗ್ರಾಮದ ಕೆಲವರು ತಮಗೆ ₹25 ಸಾವಿರ ಕೊಟ್ಟರೆ ತಾವೇ ಕಾರ್ಯಕ್ರಮ ನಡೆಸುವುದಾಗಿ ಹೇಳಿದ್ದಕ್ಕೆ ವಿರೋಧವ್ಯಕ್ತಪಡಿಸಿದ್ದರಿಂದ ವಿನಾಕಾರಣ ಗ್ರಾಪಂ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ದೂರಿದರು.ಐದಾರು ಜನರು ಗುಂಪು ಕಟ್ಟಿಕೊಂಡು ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಗುತ್ತಿಗೆದಾರರಿಗೆ ತೊಂದರೆ ಕೊಡುತ್ತಾ, ಅಧಿಕಾರಿಗಳಿಗೆ ಹಣ ವಸೂಲಿ ಮಾಡಿಕೊಡುವಂತೆ ಪಿಡಿಒ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಗ್ರಾಪಂ ಅಧ್ಯಕ್ಷರು, ಸದಸ್ಯರು ಹಣ ಮಾಡಿಕೊಂಡಿದ್ದಾರೆಂದು ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಪಂ ಪಿಡಿಒ, ಸಿಬ್ಬಂದಿಗೆ, ಗುತ್ತಿಗೆದಾರರಿಗೆ ಇನ್ನಿಲ್ಲದ ತೊಂದರೆ ನೀಡುತ್ತಿದ್ದಾರೆ. ಸಂಘಟನೆಗಳ ಹೆಸರಿನಲ್ಲಿ ಗುಂಪು ಕಟ್ಟಿಕೊಂಡು ಬರುವವರು, ಆರ್‌ಟಿಐ ಅರ್ಜಿ ಹಾಕುವುದಾಗಿ ಬೆದರಿಸಿ, ಹಣ ವಸೂಲಿ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಅನುವು ಮಾಡಿಕೊಡಬೇಕು ಎಂದರು.ಗ್ರಾಪಂ ಸದಸ್ಯರಾದ ಅಂಜಿನಪ್ಪ ಮುಳ್ಳ, ಜಿ.ಟಿ.ಅಭಿಷೇಕ, ಮಾಜಿ ಅಧ್ಯಕ್ಷರಾದ ಬಿ.ಎಚ್.ಓಬಳೇಶಪ್ಪ, ಶಿವಮೂರ್ತಿ, ಪಿ.ಎಚ್.ಅಂಜಿನಪ್ಪ, ಎಚ್.ಎನ್.ಉಮೇಶ, ಎಚ್.ಎಚ್.ಉಮೇಶ, ಎಂ.ಕೆ.ದಾನಪ್ಪ, ಲೋಕಿಕೆರೆ ಹನುಮಂತಪ್ಪ ಇತರರು ಇದ್ದರು.