ಡೊನೇಶನ್ ವಸೂಲಿ ಮಾಡುತ್ತಿರುವ ಕಾಲೇಜಿನ ಮೇಲೆ ಕ್ರಮಕ್ಕೆ ಆಗ್ರಹ

| Published : Jul 27 2024, 12:54 AM IST

ಡೊನೇಶನ್ ವಸೂಲಿ ಮಾಡುತ್ತಿರುವ ಕಾಲೇಜಿನ ಮೇಲೆ ಕ್ರಮಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದ ನಿಯಮಾವಳಿ ಮೀರಿ ಡೊನೇಶನ್ ವಸೂಲಿ ಮಾಡಿ ವಿದ್ಯಾರ್ಥಿನಿ ಭವಿಷ್ಯ ಹಾಳು ಮಾಡುತ್ತಿರುವ ರಾಣಿಬೆನ್ನೂರಿನ ಎಚ್‌ಎಸ್‌ಬಿ ಪಿಯು ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ ಜಿಲ್ಲಾ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹಾಗೂ ಡಿಡಿಪಿಯು ಉಮೇಶಪ್ಪ ಎಚ್., ಅವರಿಗೆ ಮನವಿ ಸಲ್ಲಿಸಿದರು.

ಹಾವೇರಿ: ಸರ್ಕಾರದ ನಿಯಮಾವಳಿ ಮೀರಿ ಡೊನೇಶನ್ ವಸೂಲಿ ಮಾಡಿ ವಿದ್ಯಾರ್ಥಿನಿ ಭವಿಷ್ಯ ಹಾಳು ಮಾಡುತ್ತಿರುವ ರಾಣಿಬೆನ್ನೂರಿನ ಎಚ್‌ಎಸ್‌ಬಿ ಪಿಯು ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ ಜಿಲ್ಲಾ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹಾಗೂ ಡಿಡಿಪಿಯು ಉಮೇಶಪ್ಪ ಎಚ್. ಅವರಿಗೆ ಮನವಿ ಸಲ್ಲಿಸಿದರು.ರಾಣಿಬೆನ್ನೂರ ತಾಲೂಕಿನ ಕಾಕೋಳ ಗ್ರಾಮದ ವಿದ್ಯಾರ್ಥಿನಿ ಸಹನಾ ಮಹಾಂತೇಶ ಅಡಿವೇರ್ ಕಾಲೇಜಿಗೆ ವಿಚಾರಿಸಲು ಹೋದಾಗ ಸರಿಯಾಗಿ ಮಾಹಿತಿ ನೀಡದೆ ಆಸೆ ಆಮಿಷ ತೋರಿಸಿ ವಿಜ್ಞಾನ ವಿಭಾಗಕ್ಕೆ ೧೦ ಸಾವಿರ ರು. ಕಟ್ಟಿಸಿಕೊಂಡು ದಾಖಲಾತಿ ಮಾಡಿಸಿಕೊಂಡಿದ್ದಾರೆ. ಆದರೆ ವಿದ್ಯಾರ್ಥಿನಿ ಕೆಲವು ದಿನಗಳ ಕಾಲ ತರಗತಿಗೆ ಹೋಗಿ ವಿದ್ಯಾಭ್ಯಾಸ ಮಾಡಲು ಆಗುತ್ತಿಲ್ಲ, ಕಲಾ ವಿಭಾಗಕ್ಕೆ ಹೋಗುತ್ತೇನೆ ಹಾಗಾಗಿ ವರ್ಗಾವಣೆ ಪತ್ರ (ಟಿ.ಸಿ) ಹಾಗೂ ಕಟ್ಟಿದ ಶುಲ್ಕ ವಾಪಸ್ ಕೊಡಿ ಎಂದು ಕಾಲೇಜಿನ ಆಡಳಿತ ಮಂಡಳಿ ಹತ್ತಿರ ವಿನಂತಿಸಿಕೊಂಡಿದ್ದಾರೆ.ಆದರೆ, ಆಡಳಿತ ಮಂಡಳಿ ಯಾವುದೇ ಕಾರಣಕ್ಕೂ ವರ್ಗಾವಣೆ ಪತ್ರ ಕೊಡಲು ಸಾಧ್ಯವಿಲ್ಲ, ಬಾಕಿ ಉಳಿದ ೨೫ ಸಾವಿರ ರು. ಕಾಲೇಜು ಶುಲ್ಕ ತುಂಬಬೇಕು ಹಾಗೂ ವರ್ಗಾವಣೆ ಪತ್ರವನ್ನು ಬೆಂಗಳೂರಿನ ಪಿಯು ಬೋರ್ಡ್‌ಗೆ ಅರ್ಜಿ ಹಾಕಿ ದಂಡ ತುಂಬಿ ಪಡೆದುಕೊಳ್ಳಬೇಕು ಎಂದು ಹೇಳಿ ಸತಾಯಿಸುತಿದ್ದು, ಎಚ್.ಎಸ್.ಬಿ ಪಿಯು ಕಾಲೇಜ್ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಡೊನೇಶನ್ ನಿಯಂತ್ರಣಕ್ಕೆ ಜಿಲ್ಲಾ ಶಿಕ್ಷಣ ರೆಗ್ಯುಲೆಟಿಂಗ್ ಪ್ರಾಧಿಕಾರ (ಡೊನೇಶನ್ ವಿರೋಧಿ ಸಮಿತಿ) ವನ್ನು ತಕ್ಷಣ ರಚಿಸಬೇಕು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್‌ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಮತ್ತು ಶಿಕ್ಷಣ ಇಲಾಖೆಯ ಮುಖ್ಯಸ್ಥರು, ಪಾಲಕರು, ವಿದ್ಯಾರ್ಥಿ ಸಂಘಟನೆಯ ಪ್ರತಿನಿಧಿಗಳ ಜಂಟಿ ಸಭೆಯನ್ನು ಕರೆಯಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿರುವ ಕೇಂದ್ರೀಯ ಶಾಸನ ಜಾರಿಗೆ ತರಬೇಕು ಎಂದು ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್. ಒತ್ತಾಯಿಸಿದರು.ಮನವಿ ಪತ್ರ ಸ್ವೀಕರಿಸಿದ ಡಿಡಿಪಿಯು ಉಮೇಶಪ್ಪ ಎಚ್., ಅವರು ದೂರವಾಣಿ ಮೂಲಕ ಆಡಳಿತ ಮಂಡಳಿಯೊಂದಿಗೆ ಮಾತನಾಡಿ, ಕೂಡಲೇ ವಸೂಲಿ ಮಾಡಿದ ಶುಲ್ಕವನ್ನು ಹಿಂದಿರುಗಿಸಬೇಕು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡರಾದ ಸುಲೇಮಾನ್ ಮತ್ತಿಹಳ್ಳಿ, ಮುತ್ತುರಾಜ್ ಎಚ್. ದೊಡ್ಡಮನಿ, ಮರೆಪ್ಪ ಮ್ಯಾಗಳಮನಿ, ವಿದ್ಯಾರ್ಥಿನಿ ಸಹನಾ ಅಡಿವೇರ್, ಪಾಲಕರಾದ ಮಾಲತೇಶ ಅಡಿವೇರ್, ಸಾವೀತ್ರ ಅಡಿವೇರ್ ಇದ್ದರು.