ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಕೋಗಿಲೆಮನೆ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರ ಇರುವ ಬ್ಯಾನರ್ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ವಾಭಿಮಾನಿ ದಲಿತ ಯುವಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ತಾಲೂಕಿನ ಬಿಕ್ಕೋಡು ಹೋಬಳಿ ಕೋಗಿಲೆ ಮನೆ ವೃತ್ತದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗೆ ಹಾಕಲಾಗಿದ್ದ ಬ್ಯಾನರ್ ಅನ್ನು ಮಂಗಳವಾರ ರಾತ್ರಿ ಕಿಡಿಗೇಡಿಗಳು ಹರಿದು ಹಾಕಿ ಅಂಬೇಡ್ಕರ್‌ಗೆ ಅವಮಾನ ಮಾಡಲಾಗಿದ್ದು ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಾನೂನು ರೀತಿಯ ಕ್ರಮಕೈಗೊಳ್ಳಬೇಕು ಒತ್ತಾಯಿಸಿ ಬುಧವಾರ ಬೆಳಿಗ್ಗೆ ಕೋಗಿಲೆಮನೆ ಹಾಗೂ ಕುಶಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬೇಡ್ಕರ್ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.ಅಂಬೇಡ್ಕರ್ ಸ್ವಾಭಿಮಾನಿ ಬಳಗದ ಅಧ್ಯಕ್ಷ ರೇಣುಕುಮಾರ್ ಮಾತನಾಡಿ, ಮಂಗಳವಾರ ಸಮಿತಿಯ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಸುತ್ತಮುತ್ತಲ ಗ್ರಾಮಸ್ಥರ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮ ಮುಗಿದ ಮೇಲೆ ಮಂಗಳವಾರ ರಾತ್ರಿ ಯಾರೋ ಕಿಡಿಗೆಡಿಗಳು ಸಮಾಜದ ಬೆಳವಣಿಗೆ ಸಹಿಸದೆ ಉದ್ದೇಶಪೂರ್ವಕವಾಗಿ ಬಾಬಾ ಸಾಹೇಬರ ಬ್ಯಾನರ್ ಹರಿದುಹಾಕಿ ಅವಮಾನಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ನಂತರ ಮಾತನಾಡಿದ ಚಂದ್ರು ಕೋಗಿಲೆಮನೆ ಹಾಗೂ ಕುಶಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಲಿತ ಸಮಾಜವನ್ನು ತುಳಿಯುವ ಕೆಲಸ ನಡೆಯುತ್ತಿದೆ. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಬೆಳವಣಿಗೆಗಳನ್ನು ಸಹಿಸದೆ ಕೆಲವು ಕಿಡಿಗೇಡಿಗಳು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಇಂತಹ ಸಮಾಜಘಾತುಕ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ತಪ್ಪಿತಸ್ಥರ ಮೇಲೆ ಅರೇಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಮಂಜಪ್ಪ, ಲೋಕೇಶ್, ಮಹೇಶ್. ಸುಮಂತ್. ಸುರೇಶ್, ಹರೀಶ್, ಸ್ವಾಮಿ, ಶೇಖರ್, ಶಿವಕುಮಾರ್, ಇಂದ್ರೇಶ್, ಮಂಜುನಾಥ್, ವೆಂಕಟೇಶ್, ಧರ್ಮ, ಚನ್ನಯ್ಯ, ರಜಿನಿ ಸೇರಿದಂತೆ ಇತರರು ಹಾಜರಿದ್ದರು.