ಸಾರಾಂಶ
ಗ್ರಾಮಠಾಣಾ ಜಾಗಕ್ಕೆ ಸೇರಿದ ಸುಮಾರು ೧೨ ಅಡಿ ಜಾಗದಲ್ಲಿ ಕೂಡಲೇ ರಸ್ತೆ ಬಿಡಿಸಿಕೊಡುವಂತೆ ಬೇಲೂರು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಮೌಖಿಕವಾಗಿ ಸ್ಥಳದಲ್ಲಿ ಪಿಡಿಒಗೆ ಆದೇಶ ಮಾಡಿದ್ದರೂ ಸಹ ರಸ್ತೆ ಬಿಡಿಸಿಕೊಡುವಲ್ಲಿ ವಿಫಲರಾಗಿರುವ ಪಿಡಿಒ ರಘುನಾಥರವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸುವಂತೆ ಆಗ್ರಹಿಸಿ ಶುಕ್ರವಾರ ಕುಟುಂಬವೊಂದು ಡಿಸಿ ಕಚೇರಿ ಮುಂದೆ ಧರಣಿ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.
ಕನ್ನಡಪ್ರಭ ವಾರ್ತೆ ಹಾಸನ
ಗ್ರಾಮಠಾಣಾ ಜಾಗಕ್ಕೆ ಸೇರಿದ ಸುಮಾರು ೧೨ ಅಡಿ ಜಾಗದಲ್ಲಿ ಕೂಡಲೇ ರಸ್ತೆ ಬಿಡಿಸಿಕೊಡುವಂತೆ ಬೇಲೂರು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಮೌಖಿಕವಾಗಿ ಸ್ಥಳದಲ್ಲಿ ಪಿಡಿಒಗೆ ಆದೇಶ ಮಾಡಿದ್ದರೂ ಸಹ ರಸ್ತೆ ಬಿಡಿಸಿಕೊಡುವಲ್ಲಿ ವಿಫಲರಾಗಿರುವ ಪಿಡಿಒ ರಘುನಾಥರವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸುವಂತೆ ಆಗ್ರಹಿಸಿ ಶುಕ್ರವಾರ ಕುಟುಂಬವೊಂದು ಡಿಸಿ ಕಚೇರಿ ಮುಂದೆ ಧರಣಿ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು. ಜಯಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಬೇಲೂರು ತಾಲೂಕಿನ ಗೋಣಿಸೋಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಗೋಣಿಸೋಮೇನಹಳ್ಳಿ ಗ್ರಾಮದಲ್ಲಿ ನಾನು ವಾಸವಾಗಿರುವ ಮನೆಯ ಪಕ್ಕದಲ್ಲಿ ೧೨ ಅಡಿ ಖಾಲಿ ನಿವೇಶನವಿರುತ್ತದೆ. ಈ ಜಾಗದಲ್ಲಿ ಅನಾಧಿಕಾಲದಿಂದಲೂ ತಿರುಗಾಡಿಕೊಂಡು ಬಂದಿರುತ್ತೇವೆ. ಹೀಗಿರುವಾಗ ನಮ್ಮ ಗ್ರಾಮದವರೇ ಆದ ಮೊಗಣ್ಣೇಗೌಡ ಮತ್ತು ಇತರರು ಈ ಜಾಗದಲ್ಲಿ ನಮ್ಮ ಕುಟುಂಬಕ್ಕೆ ತಿರುಗಾಡದಂತೆ ಅಡ್ಡಗಟ್ಟಿ ಉದ್ದೇಶ ಪೂರಕವಾಗಿ ದನಗಳನ್ನು ಕಟ್ಟುವುದು, ಕಲ್ಲು ಚಪ್ಪಡಿ ಮುಳ್ಳು ಮುಂತಾದವುಗಳನ್ನು ಹಾಕುತ್ತಾರೆ ಮತ್ತು ಜಲ ಜೀವನ್ ಮಿಷನ್ ನಲ್ಲಿಯನ್ನು ಹಾಕಿಸಿಕೊಳ್ಳಲು ಬಿಡುತ್ತಿಲ್ಲ ಎಂದು ದೂರಿದರು. ಈ ಬಗ್ಗೆ ಅನೇಕ ಬಾರಿ ಗ್ರಾ.ಪಂ ಪಿಡಿಒ ರಘುನಾಥ್‌ರವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಬೇಲೂರು ಇಒ ಗಮನಕ್ಕೆ ತರಲಾಗಿದೆ. ಅವರು ಸ್ಥಳ ಪರಿಶೀಲನೆ ಮಾಡಿ ತಕ್ಷಣ ಅಂದಾಜು ೧೦ ಅಡಿ ರಸ್ತೆಗೆ ಜಾಗ ಗುರುತು ಮಾಡಿ ಎಂದು ಪಿಡಿಒಗೆ ಹೇಳಿದ್ದರೂ ಕೂಡ ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದರು.ಇದರಿಂದ ಹೆಣ್ಣು ಮಕ್ಕಳು ವಯಸ್ಸಾದವರು ದವಸ-ಧಾನ್ಯ ನೀರು ತರಲು ತುಂಬಾ ತೊಂದರೆಯಾಗಿರುತ್ತದೆ. ಆದ್ದರಿಂದ ಕೂಡಲೇ ರಸ್ತೆ ಗುರುತು ಮಾಡಿಕೊಡಬೇಕು. ಮತ್ತು ಕೂಡಲೇ ಪಿಡಿಒ ರಘುನಾಥರವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಮನವಿ ಮಾಡಿದರು. ಖಾಲಿ ಗ್ರಾಮಠಾಣಾ ಜಾಗದಲ್ಲಿ ತಕ್ಷಣ ರಸ್ತೆ ಗುರುತುಮಾಡಿ ಅಲ್ಲಿ ಅಡ್ಡಹಾಕಿರುವ ಕಲ್ಲು ಗುಂಡಿಗಳನ್ನು ತೆಗೆಸಬೇಕು, ಎ.ಎ.ಒ ನಲ್ಲಿ ಅಳವಡಿಸಲು ಅವಕಾಶಮಾಡಿಕೊಡಬೇಕು ಹಾಗೂ ಮೊಗಣ್ಣಗೌಡ ಮತ್ತು ಇತರರ ಮೇಲೆ ನಮ್ಮ ಕುಟುಂಬಕ್ಕೆ ತೋಂದರೆ ನೀಡದಂತೆ ಪೊಲೀಸರಿಗೆ ಆದೇಶ ಮಾಡಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ತಮ್ಮ ಬೇಡಿಕೆಯನ್ನು ಮುಂದಿಟ್ಟರು.
ಇದೇ ವೇಳೆ ವಿಜಯಕುಮಾರ್, ಹುಲಿಯಪ್ಪ, ಯೋಗೀಶ್, ಕಮಲ, ಕವಿತ ಇತರರು ಉಪಸ್ಥಿತರಿದ್ದರು.