ಸಾರಾಂಶ
ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿದಿನ ಮುಂಡಗೋಡಕ್ಕೆ ಹೋಗಿ ಬರಲು ಸಾರಿಗೆ ವ್ಯವಸ್ಥೆ ಸಮರ್ಪಕವಾಗಿರದ ಕಾರಣ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಮುಂಡಗೋಡ: ತಾಲೂಕಿನ ನ್ಯಾಸರ್ಗಿ ಗ್ರಾಮಕ್ಕೆ ದಿನಕ್ಕೆ ಮೂರು ಬಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಸಂತೃಪ್ತಿ ಯುವತಿಯರ ಸಂಘಟನೆ ಹಾಗೂ ನ್ಯಾಸರ್ಗಿ ಯುವತಿಯರಿಂದ ಮುಂಡಗೋಡ ಬಸ್ ನಿಲ್ದಾಣಾಧಿಕಾರಿಗಳ ಮೂಲಕ ಶಿರಸಿ ಸಾರಿಗೆ ಸಂಸ್ಥೆ ಬಸ್ ಘಟಕದ ಮುಖ್ಯ ವ್ಯವಸ್ಥಾಪರಿಗೆ ಮನವಿ ಅರ್ಪಿಸಿದರು.
ಕುಂದರಗಿ, ನ್ಯಾಸರ್ಗಿ, ನ್ಯಾಸರ್ಗಿ ಪ್ಲಾಟ್, ನ್ಯಾಸರ್ಗಿ ಗೌಳಿ ದಡ್ಡಿ ಸೇರಿದಂತೆ ಈ ಪ್ರದೇಶ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಸಾರ್ವಜನಿಕರು ಮತ್ತು ಅಸಂಖ್ಯಾತ ವಿದ್ಯಾರ್ಥಿಗಳು ಪ್ರತಿದಿನ ನ್ಯಾಸರ್ಗಿ ಮಾರ್ಗವಾಗಿ ಮುಂಡಗೋಡ ಪಟ್ಟಣಕ್ಕೆ ಹೋಗಬೇಕಾಗುತ್ತದೆ. ನ್ಯಾಸರ್ಗಿಯಲ್ಲಿರುವ ಸರ್ಕಾರಿ ಕೈಗಾರಿಕಾ ಕೇಂದ್ರಕ್ಕೆ(ಕಾಲೇಜ್)ಮುಂಡಗೋಡ ತಾಲೂಕಿನ ವಿವಿಧ ಹಳ್ಳಿಗಳಿಂದ ವಿದ್ಯಾಭ್ಯಾಸಕ್ಕೆ ಬರುತ್ತಾರೆ. ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿದಿನ ಮುಂಡಗೋಡಿಗೆ ಹೋಗಿ ಬರಲು ಸಾರಿಗೆ ವ್ಯವಸ್ಥೆ ಸಮರ್ಪಕವಾಗಿರದ ಕಾರಣ ತೀವ್ರ ತೊಂದರೆ ಅನುಭವಿಸುವಂತಾಗಿದೆ.ಹಾಗಾಗಿ ಪ್ರತಿದಿನ ಬೆಳಗ್ಗೆ ೮:೩೦, ಮಧ್ಯಾಹ್ನ ೧:೩೦ ಹಾಗೂ ಸಂಜೆ ೫:೩೦ಕ್ಕೆ ಈ ರೀತಿಯಾಗಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿ, ನ್ಯಾಸರ್ಗಿ ಮತ್ತು ಅಕ್ಕಪಕ್ಕದ ಹಳ್ಳಿಗಳ ಜನತೆಗೆ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ನ್ಯಾಸರ್ಗಿ ಗ್ರಾಮಕ್ಕೆ ಪ್ರತ್ಯೇಕವಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಅದಕ್ಕೆ ಪರ್ಯಾಯವಾಗಿ ಹುಬ್ಬಳ್ಳಿ- ಶಿರಸಿ ಮಾರ್ಗವಾಗಿ ಚಲಿಸುವ ಬಸ್‌ಗಳನ್ನು ನ್ಯಾಸರ್ಗಿ ಮಾರ್ಗವಾಗಿ ಸಾಗಿ ಮುಂದೆ ಬಾಚಣಕಿ ಗ್ರಾಮಕ್ಕೆ ತಲುಪುವ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.