ಖಾಸಗಿ ಶಾಲೆಗಳಲ್ಲಿ ಹೆಚ್ಚುತ್ತಿರುವ ಡೊನೇಷನ್ ಹಾವಳಿಯಿಂದ ಗ್ರಾಮೀಣ ಪ್ರದೇಶದ ಬಡ, ಕೂಲಿ ಕಾರ್ಮಿಕ ಹಾಗೂ ದಲಿತ ಕುಟುಂಬಗಳ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತ
ಕನಕಗಿರಿ: ತಾಲೂಕು ವ್ಯಾಪ್ತಿಯ ಎಲ್ಲ ಶಾಲಾ-ಕಾಲೇಜುಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದು ಹಾಗೂ ಎಲ್ಲ ಗ್ರಾಮಗಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಎಸ್‌ಎಫ್‌ಐ ತಾಲೂಕು ಘಟಕದಿಂದ ಬುಧವಾರ ಪ್ರತಿಭಟನೆ ನಡೆಸಿ ವಾಲ್ಮೀಕಿ ವೃತ್ತದಲ್ಲಿ ಶಿರಸ್ತೇದಾರ ಶರಣಪ್ಪರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಶಿವಕುಮಾರ ಈಚನಾಳ ಮಾತನಾಡಿ, ತಾಲೂಕಿನ ಹಲವು ಸರ್ಕಾರಿ ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿವ ನೀರು, ಶೌಚಗೃಹ, ಸುಸಜ್ಜಿತ ಕಟ್ಟಡ ಹಾಗೂ ಶಿಕ್ಷಕರ ಕೊರತೆಯಿದೆ. ಕೆಲವು ಶಾಲೆಗಳಲ್ಲಿ ಒಬ್ಬರೂ ಕಾಯಂ ಶಿಕ್ಷಕರಿಲ್ಲದ ಪರಿಸ್ಥಿತಿಯಿದ್ದು, ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.ಖಾಸಗಿ ಶಾಲೆಗಳಲ್ಲಿ ಹೆಚ್ಚುತ್ತಿರುವ ಡೊನೇಷನ್ ಹಾವಳಿಯಿಂದ ಗ್ರಾಮೀಣ ಪ್ರದೇಶದ ಬಡ, ಕೂಲಿ ಕಾರ್ಮಿಕ ಹಾಗೂ ದಲಿತ ಕುಟುಂಬಗಳ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ವಸತಿ ನಿಲಯಗಳಲ್ಲಿ ಅನೇಕ ಸಮಸ್ಯೆಗಳಿವೆ. ಕೆಲ ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡಗಳಿಲ್ಲದೆ, ಬಾಡಿಗೆ ಕಟ್ಟಡಗಳಲ್ಲಿ ಹಾಗೂ ಗೋದಾಮು ಮಾದರಿಯ ಕಟ್ಟಡಗಳಲ್ಲಿ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಸೌಲಭ್ಯಗಳಿಲ್ಲವಾಗಿದೆ ಎಂದು ದೂರಿದರು.
ಕನಕಗಿರಿ ತಾಲೂಕಿನ ಸಿರಿವಾರ, ಬೈಲಕುಂಪುರ, ಅಡವಿಬಾವಿ ತಾಂಡಾ, ದೇವಲಾಪುರ, ಬಂಕಾಪುರ, ಕರಡಿಗುಡ್ಡ ಸೇರಿ ಇತರೆಡೆಯಿಂದ ಬರುವ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜು ಸಮಯಕ್ಕೆ ಬಸ್ ಸೌಲಭ್ಯವಿಲ್ಲವಾಗಿದ್ದು, ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ, ರಾಜ್ಯ ಹೆದ್ದಾರಿಯಲ್ಲಿರುವ ಗ್ರಾಮಗಳಲ್ಲಿ ವಿದ್ಯಾರ್ಥಿಗಳಿರುವಾಗ ಬಸ್ ನಿಲ್ಲಿಸದೆ ಸಾಗುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.ತಾಲೂಕಾಧ್ಯಕ್ಷ ಹನುಮೇಶ ಮ್ಯಾಗಡೆ, ನಿಕಟಪೂರ್ವ ರಾಜ್ಯಾಧ್ಯಕ್ಷ ಅಮರೇಶ ಕಡಗದ, ಪಲ್ಲವಿ, ಜ್ಯೋತಿ, ದುರ್ಗಮ್ಮ, ಸಂಜನಾ, ಪ್ರಕಾಶ ಇತರರಿದ್ದರು.