ಬರ ಪರಿಹಾರ ಸಮರ್ಪಕವಾಗಿ ತಲುಪಿಸಲು ಆಗ್ರಹ

| Published : May 23 2024, 01:01 AM IST

ಸಾರಾಂಶ

ಎಲ್ಲ ರೈತರಿಗೂ ಬರ ಪರಿಹಾರ ಸಮರ್ಪಕವಾಗಿ ತಲುಪಬೇಕು ಎಂದು ಆಗ್ರಹಿಸಿದ ಕರ್ನಾಟಕ ರಾಜ್ಯ ರೈತ ಸಂಘಟನೆಯ ತಾಲೂಕು ಘಟಕದ ವತಿಯಿಂದ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ತಹಶೀಲ್ದಾರಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘಟನೆಯ ತಾಲೂಕು ಘಟಕದ ವತಿಯಿಂದ ಮನವಿ

ಕನ್ನಡಪ್ರಭ ವಾರ್ತೆ ಕುಕನೂರು

ಎಲ್ಲ ರೈತರಿಗೂ ಬರ ಪರಿಹಾರ ಸಮರ್ಪಕವಾಗಿ ತಲುಪಬೇಕು ಎಂದು ಆಗ್ರಹಿಸಿದ ಕರ್ನಾಟಕ ರಾಜ್ಯ ರೈತ ಸಂಘಟನೆಯ ತಾಲೂಕು ಘಟಕದ ವತಿಯಿಂದ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ತಹಶೀಲ್ದಾರಗೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯಲ್ಲಿ ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಸಂಪೂರ್ಣ ಬರ ಆವರಿಸಿದೆ. ರೈತರಿಗೆ ಹಗ್ಗಜಗ್ಗಾಟದ ಮಧ್ಯೆ ರಾಜ್ಯ ಸರ್ಕಾರ ಪರಿಹಾರ ನೀಡುತ್ತಿದೆ. ಜಿಲ್ಲೆಯಲ್ಲಿ ಅರ್ಧಕ್ಕಿಂತ ಕಡಿಮೆ ರೈತರಿಗೆ ಪರಿಹಾರ ಸಿಕ್ಕಿದೆ. ನಿಯಮಗಳಿಂದಾಗಿ ಹಲವಾರು ರೈತರು ಪರಿಹಾರದಿಂದ ವಂಚಿತವಾಗಿದ್ದಾರೆ. ಶೇ.80ರಷ್ಟು ಮಳೆ ಕೊರತೆಯಿಂದಾಗಿ ಮುಂಗಾರು ಹಾಗು ಹಿಂಗಾರು ಎರಡೂ ಬೆಳೆಗಳು ಹಾಳಾಗಿವೆ. ಮಳೆ ನಂಬಿಕೊಂಡು ಕೃಷಿ ಮಾಡುವ ರೈತರು ಈಗಾಗಲೇ ಸಂಕಷ್ಟ ಅನುಭವಿಸಿದ್ದಾರೆ. ಪ್ರತಿ ಎಕರೆಗೆ ಕನಿಷ್ಠ ₹20 ರಿಂದ 25 ಸಾವಿರ ಖರ್ಚು ಮಾಡಿದ್ದಾರೆ. ಆದರೆ ಮಳೆ ಕೊರತೆಯಿಂದ ರೈತರಿಗೆ ಒಂದು ನೈಯಾಪೈಸೆಯೂ ಕೃಷಿಯಿಂದ ಆದಾಯ ಬಂದಿಲ್ಲ. ಚುನಾವಣೆಯ ಮಧ್ಯೆ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಿದೆ. ಆದರೆ ಬಹಳಷ್ಟು ರೈತರಿಗೆ ಈ ಬೆಳೆ ಪರಿಹಾರ ಸಿಕ್ಕಿಲ್ಲ. ಈ ಪರಿಹಾರಕ್ಕಾಗಿ ರೈತರು ಪರದಾಡುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಮಗೆ ಸಮರ್ಪಕವಾಗಿ ಪರಿಹಾರ ಸಿಗುತ್ತಿಲ್ಲ. ಕೂಡಲೇ ಸರ್ಕಾರ ಎಲ್ಲ ರೈತರಿಗೂ ಬರ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಅಂದಪ್ಪ ರುದ್ರಪ್ಪ ಕೊಳೂರು, ಕುಕನೂರು ತಾಲೂಕು ಅಧ್ಯಕ್ಷ ಹನುಮಂತಪ್ಪ ಮುತ್ತಾಳ, ಇತರ ರೈತರಿದ್ದರು.

ಬರ ಪೀಡಿತ ರೈತರಿಗೆ ವಿಮಾ ಪರಿಹಾರ ವಿತರಿಸಲು ಮನವಿ:

ಬರಪೀಡಿತ ಪ್ರದೇಶದ ರೈತ ಸಮೂಹಕ್ಕೆ ವಿಳಂಬ ಮಾಡದೇ ತ್ವರಿತಗತಿಯಲ್ಲಿ ಬರಪರಿಹಾರ ಹಣ ಹಾಗೂ ಬೆಳೆ ವಿಮೆ ಪಾವತಿಸುವಂತೆ ಆಗ್ರಹಿಸಿ ಯಲಬುರ್ಗಾ ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿ ಗ್ರೇಡ್‌-೨ ತಹಸೀಲ್ದಾರ್‌ ನಾಗಪ್ಪ ಸಜ್ಜನಗೆ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ) ಬಣದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ತಾಲೂಕಾಧ್ಯಕ್ಷ ಶಂಕರ ಮೂಲಿ ಮಾತನಾಡಿ, ೨೦೨೩ -೨೪ನೇ ಸಾಲಿನಲ್ಲಿ ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿರುವದರಿಂದ, ಕೊಪ್ಪಳ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಿಸಿದ ರಾಜ್ಯ ಸರಕಾರ ಕೂಡಲೇ ಪ್ರತಿಯೊಬ್ಬ ರೈತರಿಗೂ ಬರ ಪರಿಹಾರ ಹಣ ಸಮರ್ಪಕವಾಗಿ ತಲುಪಿಸಿಲ್ಲ. ಯಾವುದೇ ಕ್ರಾಪ್ ಸರ್ವೆ ಆಧಾರವನ್ನು ಪರಿಗಣಿಸದೇ ಜಿಲ್ಲೆಯ ಪ್ರತಿಯೊಬ್ಬ ರೈತರಿಗೆ ಪರಿಹಾರ ಹಣವನ್ನು ಕೂಡಲೇ ತಲುಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ೨೦೨೩-೨೪ನೇ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಬೆಳೆ ವಿಮಾ ತುಂಬಿದ ರೈತ ವಿಮಾದಾರರಿಗೆ ಕೂಡಲೇ ಎಲ್ಲ ಬೆಳೆಗಳನ್ನು ಬೆಳೆ ನಷ್ಟ ಎಂದು ಪರಿಗಣಿಸಿ ಬೆಳೆ ನಷ್ಟದ ಹಣವನ್ನು ಕೂಡಲೇ ನೀಡುವಂತೆ ಆಗ್ರಹಿಸಿದರು.ಗ್ರೇಡ್‌-೨ ತಹಸೀಲ್ದಾರ್‌ ನಾಗಪ್ಪ ಸಜ್ಜನ ಮನವಿ ಸ್ವೀಕರಿಸಿ ಮಾತನಾಡಿ, ಕೂಡಲೇ ಸರ್ಕಾರಕ್ಕೆ ಮನವಿ ಕಳುಹಿಸಿಕೊಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರಾಜಶೇಖರ ಶ್ಯಾಗೋಟಿ, ವೀರೇಂದ್ರ ಈಳಿಗೇರ, ಹನುಮೇಶ ಬುಡಶೆಟ್ನಾಳ, ಶರಣಪ್ಪ ತಿಪ್ಪನಾಳ, ಕರಿಯಪ್ಪ ತಳವಾರ, ಬಸವರಾಜ ಮೂಲಿ, ಶರಣಪ್ಪ ಬೊಮ್ಮಸಾಗರ, ಶಿವರಾಜ ಚಿಕ್ಕೊಪ್ಪ ಮತ್ತಿತರರು ಇದ್ದರು.