ಕೊನೇ ಭಾಗದ ಜಮೀನುಗಳಿಗೆ ಸಮರ್ಪಕ ನೀರು ಹರಿಸುವಂತೆ ಆಗ್ರಹ

| Published : Feb 25 2025, 12:46 AM IST

ಕೊನೇ ಭಾಗದ ಜಮೀನುಗಳಿಗೆ ಸಮರ್ಪಕ ನೀರು ಹರಿಸುವಂತೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ವಿ.ಸಿ.ನಾಲೆ ವ್ಯಾಪ್ತಿಯ ಕೊನೆ ಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ಮದ್ದೂರು ತಾಲೂಕಿನ ಸಾದೊಳಲು ಗ್ರಾಮದ ರೈತರು ಸೋಮವಾರ ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ವಿ.ಸಿ.ನಾಲೆ ವ್ಯಾಪ್ತಿಯ ಕೊನೆ ಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ತಾಲೂಕಿನ ಸಾದೊಳಲು ಗ್ರಾಮದ ರೈತರು ಸೋಮವಾರ ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ನಿಗಮದ ಎಇಇ ನಾಗರಾಜು ಕೊಠಡಿಗೆ ನುಗ್ಗಿದ ರೈತರ ಗುಂಪು ಅವಧಿಗೆ ಮುನ್ನವೇ ನಾಲೆಯಲ್ಲಿ ನೀರು ನಿಲುಗಡೆ ಮಾಡಿರುವುದನ್ನು ಖಂಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಾದೊಳಲು ಗ್ರಾಮದಿಂದ ಆಗಮಿಸಿದ್ದ ರೈತರು ಕಾವೇರಿ ನೀರಾವರಿ ನಿಗಮದ ಮೂರನೇ ವಿ.ಸಿ.ನಾಲೆ ಉಪ ವಿಭಾಗದ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು. ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ವಿಸಿ ನಾಲೆ ಕೊನೆ ಭಾಗದ ಜಮೀನುಗಳಿಗೆ ನಾಲೆ ಮೂಲಕ ಮೂರು ದಿನಗಳ ಕಾಲ ನೀರು ಹರಿಸಲು ನಿಗದಿಯಾಗಿದ್ದರೂ ಸಹ ಒಂದು ದಿನ ಮೊದಲೇ ನೀರು ನಿಲುಗಡೆ ಮಾಡಿರುವ ಅಧಿಕಾರಿಗಳ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನೀರಿನ ಸಮಸ್ಯೆಯಿಂದ ವಿ.ಸಿ.ನಾಲಾ ವ್ಯಾಪ್ತಿಯ ಸಾವಿರ 1150 ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಕಬ್ಬು ಮತ್ತು ರಾಗಿಗೆ ನೀರಿನ ಸಮಸ್ಯೆ ಎದುರಾಗಿ ಒಣಗುವ ಹಂತಕ್ಕೆ ಬಂದಿದೆ. ನಿಗದಿಯಂತೆ ನಾಲೆ ಮೂಲಕ ನೀರು ಕಾರಣ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ ಎಂದು ಆರೋಪಿಸಿದರು.

ನಿಗಮದ ಅಧಿಕಾರಿಗಳು ಈ ತಕ್ಷಣ ನಾಲೆಗಳ ಪರಿಶೀಲನೆ ನಡೆಸಿ ಹೂಳು ಮತ್ತು ಗಿಡಗಂಟೆಗಳನ್ನು ತೆಗೆದು ನೀರು ಸಮರ್ಪಕವಾಗಿ ಹರಿಯಲು ಕ್ರಮ ಕೈಗೊಳ್ಳಬೇಕು. ನಾಲಾ ವ್ಯಾಪ್ತಿಯಲ್ಲಿ ರೈತರು ಅನಧಿಕೃತವಾಗಿ ಅಳವಡಿಸಿರುವ ಪೈಪ್‌ಗಳನ್ನು ತೆರವುಗೊಳಿಸಿ ನಾಲೆಯಲ್ಲಿ ನೀರು ನೀರು ಸಮರ್ಪಕವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ನಿಗಮದ ಅಧಿಕಾರಿ ನಾಗರಾಜ್ ಅವರಿಗೆ ರೈತರ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಬಲ್ಲೇಗೌಡ, ಕಾಂತರಾಜು, ಚನ್ನರಾಜು, ಪ್ರಕಾಶ, ಮಲ್ಲ, ಬಸವರಾಜು ಮತ್ತಿತರರು ಭಾಗವಹಿಸಿದ್ದರು.