ಕನ್ನಡ ನಾಮಫಲಕ ಅಳವಡಿಕೆಗೆ ಕರವೇ ಆಗ್ರಹ

| Published : Dec 28 2023, 01:46 AM IST / Updated: Dec 28 2023, 01:47 AM IST

ಸಾರಾಂಶ

ಬೆಳಗಾವಿ ನಗರವನ್ನು ಕನ್ನಡಮಯವನ್ನಾಗಿಸಲು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಂಗ್ಲ ಮತ್ತು ಮರಾಠಿ ಭಾಷೆಯಲ್ಲಿ ನಾಮಫಲಕ ಹಾಕಿರುವ ಅಂಗಡಿ ಮಾಲೀಕರಿಗೆ ಗುಲಾಬಿ ಹೂ ನೀಡಿ, ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸುವಂತೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ನಗರವನ್ನು ಕನ್ನಡಮಯವನ್ನಾಗಿಸಲು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವಿಭಿನ್ನ ಅಭಿಯಾನ ಆರಂಭಿಸಿದ್ದಾರೆ.

ನಗರದ ಚನ್ನಮ್ಮ ವೃತ್ತದಿಂದ ಕರವೇ ಕಾರ್ಯಕರ್ತರು ಅಭಿಯಾನ ಆರಂಭಿಸಿದರು. ಒಂದು ತಿಂಗಳ ಅವಧಿಯೊಳಗೆ ಆಂಗ್ಲ ಮತ್ತು ಮರಾಠಿ ಭಾಷೆಯಲ್ಲಿ ನಾಮಫಲಕ ಹಾಕಿರುವ ಅಂಗಡಿ ಮಾಲೀಕರಿಗೆ ಗುಲಾಬಿ ಹೂ ನೀಡಿ, ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸುವಂತೆ ಕರವೇ ಕಾರ್ಯಕರ್ತರು ಮನವಿ ಮಾಡಿದರು.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು, ಹಾಗಾಗಿ, ಕನ್ನಡದಲ್ಲೇ ನಾಮಫಲಕವನ್ನು ಅಳವಡಿಸಲೇಬೇಕು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ 50 ವರ್ಷಗಳಾಗಿವೆ. ಈ ಕಾರಣಕ್ಕೆ ಕನ್ನಡದಲ್ಲೇ ಬೋರ್ಡ್ ಹಾಕಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಕನ್ನಡ ಬೋರ್ಡ್ ಹಾಕದಿದ್ದರೆ ಆಂಗ್ಲ, ಮರಾಠಿ ಬೋರ್ಡ್ ತೆರವು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.