ಬ್ಯಾಡಗಿಯಲ್ಲಿ ಹಳೆಯ ಅರ್ಜಿದಾರರಿಗೆ ಆಶ್ರಯ ನಿವೇಶನ ಹಂಚಿಕೆಗೆ ಆಗ್ರಹ

| Published : Jul 19 2025, 01:00 AM IST

ಬ್ಯಾಡಗಿಯಲ್ಲಿ ಹಳೆಯ ಅರ್ಜಿದಾರರಿಗೆ ಆಶ್ರಯ ನಿವೇಶನ ಹಂಚಿಕೆಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಆಶ್ರಯ ನಿವೇಶನ ಪಡೆದುಕೊಂಡ ಬಳಿಕ ಕಾಗದ ಪತ್ರಗಳನ್ನು ಹಿಡಿದುಕೊಂಡು ಓಡಾಡುವುದು ಬೇಡ. ಅದಕ್ಕಾಗಿ ಲೇಔಟ್ ನಿರ್ಮಿಸಿ ನಕ್ಷೆಯೊಂದಿಗೆ ಅಭಿವೃದ್ಧಿಪಡಿಸುವ ಮೂಲಕ ಬಡವರಿಗೆ ಕೊಡಿಸುವ ಕೆಲಸವಾಗಬೇಕು.

ಬ್ಯಾಡಗಿ: ಕಳೆದ 2017ರಲ್ಲಿ ನಿರ್ಧರಿಸಿದ 833 ಫಲಾನುಭವಿಗಳ ಪಟ್ಟಿಯಲ್ಲೇ 416 ಜನರನ್ನು ಆಯ್ಕೆ ಮಾಡಬೇಕು ಹಾಗೂ ನಿವೇಶನಕ್ಕಾಗಿ ₹30 ಸಾವಿರ ಹಣ ತುಂಬಿದ ಎಲ್ಲ ಫಲಾನುಭವಿಗಳಿಗೆ ಬಡ್ಡಿಸಹಿತ ಹಣ ಮರಳಿಸುವಂತೆ ಆಶ್ರಯ ನಿವೇಶನ ಹೋರಾಟ ಸಮಿತಿ ಸದಸ್ಯರು ನಗರ ಆಶ್ರಯ ಸಮಿತಿ ಅಧ್ಯಕ್ಷ ಮುನಾಫ್ ಎರೆಶೀಮಿ ಅವರಿಗೆ ಆಗ್ರಹಿಸಿದರು.

ಪಟ್ಟಣದ ಪುರಸಭೆಯಲ್ಲಿನ ಕಚೇರಿಗೆ ನಿಯೋಗದೊಂದಿಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ, ಯಾವುದೇ ಕಾರಣಕ್ಕೂ ಹೊಸ ಅರ್ಜಿದಾರರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಬಿಗಿಪಟ್ಟು ಹಿಡಿದ ಅವರು, ಹಣ ತುಂಬಿದವರು ಬಹುತೇಕರು ಬಡವರಾಗಿದ್ದಾರೆ. ಮೊದಲಿದ್ದ ಎಲ್ಲ ಫಲಾನುಭವಿಗಳಿಗೂ ನಿವೇಶನಗಳನ್ನು ನೀಡುವಂತೆ ಆಗ್ರಹಿಸಿದರು.

ಏಜೆಂಟರುಗಳಿಗೆ ಬ್ರೇಕ್ ಹಾಕಿ: ತಾವು ಆಶ್ರಯ ನಿವೇಶನಗಳನ್ನು ಉಚಿತವಾಗಿ ಒದಗಿಸುತ್ತಿದ್ದಿರಿ. ಆದರೆ ನಿವೇಶನ ಕೊಡಿಸುವುದಾಗಿ ಊರ ತುಂಬೆಲ್ಲ ಏಜೆಂಟರು ಹುಟ್ಟಿಕೊಂಡಿದ್ದಾರೆ. ಪುರಸಭೆಯಲ್ಲಿನ ನೌಕರರು ಸಹ ಇದರಲ್ಲಿ ಸೇರ್ಪಡೆಗೊಂಡಿದ್ದಾರೆ. ಹಣ ಕೊಡಿಸುವ ವಿಚಾರದಲ್ಲಿ ಯಾರನ್ನು ಹಿಡಿಯಬೇಕು, ಯಾರಿಂದ ಕೆಲಸವಾಗುತ್ತದೆ ಎಂಬುದರ ಕುರಿತು ಪ್ರಶ್ನೆಗಳು ಫಲಾನುಭವಿಗಳಲ್ಲಿ ಮೂಡುತ್ತಿದೆ. ನಿಮ್ಮ ಹೆಸರನ್ನು ಹೇಳಿಕೊಂಡು ₹50 ಸಾವಿರದಿಂದ ₹1 ಲಕ್ಷದವರೆಗೆ ಬಡವರಿಂದ ಹಣ ಪೀಕುತ್ತಿದ್ದು, ಇದಕ್ಕೆ ನಿಮ್ಮ ಸಹಕಾರವಿದೆಯೇ ಎಂದು ಪ್ರಶ್ನಿಸಿದರು.

ಲೇಔಟ್ ನಿರ್ಮಿಸಿಯೇ ಪಟ್ಟಾ ಕೊಡಿ: ಪಾಂಡು ಸುತಾರ ಮಾತನಾಡಿ, ಆಶ್ರಯ ನಿವೇಶನ ಪಡೆದುಕೊಂಡ ಬಳಿಕ ಕಾಗದ ಪತ್ರಗಳನ್ನು ಹಿಡಿದುಕೊಂಡು ಓಡಾಡುವುದು ಬೇಡ. ಅದಕ್ಕಾಗಿ ಲೇಔಟ್ ನಿರ್ಮಿಸಿ ನಕ್ಷೆಯೊಂದಿಗೆ ಅಭಿವೃದ್ಧಿಪಡಿಸುವ ಮೂಲಕ ಬಡವರಿಗೆ ಕೊಡಿಸುವ ಕೆಲಸವಾಗಬೇಕು ಎಂದ ಅವರು, ಅಭಿವೃದ್ಧಿ ಕೆಲಸಗಳಾದ ಹೊರತು ಆತುರದಲ್ಲಿ ನಿವೇಶನ ಹಂಚಿಕೆ ಮಾಡದಂತೆ ಮನವಿ ಮಾಡಿದರು.

ಫರೀದಾಬಾನು ನದೀಮುಲ್ಲಾ ಮಾತನಾಡಿ, ಕಾಣದ ಕೈಗಳು ಬೆಟ್ಟದ ಮಲ್ಲೇಶ್ವರ ಬಡಾವಣೆಯಲ್ಲಿ ಅನಧಿಕೃತವಾಗಿ ನಿವೇಶನಗಳನ್ನು ಇಟ್ಟುಕೊಂಡಿದ್ದಾರೆ. ಕೂಡಲೇ ಸಮಗ್ರ ತನಿಖೆ ನಡೆಸುವ ಮೂಲಕ ಅಲ್ಲಿರುವ ಎಲ್ಲ ನಿವೇಶನಗಳನ್ನು ಹುಡುಕಿಸಿದಲ್ಲಿ ಸುಮಾರು 80ರಿಂದ 100 ಜನರಿಗೆ ಉಚಿತವಾಗಿ ನಿವೇಶನಗಳು ಸಿಗಲಿವೆ ಎಂದರು.ನಮ್ಮನ್ನು ಎಚ್ಚರಿಸಿದ್ದಕ್ಕೆ ಧನ್ಯವಾದ: ಅಧ್ಯಕ್ಷ ಮುನಾಫ್ ಎರೆಶೀಮಿ ಮಾತನಾಡಿ, ನಿವೇಶನಕ್ಕಾಗಿ ಹಣ ಕೊಟ್ಟಿರುವ ದಾಖಲೆಗಳಿದ್ದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾರಿಂದಲೂ ಬಿಡಿಗಾಸು ಪಡೆಯದೇ ಉಚಿತವಾಗಿ ನಿವೇಶನ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ನಮ್ಮ ಹಿಂದೆ ನಡೆಯುತ್ತಿರುವ ಅನಧಿಕೃತ ವಹಿವಾಟುಗಳಿಗೆ ನಾವು ಜವಾಬ್ದಾರರಲ್ಲ. ಯಾವುದೇ ಕಾರಣಕ್ಕೂ ಯಾರಿಗೂ ಹಣ ನೀಡದಂತೆ ಫಲಾನುಭವಿಗಳಲ್ಲಿ ಮನವಿ ಮಾಡಿದ ಅವರು, ಈ ಕುರಿತು ನಮ್ಮನ್ನು ಎಚ್ಚರಿಸಿದ ತಮಗೆ ಧನ್ಯವಾದ ಎಂದರು.

ಒಂದೇ ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯ: ಆಶ್ರಯ ಸಮಿತಿ ಸದಸ್ಯ ದುರ್ಗೇಶ ಗೋಣೆಮ್ಮನವರ ಮಾತನಾಡಿ, ನಿವೇಶನಗಳನ್ನು ಉಚಿತವಾಗಿ ಹಂಚುವುದರ ಜತೆಗೆ ಮನೆಗಳನ್ನು ನಿರ್ಮಿಸಿಕೊಳ್ಳಲು ಒಂದೇ ಬ್ಯಾಂಕಿನಲ್ಲಿ ಎಲ್ಲರಿಗೂ ಸಾಲ ಸೌಲಭ್ಯ ಒದಗಿಸುವ ಕುರಿತು ಚಿಂತನೆ ನಡೆಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಮೂರ್ನಾಲ್ಕು ಬ್ಯಾಂಕ್‌ಗಳು ನಮ್ಮನ್ನು ಸಂಪರ್ಕಿಸಿದ್ದು, ಕೆಲವೇ ದಿನಗಳಲ್ಲಿ ಅದನ್ನು ಅಂತಿಗೊಳಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಆಶ್ರಯ ಸಮಿತಿ ಸದಸ್ಯರಾದ ಗಿರೀಶ ಇಂಡಿಮಠ, ಮಜೀದ್ ಮುಲ್ಲಾ, ಲಕ್ಷ್ಮೀ ಬೊಮ್ಮಲಾಪುರ ಸೇರಿದಂತೆ ಇತರರಿದ್ದರು.