ಚನ್ನಪಟ್ಟಣ: ಜಿಲ್ಲಾ ಮತ್ತು ತಾಲೂಕು ಆಡಳಿತದ ನಿರ್ಲಕ್ಷ್ಯದಿಂದ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದ ಸಮುದಾಯಕ್ಕೆ ಶವ ಸಂಸ್ಕಾರ ಮಾಡಲು ಸ್ಮಶಾನ ಭೂಮಿ ಸಮಸ್ಯೆ ಉಂಟಾಗಿದೆ ಎಂದು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಂದಾನಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ನಾಗೇಶ್ ಮತ್ತು ಪದಾಧಿಕಾರಿಗಳು ಆರೋಪ ಮಾಡಿದರು
ಚನ್ನಪಟ್ಟಣ: ಜಿಲ್ಲಾ ಮತ್ತು ತಾಲೂಕು ಆಡಳಿತದ ನಿರ್ಲಕ್ಷ್ಯದಿಂದ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದ ಸಮುದಾಯಕ್ಕೆ ಶವ ಸಂಸ್ಕಾರ ಮಾಡಲು ಸ್ಮಶಾನ ಭೂಮಿ ಸಮಸ್ಯೆ ಉಂಟಾಗಿದೆ ಎಂದು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಂದಾನಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ನಾಗೇಶ್ ಮತ್ತು ಪದಾಧಿಕಾರಿಗಳು ಆರೋಪ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರಹೊಸಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಸುಮಾರು ೧೫೦ ಕುಟುಂಬಗಳಿದ್ದು, ಪ.ಜಾತಿಗೆ ಸೇರಿದ ಸರ್ವೆ ನಂ.೧೧೫/೨,೧೦೯ ಮತ್ತು ೯೯ ಸರ್ಕಾರಿ ಗೋಮಾಳದಲ್ಲಿ ಸುಮಾರು ೩-೪ ತಲೆ ಮಾರುಗಳಿಂದ ಶವ ಸಂಸ್ಕಾರ ಮಾಡಿಕೊಂಡು ಬರುತ್ತಿದ್ದ ಸ್ಮಶಾನ ಭೂಮಿಯನ್ನು ಸವರ್ಣೀಯ ಸಮುದಾಯದ ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಶವ ಸಂಸ್ಕಾರ ಮಾಡಲು ಅವಕಾಶ ಕೊಡದೇ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.ಜಮೀನಿನ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದ ನಂತರ ಕಳೆದ ನಾಲ್ಕೈದು ವರ್ಷಗಳಿಂದ ಇದಕ್ಕೆ ಸಂಬಂಧಪಡದ ಕೆಲವು ಸವರ್ಣೀಯರು, ಅತಿಕ್ರಮ ಪ್ರವೇಶ ಮಾಡಿ, ವಿನಾಕಾರಣ ಖ್ಯಾತೆ ತೆಗೆದು, ಇದು ನಮಗೆ ಸಂಬಂಧಪಟ್ಟಿದೆ. ಇಲ್ಲಿ ಯಾರೂ ಶವ ಸಂಸ್ಕಾರ ಮಾಡಲು ಬರಬಾರದು ಎಂದು ತಡೆದು ತೊಂದರೆ ಕೊಡುತ್ತಿದ್ದಾರೆ. ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕಾದ ಅಧಿಕಾರಿಗಳನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.
ಗ್ರಾಮಸ್ಥರು ಈ ಹಿಂದೆ ಶವವನ್ನು ತಾಲೂಕು ಕಚೇರಿ ಮುಂದೆ ತಂದು ಪ್ರತಿಭಟನೆ ಮಾಡಿ ನ್ಯಾಯ ಕೇಳಿದಾಗ, ಹಿಂದಿನ ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ, ೧೫ ದಿನಗಳ ಒಳಗೆ ಸಮಸ್ಯೆ ಬಗೆಹರಿಸಿಕೊಡುವ ಭರವಸೆ ನೀಡಿದ್ದರು. ಈ ವರೆವಿಗೂ ಸಮಸ್ಯೆ ಬಗೆಹರಿದಿಲ್ಲ. ಮೊನ್ನೆ ಗ್ರಾಮದ ವೃದ್ಧ ಮಹಿಳೆಯೊಬ್ಬರು ಮೃತಪಟ್ಟಾಗ ಶವ ಸಂಸ್ಕಾರಕ್ಕೆ ಅಡ್ಡಪಡಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ತಹಸೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳು ನೀಡಿದ ಭರವಸೆಯಂತೆ ಅ.೬ರಂದು ಮಂಗಳವಾರ ಕರೆದಿರುವ ಶಾಂತಿ ಸಭೆಯಲ್ಲಿ ಸಮಸ್ಯೆಯನ್ನು ಸೌಹಾರ್ದ ರೀತಿಯಲ್ಲಿ ಬಗೆಹರಿಸಿ ಸ್ಮಶಾನ ಭೂಮಿಯನ್ನು ಸಮುದಾಯಕ್ಕೆ ಮಂಜೂರು ಮಾಡಿಕೊಡಬೇಕು. ಇಲ್ಲದಿದ್ದರೆ ನಮ್ಮ ಪಕ್ಷದ ಜೊತೆಗೆ ಗ್ರಾಮಸ್ಥರು ಮತ್ತು ವಿವಿಧ ದಲಿತ ಪರ ಸಂಘಟನೆಗಳ ಸಹಕಾರದೊಂದಿಗೆ ಉಗ್ರವಾದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಬಿಎಸ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನ್ನದಾನಪ್ಪ ಮಾತನಾಡಿ, ಪರಿಶಿಷ್ಟ ಜಾತಿ/ ಹಿಂದುಳಿದ ಸಮುದಾಯಕ್ಕೆ ಮೂಲಭೂತ ಹಕ್ಕುಗಳಲ್ಲಿ ಒಂದಾದ ಸ್ಮಶಾನ ಭೂಮಿಯನ್ನು ಗುರುತಿಸಿ, ಮಂಜೂರು ಮಾಡುವಂತೆ ಸರ್ಕಾರ ೨೦೧೫ರಲ್ಲಿ ಆದೇಶ ಮಾಡಿದೆ. ೧೧ ವರ್ಷ ಕಳೆದರೂ ಜಿಲ್ಲೆಯಲ್ಲಿ ಸ್ಮಶಾನ ಭೂಮಿ ಸಮಸ್ಯೆ ಬಗೆಹರಿದಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ತವರು ಜಿಲ್ಲೆಯ ೫ ತಾಲೂಕುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ಸಮುದಾಯಕ್ಕೆ ಸ್ಮಶಾನ ಭೂಮಿ ಸಮಸ್ಯೆಯಾಗಿದೆ. ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಿ ನೊಂದ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ಸಮುದಾಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಗ್ರಾಮದ ಮೊಗಣ್ಣ, ಶ್ರೀಧರ್, ತಮ್ಮಣ್ಣ, ಹನುಮಂತಯ್ಯ ಸೇರಿದಂತೆ ಹಲವರು ಗ್ರಾಮದಲ್ಲಿ ಶವ ಸಂಸ್ಕಾರ ಮಾಡಲು ಎದುರಿಸುತ್ತಿರುವ ತೊಂದರೆ ವಿವರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಿಎಸ್‌ಪಿ ಜಿಲ್ಲಾಧ್ಯಕ್ಷ ವೆಂಕಟಾಚಲ, ಪ್ರಧಾನ ಕಾರ್ಯದರ್ಶಿ ಮುರಗೇಶ್, ಪದಾಧಿಕಾರಿಗಳಾದ ಸುಧಾರಾಣಿ, ಗೌರಮ್ಮ, ಚಂದ್ರು, ಗ್ರಾಮದ ಜಯರಾಂ ಇತರರು ಉಪಸ್ಥಿತರಿದ್ದರು.
ಪೊಟೋ೫ಸಿಪಿಟಿ೧: ಚನ್ನಪಟ್ಟಣದಲ್ಲಿ ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ನಾಗೇಶ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲಾಧ್ಯಕ್ಷ ವೆಂಕಟಾಚಲ, ಪ್ರಧಾನ ಕಾರ್ಯದರ್ಶಿ ಮುರಗೇಶ್, ಪದಾಧಿಕಾರಿಗಳಾದ ಸುಧಾರಾಣಿ, ಗೌರಮ್ಮ, ಚಂದ್ರು, ಗ್ರಾಮದ ಜಯರಾಂ ಮುಂತಾದವರು ಉಪಸ್ಥಿತರಿದ್ದರು.