ಸರ್ಕಾರದ ಆದೇಶದಂತೆ ನೇಮಕಗೊಂಡಿರುವ ಪಿಡಿಒ ಬೇರೆ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ

ಹಗರಿಬೊಮ್ಮನಹಳ್ಳಿ: ಬನ್ನಿಕಲ್ ಗ್ರಾಪಂಗೆ ಕಳೆದ ಐದು ವರ್ಷಗಳಿಂದ ಕಾಯಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಇಲ್ಲದಿರುವ ಪರಿಣಾಮ ಸಾರ್ವಜನಿಕರ ಹಾಗೂ ಕಾರ್ಮಿಕರ ಸಮಸ್ಯೆ ಸಮರ್ಪಕವಾಗಿ ಪರಿಹಾರವಾಗುತ್ತಿಲ್ಲ ಎಂದು ಗ್ರಾಮೀಣ ಕೂಲಿಕಾರರ ಸಂಘಟನೆಯ ವಿಜಯನಗರ ಜಿಲ್ಲಾ ಸಂಚಾಲಕಿ ಅಕ್ಕಮಹಾದೇವಿ ಮರಬ್ಬಿಹಾಳ್ ದೂರಿದರು.

ಕಾಯಂ ಪಿಡಿಓ ನೇಮಿಸುವುದು ಸೇರಿದಂತೆ ಗ್ರಾಮದ ಇತರೇ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಪಂಗೆ ಮನವಿ ಸಲ್ಲಿಸುವ ನೇತೃತ್ವ ವಹಿಸಿ ಮಾತನಾಡಿದರು.

ಸರ್ಕಾರದ ಆದೇಶದಂತೆ ನೇಮಕಗೊಂಡಿರುವ ಪಿಡಿಒ ಬೇರೆ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಸ್ಥಳಿಯ ಪಂಚಾಯಿತಿಯ ತೆರಿಗೆ ಹಣದಿಂದ ವೇತನ ಪಡೆಯುತ್ತಿರುವ ಅಧಿಕಾರಿಗಳು ಸ್ಥಳೀಯವಾಗಿ ಸೇವೆ ಸಲ್ಲಿಸದಿರುವುದು ಸರಿಯಲ್ಲ. ಕಳೆದ ಐದು ವರ್ಷಗಳಿಂದ ಸಾರ್ವಜನಿಕರ ಸಮಸ್ಯೆ ಆಲಿಸಲು ಅಧಿಕಾರಿಗಳು ನಿರಂತರವಾಗಿ ಲಭ್ಯವಿಲ್ಲ. ವರ್ಷಕ್ಕೆ ೩-೪ ಅಧಿಕಾರಿಗಳು ಬದಲಾಗುತ್ತಿದ್ದರೆ ಸ್ಥಳೀಯ ಆಡಳಿತ ಸಮರ್ಪಕವಾಗಿ ನಿರ್ವಹಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಬನ್ನಿಕಲ್ ಗ್ರಾಪಂಗೆ ಕಾಯಂ ಪಿಡಿಒ ಕೂಡಲೇ ನಿಯೋಜಿಸಬೇಕು. ಕಾರ್ಮಿಕರು ದುಡಿದ ಕೂಲಿ ಹಣ ಕೂಲಿ ಭತ್ಯೆ ಸಮೇತವಾಗಿ ತಕ್ಷಣ ಪಾವತಿಸಬೇಕು. ಕೆರೆ ಹೂಳನ್ನು ಹೊರಕ್ಕೆ ಸಾಗಿಸಿದ ಟ್ರ‍್ಯಾಕ್ಟರ್‌ಗಳ ಬಿಒಸಿ ಪಾವತಿ ಹಣವು ಒಂದು ವರ್ಷದಿಂದ ಬಾಕಿಯಿದ್ದು, ಕೂಡಲೇ ಬಿಡುಗಡೆ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯ ಮೇಟ್‌ಗಳಿಗೆ ನೀಡಬೇಕಾದ ಮೇಟ್ ಚಾರ್ಜ್‌ಗಳನ್ನು ಪಾವತಿಸಬೇಕು. ಬರಗಾಲದ ಹಿನ್ನೆಲೆ ಕಾರ್ಮಿಕರಿಗೆ ಹೆಚ್ಚುವರಿಯಾಗಿ ೧೦೦ ದಿನಗಳ ಕೆಲಸ ನೀಡಬೇಕು. ವಸತಿ ಹಾಗೂ ನಿವೇಶನ ರಹಿತರ ಹೆಸರು ಆನ್‌ಲೈನ್‌ನಲ್ಲಿ ದಾಖಲಿಸಬೇಕು. ಕುಡಿಯುವ ನೀರಿನ ಸಮಸ್ಯೆ ಇರುವ ವಾರ್ಡ್‌ಗಳಿಗೆ ಪಿಡಿಒ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು. ಮೋರಿಗೇರಿ ಹಾಗೂ ಹಡಗಲಿ ರಸ್ತೆಯಲ್ಲಿ ನೀರಿನ ತೊಟ್ಟಿ ನಿರ್ಮಿಸಬೇಕು. ನವಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸುವ ಮನವಿ ತಾಪಂ ಇಓ ಮೂಲಕ ಜಿಪಂ ಸಿಇಓಗೆ ಸಲ್ಲಿಸಲಾಯಿತು.

ಕಾರ್ಮಿಕರಾದ ಪೂಜಾರ್ ಜಂಬಣ್ಣ, ಮಲ್ಲಿಕಾರ್ಜುನ, ಶ್ವೇತ, ಅನಿಲಕುಮಾರ್, ಮಹದೇವಪ್ಪ, ನಾಗರಾಜ, ಕೊಟ್ರೇಶ್, ಶಂಕರನಾಗಹಳ್ಳಿ ಮರುತೇಶಪ್ಪ, ಮುದ್ದಿ ಬಸವರಾಜ, ಇಟ್ಟಿಗಿ ಬಸಣ್ಣ, ಅಂಬಿಗರ ಅಕ್ಕಮ್ಮ, ಅಂಬಣ್ಣ ಬೆಸ್ತರು, ಮಂಜಮ್ಮ, ಎಚ್.ಸರೋಜ, ಪವಿತ್ರ, ಗಂಗಮ್ಮ, ಭೀಮಮ್ಮ, ಸತ್ಯಮ್ಮ, ರಾಮಜ್ಜ, ಈಶಪ್ಪ ಬರೀಕ್ರು, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಕಾರ್ಯಕರ್ತೆ ರತ್ನಮ್ಮ, ದುರುಗಮ್ಮ ಹಾಗೂ ಇತರರು ಇದ್ದರು.