ಕಡೂರುಸಾಮಾಜಿಕ ಕಟ್ಟುಪಾಡುಗಳ ನಡುವೆ ತಮ್ಮ ಬದುಕು ಕಟ್ಟಿಕೊಂಡ ಕಾಡುಗೊಲ್ಲ ಸಮಾಜವನ್ನು ಎಸ್ಟಿಗೆ ಸೇರ್ಪಡೆಗೆ ರಾಜ್ಯಸರ್ಕಾರ ಮಾಡಿದ ಶಿಫಾರಸ್ಸನ್ನು ಕೇಂದ್ರ ಅನುಮೋದಿಸಬೇಕೆಂದು ಶಾಸಕ ಕೆ.ಎಸ್.ಆನಂದ್ ಒತ್ತಾಯಿಸಿದರು.

ಶಾಸಕ ಕೆ.ಎಸ್.ಆನಂದ್ । ತಾಲೂಕು ಆಡಳಿತದಿಂದ ನಡೆದ ಶ್ರೀ ಕೃಷ್ಣ ಜನ್ಮಾಷ್ಠಮಿ

ಕನ್ನಡಪ್ರಭ ವಾರ್ತೆ ಕಡೂರು

ಸಾಮಾಜಿಕ ಕಟ್ಟುಪಾಡುಗಳ ನಡುವೆ ತಮ್ಮ ಬದುಕು ಕಟ್ಟಿಕೊಂಡ ಕಾಡುಗೊಲ್ಲ ಸಮಾಜವನ್ನು ಎಸ್ಟಿಗೆ ಸೇರ್ಪಡೆಗೆ ರಾಜ್ಯಸರ್ಕಾರ ಮಾಡಿದ ಶಿಫಾರಸ್ಸನ್ನು ಕೇಂದ್ರ ಅನುಮೋದಿಸಬೇಕೆಂದು ಶಾಸಕ ಕೆ.ಎಸ್.ಆನಂದ್ ಒತ್ತಾಯಿಸಿದರು.

ತಾಪಂನಲ್ಲಿ ಶುಕ್ರವಾರ ನಡೆದ ಶ್ರೀ ಕೃಷ್ಣ ಜನ್ಮಾಷ್ಠಮಿ ಅಧ್ಯಕ್ಷತೆ ವಹಿಸಿ ಮಾತನಾಡಿ ಎಸ್ಟಿ ಸೇರ್ಪಡೆಗೆ ಅನೇಕ ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಾ ಬಂದ ಕಾಡುಗೊಲ್ಲರ ಬೇಡಿಕೆಗೆ ರಾಜ್ಯ ಸರ್ಕಾರ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಸಮಿತಿ ರಚಿಸಿ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದೆ. ತಾಂತ್ರಿಕ ಅಡೆತಡೆ ಗಳಿಂದ ಸೇರ್ಪಡೆ ವಿಳಂಬವಾಗಿದೆ. ಕಾಡಗೊಲ್ಲ ಸಮಾಜಕ್ಕೆ ಎಸ್ಟಿಗೆ ಮಾನ್ಯತೆ ನೀಡಬೇಕೆಂಬ ಒತ್ತಾಯ ಹಾಕಲಿದ್ದೇವೆ ಎಂದರು.

ಗೊಲ್ಲರಹಟ್ಟಿ ಸಮುದಾಯಗಳ ಅರ್ಜಿದಾರರಿಗೆ ಕಾಡುಗೊಲ್ಲ ಎಂದೇ ನಮೂದಿಸಿ ಜಾತಿಪ್ರಮಾಣ ಪತ್ರ ವಿತರಿಸುವಂತೆ ತಹಸೀಲ್ದಾರ್‌ಗೆ ನಿರ್ದೇಶಿಸಿದ ಅವರು ಕ್ಷೇತ್ರದ 14 ಗೊಲ್ಲರಹಟ್ಟಿಗಳಲ್ಲಿ ಕುಪ್ಪಾಳು, ಆಲ ಘಟ್ಟ, ಕಲ್ಕೆರೆ ಮತ್ತು ಮುತ್ತಾಣಗೆರೆ ಭಾಗಗಳ ಗೊಲ್ಲರಹಟ್ಟಿಗಳನ್ನು ಈಗಾಗಲೇ ಕಂದಾಯ ಗ್ರಾಮಗಳಾಗಿ ರಚಿಸಲಾಗಿದೆ ಎಂದರು.

ಹಿಂದೂ ಧರ್ಮದಲ್ಲಿ ಭಗವದ್ಗೀತೆಗೆ ಮಹತ್ವದ ಸ್ಥಾನವಿದೆ. ಬದುಕಿನ ಮೌಲ್ಯಗಳ ಸಾರವೇ ಭಗವದ್ಗೀತೆ ಯಾಗಿ ರೂಪುಗೊಂಡಿದೆ. ಈ ಹಿನ್ನಲೆಯಲ್ಲಿ ಮನಸ್ಸಿನ ತೊಳಲಾಟ ಮನುಕುಲಕ್ಕೆ ಜ್ಞಾನದ ದೀಪ ಹಚ್ಚಿದ ಶ್ರಿ ಕೃಷ್ಣನ ಸಂದೇಶ ಎಲ್ಲರ ಬದುಕಿಗೆ ದಾರಿದೀಪ ಎಂದರು.

ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮಾತನಾಡಿ ದೈವಾಂಶ ಸಂಭೂತ ಶ್ರೀ ಕೃಷ್ಣನ ನಾಮಸ್ಮರಣೆ ನಮ್ಮೆಲ್ಲರ ಬದುಕಿಗೆ ಸ್ಫೂರ್ತಿದಾಯಕ. ಸನಾತನ ಸಂಸ್ಕೃತಿ ರಕ್ಷಣೆಗೆ ಶ್ರೀ ಕೃಷ್ಣ ನೀಡಿದ ಸಂದೇಶ ನಮ್ಮಗಳ ಬದುಕಿಗೆ ಮಾರ್ಗ ಸೂಚಿ ಎಂದರು.

ಕಾಡುಗೊಲ್ಲ ಸಮಾಜದ ಜಿಲ್ಲಾಧ್ಯಕ್ಷ ಈರಪ್ಪ ಮಾತನಾಡಿ ಸಮಾಜದ ಬೇಡಿಕೆಗೆ ಅನುಗುಣವಾಗಿ ಸೌಲಭ್ಯ ಗಳ ಸದ್ಬಳಕೆ ಆಶಯಕ್ಕೆ ಸಾಕಷ್ಟು ಹೋರಾಟ ಮಾಡಲಾಗುತ್ತಿದೆ. ಅಲೆಮಾರಿ ಬದುಕು ಕಟ್ಟಿಕೊಂಡ ಕಾಡುಗೊಲ್ಲ ಸಮಾಜವನ್ನು ಅಲೆಮಾರಿ-ಅರೆ ಅಲೆಮಾರಿ ಪಟ್ಟಿಗೆ ರಾಜ್ಯ ಸರಕಾರ ಸೇರ್ಪಡೆಗೊಳಿಸಿದರೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚು ಸಹಕಾರಿಯಾಗಲಿದೆ ಈ ಬಗ್ಗೆ ಶಾಸಕರು ರಾಜ್ಯ ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿದರು.

ಉಪನ್ಯಾಸಕ ಡಾ. ದೇವಿರಪ್ಪ ಉಪನ್ಯಾಸ ನೀಡಿದರು. ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್, ಕಾಡು ಗೊಲ್ಲ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ, ತಾಲೂಕು ಅಧ್ಯಕ್ಷ ದಾನೇಶ್ ಪೂಜಾರಿ, ಅಲೆಮಾರಿ ಅರೆಅಲೆಮಾರಿ ಸಲಹಾ ಸಮಿತಿ ಸದಸ್ಯ ಎಂ.ಕೆ. ಸುರೇಂದ್ರ ಮತ್ತಿತರಿದ್ದರು.

4ಕೆಕೆಡಿಯು2.

ಕಡೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಶ್ರೀ ಕೃಷ್ಣಜನ್ಮಾಷ್ಠಮಿ ಆಚರಣೆ ನಡೆಯಿತು.