ಸಾರಾಂಶ
ದೇವದುರ್ಗ ಪಟ್ಟಣದ ಮಿನಿವಿಧಾನ ಸೌಧದಲ್ಲಿ ಛಲವಾದಿ ಮಹಾಸಭಾ ತಾಲೂಕು ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಕನ್ನಡಪ್ರಭ ವಾರ್ತೆ ದೇವದುರ್ಗ
ಪಿಎಸ್ಐ ಪರುಶುರಾಮ ನಿಧನಕ್ಕೆ ಕಾರಣರಾದ ಯಾದಗಿರಿ ಶಾಸಕ ಚನ್ನಾರೆಡ್ಡಿ ತನ್ನೂರ ಹಾಗೂ ಪುತ್ರನನ್ನು ಕೂಡಲೇ ಬಂಧಿಸಿ, ಪಿಎಸ್ಐ ಕುಟುಂಬಕ್ಕೆ ಸೂಕ್ತ ಸೌಲಭ್ಯ ಹಾಗೂ ರಕ್ಷಣೆ ಒದಗಿಸಬೇಕೆಂದು ದಲಿತ, ಪ್ರಗತಿಪರ ಸಂಘಟನೆಗಳು ಒತ್ತಾಯಿಸಿವೆ.ಪಟ್ಟಣದಲ್ಲಿ ರಾಜ್ಯ ಛಲವಾದಿ ಮಹಾಸಭಾ ತಾಲೂಕು ಸಮಿತಿ ಸೋಮವಾರ ಆಯೋಜಿಸಿದ್ದ ಪ್ರತಿಭಟನಾ ರ್‍ಯಾಲಿಯಲ್ಲಿ ಪಾಲ್ಗೊಂಡು ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಮನವಿ ಸಲ್ಲಿಸಿದರು. ಬಹಿರಂಗ ಸಭೆಯನ್ನು ಉದ್ದೇಶಿಸಿ, ಎಂಆರ್‌ಎಚ್ಎಸ್ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪೂರಿ, ಛಲವಾದಿ ಸಮಾಜ ಮುಖಂಡ ಶಿದ್ಲಿಂಗಪ್ಪ ಕಾಕರಗಲ್, ಕರ್ನಾಟಕ ಪ್ರಾಂತ ರೈತ ಸಂಘಟನೆ ಜಿಲ್ಲಾ ಸಮಿತಿ ಕಾರ್ಯದರ್ಶಿ ನರಸಣ್ಣ ನಾಯಕ ಮಾತನಾಡಿದರು.
ಮೃಪಟ್ಟಿರುವ ಪಿಎಸ್ಐ ಪರುಶುರಾಮ್ ಈಗಾಗಲೇ ಸಾಲ ಮಾಡಿ ಮುಕ್ಕಾಲು ಭಾಗ ಹಣ ನೀಡಿದ್ದಾನೆ. ಉಳಿದ ಹಣಕ್ಕೆ ಶಾಸಕ ಹಾಗೂ ಅವರ ಪುತ್ರ ಹಂಪನಗೌಡ(ಸನ್ನಿಗೌಡ) ವಿಪರೀತ ಒತ್ತಡ ಹೇರಿದ್ದರು ಎನ್ನಲಾಗಿದೆ. ಕುಟುಂಬದವರು ದೂರು ನೀಡಿರುವ ಹಿನ್ನೆಲೆ ಅವರ ಮನೆಯವರಿಗೆ ಜೀವಬೆದರಿಕೆ ಕರೆಗಳು ಬರುತ್ತಿವೆ. ಕೂಡಲೇ ಮೃತಪಟ್ಟಿರುವ ಪಿಎಸ್ಐ ಪರುಶುರಾಮ್ ಕುಟುಂಬಕ್ಕೆ ಆರ್ಥಿಕ ಸಹಾಯ, ಸೂಕ್ತ ರಕ್ಷಣೆ ನೀಡಿ, ಸರ್ಕಾರ ಸರ್ಕಾರಿ ಸೇವೆಗೆ ಅವಕಾಸ ಕಲ್ಪಿಸಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.ಈ ಸಂದರ್ಭದಲ್ಲಿ ಮುಖಂಡರಾದ ಮಹಾಂತೇಶ ಭವಾನಿ, ದುರಗಪ್ಪ ಬಡಿಗೇರ, ಮಂಜುನಾಥ ಹೇರುಂಡಿ, ಮೋಹನ ಬಲ್ಲಿದವ, ಕ್ರಾಂತಿಕುಮಾರ ರಾಯಚೂರುಕರ್, ಸಚ್ಚಿದಾನಂದ ಶಾಖಾಪೂರ, ಚಂದ್ರಶೇಖರ ಛಲವಾದಿ, ರಂಗನಾಥ ತುಪ್ಪದ್, ಮಹಬೂಬ ಚಿಕ್ಕಲಗಾರ್, ರಂಗನಾಥ ಕೊಂಬಿನ್, ವೀರೇಶ ಕೊಳ್ಳಿ, ಮರಿಲಿಂಗಪ್ಪ ಹೆಗ್ಗಡದಿನ್ನಿ, ಮುಷ್ಠೂರ ಗ್ರಾಪಂ ಸದಸ್ಯ ಮಲ್ಲಪ್ಪ, ಯರಮಸಾಳ ಗ್ರಾಪಂ ಮಾಜಿ ಸದಸ್ಯ ಸಿದ್ದಪ್ಪ ಹಾಗೂ ಇತರರು ಪಾಲ್ಗೊಂಡಿದ್ದರು.