ಸಾರಾಂಶ
ಯಾದಗಿರಿ: ಇತ್ತೀಚೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ರಾಜ್ಯಸಭಾ ಚುನಾವಣೆ ಮುಗಿದ ನಂತರ ಗೆಲುವು ಸಾಧಿಸಿದ ಕಾಂಗ್ರೆಸ್‌ನ ನಾಸೀರ್ ಹುಸೇನ್ ಅವರ ಬೆಂಬಲಿಗರು ಸಂಭ್ರಮಿಸುವ ಸಮಯದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ವ್ಯಕ್ತಿಯೊಬ್ಬ ಘೋಷಣೆ ಕೂಗಿರುವುದು ದೇಶಕ್ಕೆ ಮಾಡಿರುವ ಅಪಮಾನ, ಆ ದುಷ್ಕರ್ಮಿಯನ್ನು ಸರ್ಕಾರ ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ ಆಗ್ರಹಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ದೇಗುಲವೆಂದು ಕರೆಯುವ ವಿಧಾನಸೌಧದಲ್ಲಿ ಕಾಂಗ್ರೆಸ್ ಕಾರ್ಯಕರ್ತ ನಮ್ಮ ಶತ್ರು ದೇಶ ಪಾಕಿಸ್ತಾನ ಪರ ಜೈ ಘೋಷಣೆ ಹಾಕುತ್ತಾರೆ ಎಂದರೆ ಇದು ಸಾಮಾನ್ಯ ವರ್ತನೆಯಲ್ಲ, ಸರ್ಕಾರ ಅವನನ್ನು ರಕ್ಷೀಸುವ ಕೆಲಸ ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.ಬರ ಪರಿಹಾರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 10 ತಿಂಗಳಲ್ಲಿ ಬರಗಾಲದಿಂದ 875ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಸರ್ಕಾರ ಸರಿಯಾಗಿ ಪರಿಹಾರ ನೀಡಿಲ್ಲ. ಅಲ್ಲದೇ ಸಂಕಷ್ಟದಲ್ಲಿರುವ ರೈತರಿಗೆ ಬರ ಪರಿಹಾರ ಬಿಡುಗಡೆ ಮಾಡಿಲ್ಲ, ಸರ್ಕಾರ ನೀಡುವ ಪರಿಹಾರದ ಮೊತ್ತದ ಆಸೆಗಾಗಿ ಸಚಿವ ಶಿವಾನಂದ ಪಾಟೀಲ್ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿರುವುದು ರೈತ ಸಮುದಾಯಕ್ಕೆ ಮಾಡಿರುವ ಅಪಮಾನ ಎಂದು ಟೀಕಿಸಿದರು.
ಸರ್ಕಾರ ಇನ್ನೊಂದೆಡೆ ಕಾವೇರಿ ನೀರನ್ನು ತಮಿಳುನಾಡು ರಾಜ್ಯಕ್ಕೆ ಹರಿದು ಬಿಟ್ಟು ಮೈಸೂರು-ಬೆಂಗಳೂರು ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಜೊತೆಗೆ ರೈತರಿಗೆ ಅನ್ಯಾಯ ಮಾಡಿದೆ, ರಾಜ್ಯದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸರ್ಕಾರ ಸೂಕ್ತ ನಿರ್ವಹಣೆ ಮಾಡದೇ ಮುಚ್ಚುತ್ತೀವೆ, ಇದರಿಂದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗಿದೆ ಎಂದರು.ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಆಡಳಿತ ಯಂತ್ರ ಕುಸಿದಿದೆ. ಸರ್ಕಾರ ಒಂದು ವರ್ಗದ ಓಲೈಕೆಗೆ ಯತ್ನಿಸುತ್ತಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದರು.
ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ಹಿಡಿಯಬೇಕೆಂದು ಹಲವಾರು ಪ್ರಾದೇಶಿಕ ಪಕ್ಷಗಳೊಂದಿಗೆ ಇಂಡಿಯಾ ಒಕ್ಕೂಟ ರಚನೆ ಮಾಡಿಕೊಂಡಿದೆ. ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಪಕ್ಷಗಳು ಒಕ್ಕೂಟದಿಂದ ಹೊರ ಬರುತ್ತವೆ. ಅವರು ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಂದು ವ್ಯಂಗ್ಯವಾಡಿದರು.ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ ಮಾತನಾಡಿ, ಯಾದಗಿರಿ ಮತಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಆದರೆ ಇದನ್ನು ಅರಿಯದ ಕಾಂಗ್ರೆಸ್ ಶಾಸಕರು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಭಿವೃದ್ಧಿ ಕಾರ್ಯಗಳಿಗೆ ನೀಡಿರುವ ಅನುದಾನದಲ್ಲಿ 9.65 ಕೋಟಿ ರು. ಗಳು ಹೈಮಾಸ್ಕ್ ದೀಪಗಳ ಅಳವಡಿಕೆಗೆ ಮೀಸಲಿಟ್ಟಿದ್ದಾರೆ. ಇದು ಸರಿಯಾದ ನಿರ್ಧಾರವಲ್ಲ. ಮೊದಲು ಜನರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಜನಪ್ರತಿನಿಧಿಗಳಾದವರು ಗಮನ ಹರಿಸಬೇಕೆಂದು ಪರೋಕ್ಷವಾಗಿ ಅವರ ಕಾರ್ಯವೈಖರಿಯನ್ನು ಟೀಕಿಸಿದರು.
ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ, ನಾಗರತ್ನ ಕುಪ್ಪಿ, ಪಕ್ಷದ ವಕ್ತಾರ ಎಚ್.ಪಾಟೀಲ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ, ವಿರುಪಾಕ್ಷಯ್ಯಸ್ವಾಮಿ ಹೆಡಗಿಮದ್ರಾ ಇದ್ದರು.