ಸಮಾಜದ ಘಟನೆ ಹಾಗೂ ನೆನಪು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಛಾಯಾಗ್ರಾಹಕರ ಪಾತ್ರ ಮಹತ್ವದ್ದಾಗಿದೆ

ಕೊಪ್ಪಳ: ಛಾಯಾಗ್ರಾಹಕರು ಉತ್ತಮ ಕಲಾತ್ಮಕತೆಯಿಂದ ವಿವಿಧ ಬಗೆಯ ಚಿತ್ರ ಸೆರೆಹಿಡಿದು ವೃತ್ತಿಯಲ್ಲಿ ಬೆಳವಣಿಗೆ ಸಾಧಿಸಬೇಕು ಎಂದು ಬಳ್ಳಾರಿ ವಿಭಾಗದ ಹಿರಿಯ ಕಾನೂನು ಅಧಿಕಾರಿ ಬಿ.ಎಸ್.ಪಾಟೀಲ ಹೇಳಿದರು.

ಭಾಗ್ಯನಗರದ ಬಾಲಾಜಿ ಫಂಕ್ಷನ್ ಹಾಲ್‌ನಲ್ಲಿ ಕೊಪ್ಪಳ ತಾಲೂಕು ಫೋಟೋ ಹಾಗೂ ವಿಡಿಯೋಗ್ರಾಫರ್ ಸಂಘದಿಂದ ಆಯೋಜಿಸಿದ್ದ 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಂದು ಛಾಯಾಚಿತ್ರಕ್ಕೆ ದೊಡ್ಡ ಶಕ್ತಿಯಿದೆ. ಚಿತ್ರವೊಂದು ಹಲವು ವಿಚಾರ ಹೇಳಬಲ್ಲದು. ಸಮಾಜದ ಘಟನೆ ಹಾಗೂ ನೆನಪು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಛಾಯಾಗ್ರಾಹಕರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ವೃತ್ತಿ ಕೀಳರಿಮೆಯಿಂದ ಕಾಣದೆ ಹೆಮ್ಮೆಯಿಂದ ಮುನ್ನಡೆಸಬೇಕು ಎಂದರು.

ಎಂತಹ ಆಧುನಿಕ ತಂತ್ರಜ್ಞಾನ ಬಂದರೂ ಉತ್ತಮ ಕಲಾತ್ಮಕ ಛಾಯಾಗ್ರಾಹಕರಿಗೆ ಬೇಡಿಕೆ ಇದ್ದೇ ಇರುತ್ತದೆ. ತಂತ್ರಜ್ಞಾನದಲ್ಲಿನ ಬದಲಾವಣೆಗಳಿಗೆ ಹೊಂದಿಕೊಂಡು ಹೊಸ ಕೌಶಲ್ಯ ಕಲಿಯಬೇಕು. ವಿವಿಧ ಬಗೆಯ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಮೂಲಕ ಪ್ರತಿಭೆ ವಿಸ್ತರಿಸಿಕೊಳ್ಳಬೇಕು. ಸರ್ಕಾರದ ವಿವಿಧ ಯೋಜನೆ ಮಾಹಿತಿ ಪಡೆದು ಅವುಗಳ ಸದ್ಬಳಕೆ ಮಾಡಿಕೊಂಡು ವೃತ್ತಿಯಲ್ಲಿ ಬೆಳವಣಿಗೆ ಸಾಧಿಸಬೇಕು ಎಂದು ಸಲಹೆ ನೀಡಿದರು.

ಯುವ ಛಾಯಾಗ್ರಾಹಕರು ವ್ಯಸನಗಳಿಗೆ ತುತ್ತಾಗಿ ಬದುಕನ್ನು ಹಾಳು ಮಾಡಿಕೊಳ್ಳಬಾರದು. ವೃತ್ತಿಯಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸಿ ಸಮಾಜದಲ್ಲಿ ಉತ್ತಮ ಗೌರವ ತರುವಂತಹ ಸಾಧನೆ ಮಾಡಬೇಕು. ಛಾಯಾಗ್ರಹಣ ವೃತ್ತಿಯ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳುವುದರ ಜತೆಗೆ ಕುಟುಂಬ ಹಾಗೂ ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಜಿಲ್ಲಾ ನೋಂದಣಾಧಿಕಾರಿ ಸುಭಾಸ್ ಹೊಸಳ್ಳಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಚಿ.ಗರಗ, ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ವಿಜಯಕುಮಾರ ವಸ್ತ್ರದ, ಗೌರವಾಧ್ಯಕ್ಷ ಬಸವರಾಜ ಕಂಪ್ಲಿ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಕೊಪ್ಪಳ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಯಲ್ಲಪ್ಪ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕ ಇರಕಲ್ಲಗಡದ ಲಕ್ಷ್ಮಣ ಶೇಟ್ಟಿ, ಕೊಪ್ಪಳದ ಹನುಮಾನ ಸಿಂಗ್, ವಿರೇಶ ವಸ್ತ್ರದ ಹಾಗೂ ಅಗಳಕೇರಿಯ ವಿರೇಶ ಅವರನ್ನು ಸನ್ಮಾನಿಸಲಾಯಿತು. ಸಂಘದ ಪದಾಧಿಕಾರಿ, ಸದಸ್ಯರು ಹಾಗೂ ಛಾಯಾಗ್ರಾಹಕರು ಉಪಸ್ಥಿತರಿದ್ದರು.