ನುಗ್ಗಿಕೇರಿಯಲ್ಲಿ ಅನ್ಯ ಧರ್ಮೀಯರಿಂದ ವ್ಯಾಪಾರ ನಿಷೇಧಕ್ಕೆ ಆಗ್ರಹ

| Published : Dec 12 2023, 12:45 AM IST

ನುಗ್ಗಿಕೇರಿಯಲ್ಲಿ ಅನ್ಯ ಧರ್ಮೀಯರಿಂದ ವ್ಯಾಪಾರ ನಿಷೇಧಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ದೇವಸ್ಥಾನಗಳಲ್ಲಿ ಬೇರೆ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎನ್ನುವ ಹಿಂದೂಪರ ಸಂಘಟನೆಗಳ ಆಗ್ರಹ ಮತ್ತೆ ಮುನ್ನೆಲೆಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಧಾರವಾಡ

ಹಿಂದೂ ದೇವಸ್ಥಾನಗಳಲ್ಲಿ ಬೇರೆ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎನ್ನುವ ಹಿಂದೂಪರ ಸಂಘಟನೆಗಳ ಆಗ್ರಹ ಮತ್ತೆ ಮುನ್ನೆಲೆಗೆ ಬಂದಿದೆ.

ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಯಾವುದೇ ಧಾರ್ಮಿಕ ಸಂಗತಿಗಳು ಅಷ್ಟಾಗಿ ಮುನ್ನಲೆಗೆ ಬಂದಿರಲಿಲ್ಲ. ಆದರೆ, ಇದೀಗ ಕಳೆದ ವರ್ಷ ಧಾರವಾಡದ ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಡಿ ಎಂಬ ಆಗ್ರಹಕ್ಕೆ ಮತ್ತೆ ಜೀವ ಬಂದಿದೆ. ಹಿಂದೂ ಪರ ಸಂಘಟನೆಗಳು ಈ ಕುರಿತು ಮನವಿಯನ್ನೂ ಸಲ್ಲಿಸಿವೆ.

ಅದರಲ್ಲೂ ಮುಸ್ಲಿಂ ವ್ಯಾಪಾರಿಯ ಕಲ್ಲಂಗಡಿ ಹಣ್ಣು ಒಡೆದಿದ್ದ ಪ್ರಕರಣ ರಾಷ್ಟ್ರಾದ್ಯಂತ ಸದ್ದು ಮಾಡಿತ್ತು. ಇದೀಗ ಅದೇ ದೇವಸ್ಥಾನದಲ್ಲಿ ಮತ್ತೆ ಬೇರೆ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ಮನವಿ ಮೂಲಕ ಆಗ್ರಹಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್‌ ಬಜರಂಗದಳದ ಸಂಚಾಲಕರಾದ ಶಿವಾನಂದ ಸತ್ತಿಗೇರಿ, ಸಿದ್ದು ಹಿರೇಮಠ, ಗುರುಶಾಂತ, ಅನುದೀಪ ಕುಲಕರ್ಣಿ ಮತ್ತಿತರರು ನುಗ್ಗಿಕೇರಿ ಹನುಮಂತ ದೇವಸ್ಥಾನದ ಟ್ರಸ್ಟ್‌ ಅಧ್ಯಕ್ಷರಾದ ಡಾ. ಪದ್ಮಾ ದೇಸಾಯಿ ಅವರಿಗೆ ಮನವಿ ನೀಡಿದ್ದಾರೆ.

ಹಿಂದೆ ಏನಾಗಿತ್ತು..

ಕಳೆದ ವರ್ಷ ಏಪ್ರಿಲ್ 9ರಂದು ತಾಲೂಕಿನ ಪ್ರಸಿದ್ಧ ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ಅನ್ಯ ಧರ್ಮೀಯರ ವ್ಯಾಪಾರಕ್ಕೆ ವಿರೋಧ ವ್ಯಕ್ತಪಡಿದ್ದ ಶ್ರೀರಾಮ ಸೇನೆ ಕಾರ್ಯಕರ್ತರು ಈ ದೇವಸ್ಥಾನದ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಯೊಬ್ಬರ ಕಲ್ಲಂಗಡಿ ಹಣ್ಣುಗಳನ್ನು ಒಡೆದು ಗಲಾಟೆ ಮಾಡಿದ್ದರು. ಯಾವುದೇ ಕಾರಣಕ್ಕೂ ಹಿಂದೂ ದೇವಸ್ಥಾನಗಳ ಬಳಿ ಬೇರೆ ಧರ್ಮದವರಿಗೆ ವ್ಯಾಪಾರ ಮಾಡಲು ಅವಕಾಶ ಕೊಡಬಾರದು ಎನ್ನುವುದು ಅವರ ವಾದವಾಗಿತ್ತು. ಇದು ರಾಷ್ಟ್ರಾದ್ಯಂತ ಸಾಕಷ್ಟು ಸುದ್ದಿ ಮಾಡಿತ್ತು. ಅದಾದ ಬಳಿಕ ಶ್ರೀರಾಮ ಸೇನೆ ಕಾರ್ಯಕರ್ತರ ಬಂಧನವೂ ಆಗಿತ್ತು. ಬಳಿಕ ಜಾಮೀನಿನ ಮೇಲೆ ಅವರು ಬಿಡುಗಡೆ ಕೂಡ ಆಗಿದ್ದರು. ಪರಿಸ್ಥಿತಿ ಅರಿತು ಆಡಳಿತ ಮಂಡಳಿಯು ಅಲ್ಲಿಯ ಎಲ್ಲ ವ್ಯಾಪಾರಕ್ಕೂ ಕಡಿವಾಣ ಹಾಕಿತ್ತು.

ಪ್ರಸ್ತುತ ಮತ್ತೆ ಅನೇಕ ವ್ಯಾಪಾರಿಗಳಿಗೆ ದೇವಸ್ಥಾನದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ, ಮತ್ತೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಹೋರಾಟವನ್ನು ಆರಂಭಿಸಿದ್ದು, ಸಹಜವಾಗಿ ದೇವಸ್ಥಾನ ಆಡಳಿತ ಮಂಡಳಿಗೆ ಆತಂಕ ಉಂಟಾಗಿದೆ. ಹಿಂದೂಪರ ಸಂಘಟನೆಗಳು ನೀಡಿದ ಮನವಿ ಬಗ್ಗೆ ಟ್ರಸ್ಟಿಗಳೊಂದಿಗೆ ಚರ್ಚಿಸಿ ನಿರ್ಧರಿಸಿರುವುದಾಗಿ ಟ್ರಸ್ಟ್‌ ಅಧ್ಯಕ್ಷರಾದ ಡಾ. ಪದ್ಮಾ ದೇಸಾಯಿ ಮಾಧ್ಯಮಗಳಿಗೆ ಹೇಳಿದ್ದಾರೆ.