ತಮಿಳುನಾಡಿನ ಉತ್ಪನ್ನಗಳನ್ನು ಬಹಿಷ್ಕರಿಸಲು ಆಗ್ರಹ
KannadaprabhaNewsNetwork | Published : Oct 10 2023, 01:01 AM IST
ತಮಿಳುನಾಡಿನ ಉತ್ಪನ್ನಗಳನ್ನು ಬಹಿಷ್ಕರಿಸಲು ಆಗ್ರಹ
ಸಾರಾಂಶ
ಚನ್ನಪಟ್ಟಣ: ಕಾವೇರಿ ನೀರು ಹಂಚಿಕೆಗೆ ಸಂಕಷ್ಟ ಸೂತ್ರ ರಚಿಸುವಂತೆ ಹಾಗೂ ಮೇಕೆದಾಟು ಯೋಜನೆಗೆ ಅಡಿಕಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಡೆಸುತ್ತಿರುವ ಪ್ರತಿನಿತ್ಯ ಒಂದು ತಾಸು ಪ್ರತಿಭಟನೆಗೆ ಆಪೇ ಆಟೊ ಚಾಲಕರ ಸಂಘ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿತ್ತು.
ಚನ್ನಪಟ್ಟಣ: ಕಾವೇರಿ ನೀರು ಹಂಚಿಕೆಗೆ ಸಂಕಷ್ಟ ಸೂತ್ರ ರಚಿಸುವಂತೆ ಹಾಗೂ ಮೇಕೆದಾಟು ಯೋಜನೆಗೆ ಅಡಿಕಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಡೆಸುತ್ತಿರುವ ಪ್ರತಿನಿತ್ಯ ಒಂದು ತಾಸು ಪ್ರತಿಭಟನೆಗೆ ಆಪೇ ಆಟೊ ಚಾಲಕರ ಸಂಘ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿತ್ತು. ಸೋಮವಾರ ನಗರದ ಅಂಚೆ ಕಚೇರಿಯ ಕಾವೇರಿ ಸರ್ಕಲ್‌ನಲ್ಲಿ ವೇದಿಕೆಯ 5ನೇ ದಿನದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಆಪೇ ಆಟೋ ಚಾಲಕರು ತಮಿಳುನಾಡಿನಿಂದ ಬರುವ ಪಟಾಕಿಯನ್ನು ರಸ್ತೆಗೆ ಸುರಿದು ನೀರು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಕಕಜವೇ ರಾಜ್ಯಾಧ್ಯಕ್ಷ ರಮೇಶ್‌ಗೌಡ ಮಾತನಾಡಿ, ರಾಜ್ಯದಲ್ಲಿ ನೀರಿಲ್ಲದಿದ್ದರೂ ಬಲವಂತವಾಗಿ ರಾಜಕೀಯ ಒತ್ತಡದಿಂದ ತಮಿಳುನಾಡು ನೀರು ಪಡೆಯುತ್ತಿದೆ. ಕಾವೇರಿ ನೀರು ಹರಿಸದಂತೆ ಪ್ರತಿಭಟನೆಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರ ರಾಜಕೀಯ ಲಾಭಕ್ಕಾಗಿ ರಾಜ್ಯದ ರೈತರ ಹಿತವನ್ನು ಬಲಿ ಕೊಟ್ಟು ನೀರನ್ನು ಹರಿಸುತ್ತಿದೆ. ಸರ್ಕಾರವನ್ನು ನಂಬಿ ಕೂರುವ ಬದಲು ರಾಜ್ಯದ ಜನತೆಯೇ ಕಾವೇರಿ ನೀರಿನ ರಕ್ಷಣೆಗೆ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ತಮಿಳುನಾಡಿನ ಎಲ್ಲಾ ಉತ್ಪನ್ನಗಳನ್ನು ಬಹಿಷ್ಕರಿಸಲು ಸ್ವಾಭಿಮಾನಿ ಕನ್ನಡಿಗರು ಪಣ ತೊಡಬೇಕು ಎಂದರು. ಕಾವೇರಿ ನೀರು, ಮೇಕೆದಾಟು ಯೋಜನೆ ಸೇರಿದಂತೆ ಎಲ್ಲ ವಿಚಾರಗಳಲ್ಲೂ ರಾಜ್ಯಕ್ಕೆ ತೊಂದರೆ ನೀಡುತ್ತಿರುವ ತಮಿಳುನಾಡಿಗೆ ಬುದ್ಧಿ ಕಲಿಸಬೇಕು. ಆ ನಿಟ್ಟಿನಲ್ಲಿ ತಮಿಳುನಾಡಿನ ಹಾಲು, ತಮಿಳು ಸಿನಿಮಾಗಳು, ಪಟಾಕಿಯನ್ನು ಬಹಿಷ್ಕರಿಸಬೇಕು ಎಂದು ಆಗ್ರಹಿಸಿರು. ಆಪೇ ಆಟೋ ಚಾಲಕರ ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ರಾಜ್ಯದಲ್ಲಿ ನೀರಿನ ಅಭಾವ ಇರುವಾಗ ತಮಿಳುನಾಡಿನ ಮುಖ್ಯಮಂತ್ರಿ ಕಾವೇರಿ ಪ್ರಾಧಿಕಾರದ ಮೂಲಕ ಬಲವಂತವಾಗಿ ನೀರನ್ನು ಪಡೆಯುತ್ತಿರುವುದು ಖಂಡಿನೀಯ. ಕಾವೇರಿ ನೀರಿನ ವಿಚಾರದಲ್ಲಿ ಸದಾ ಕಿರುಕುಳ ನೀಡುವ ತಮಿಳುನಾಡಿನ ಉತ್ಪನ್ನಗಳನ್ನು ನಮ್ಮ ರಾಜ್ಯದಲ್ಲಿ ಬಳಕೆ ಮಾಡದೆ ಬಹಿಸ್ಕರಿಸಿ ಪಾಠ ಕಲಿಸಬೇಕಿದೆ. ಈ ನಿಟ್ಟಿನಲ್ಲಿ ತಮಿಳುನಾಡಿನ ಪ್ರಮುಖ ಉತ್ಪನ್ನವಾಗಿರುವ ಪಟಾಕಿಯನ್ನು ಬಹಿಷ್ಕರಿಸುವಂತೆ ತಿಳಿಸಿದರು. ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ಉಪಾಧ್ಯಕ್ಷ ರಂಜಿತ್‌ಗೌಡ, ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ತಾಲೂಕು ಹಿರಿಯ ಉಪಾಧ್ಯಕ್ಷ ಚಿಕ್ಕಣ್ಣಪ್ಪ, ವೆಂಕಟರಮಣ, ಹನುಮಾಪುರದೊಡ್ಡಿ ಶಿವು, ಮನು ಚಿಕ್ಕನದೊಡ್ಡಿ, ಚಿಕ್ಕೇನಹಳ್ಳಿ ಸುರೇಶ್ ಇತರರಿದ್ದರು. ಪೊಟೋ೧೦ಸಿಪಿಟಿ೧: ಕಾವೇರಿ ನೀರು ಹಂಚಿಕೆಗೆ ಸಂಕಷ್ಟ ಸೂತ್ರ ರಚಿಸುವಂತೆ ಹಾಗೂ ಮೇಕೆದಾಟು ಯೋಜನೆಗೆ ಅಡಿಕಲ್ಲು ಹಾಕುವಂತೆ ಆಗ್ರಹಿಸಿ ಕಕಜವೇ ನಡೆಸುತ್ತಿರುವ 5ನೇ ದಿನದ ಪ್ರತಿಭಟನೆ ಅಪೇ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿ ರಸ್ತೆಗೆ ಪಟಾಕಿ ಹಾಕಿ ನೀರು ಸುರಿದು ಪ್ರತಿಭಟನೆ ನಡೆಸಿದರು.