ಸಾರಾಂಶ
ಸದಸ್ಯರೆಲ್ಲರೂ ಏಕ ನಿರ್ಣಯಕ್ಕೆ ಬಂದು ಆಡಳಿತಾಧಿಕಾರಿ ಅವರ ಅವಧಿಯಲ್ಲಿ ಎಲ್‌ಪಿಜಿ ಬಂಕ್ ನಿರ್ಮಾಣಕ್ಕೆ ನೀಡಿದ ನಿರಾಪೇಕ್ಷಣಾ ಪತ್ರ ರದ್ದುಪಡಿಸುವಂತೆ ಒತ್ತಾಯಿಸಿದರು.
ಭಟ್ಕಳ: ಪಟ್ಟಣದ ಸಂತೆ ಮಾರುಕಟ್ಟೆ ರಸ್ತೆಯ ಸನಿಹದಲ್ಲಿ ಎಲ್‌ಪಿಜಿ ಬಂಕ್ ನಿರ್ಮಿಸಲು ಪುರಸಭೆಯಿಂದ ಜಿಲ್ಲಾಧಿಕಾರಿ ಅವರಿಗೆ ನಿರಾಪೇಕ್ಷಣಾ ಪತ್ರ ನೀಡಿರುವುದನ್ನು ಸದಸ್ಯ ಫಯ್ಯಾಜ್ ಮುಲ್ಲಾ ಪ್ರಸ್ತಾಪಿಸಿದಾಗ ಸದಸ್ಯರು ಇದನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಇಲ್ಲಿನ ಪುರಸಭೆ ಸಭಾಭವನದಲ್ಲಿ ಶುಕ್ರವಾರ ಸಂಜೆ ಆಡಳಿತಾಧಿಕಾರಿ ಹಾಗೂ ಸಹಾಯಕ ಆಯುಕ್ತೆ ಡಾ. ನಯನಾ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ವಿರೋಧದ ಮಧ್ಯೆಯೂ ಎಲ್‌ಪಿಜಿ ಬಂಕ್ ನಿರ್ಮಾಣಕ್ಕೆ ನಿರಾಪೇಕ್ಷಣಾ ಪತ್ರ ಹೇಗೆ ನೀಡಲಾಗಿದೆ ಎಂದು ಸದಸ್ಯರು ಪ್ರಶ್ನಿಸಿದರು. ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು ಠರಾವನ್ನು ಜಿಲ್ಲಾಧಿಕಾರಿ ಅವರಿಗೆ ಕಳುಹಿಸಲಾಗಿತ್ತು. ಜಿಲ್ಲಾಧಿಕಾರಿಯವರು ಎಲ್‌ಪಿಜಿ ಬಂಕ್ ತೆರೆಯಲು ಅಗತ್ಯವಿರುವ ಸಂಬಂಧಿಸಿದ ಎಲ್ಲ ಇಲಾಖೆಯ ನಿರಾಪೇಕ್ಷಣಾ ಪತ್ರ ಲಗ್ತ ಇಟ್ಟು ಪುನಃ ಆಡಳಿತಾಧಿಕಾರಿ ಅವರ ಅಧಿಕಾರದಲ್ಲಿ ಪುರಸಭೆಯಿಂದ ನಿರಾಪೇಕ್ಷಣಾ ಪತ್ರ ನೀಡುವಂತೆ ಸೂಚಿಸಿದ್ದರು. ಅವರ ನಿರ್ದೇಶನದಂತೆ ಜಿಲ್ಲಾಧಿಕಾರಿಯವರಿಗೆ ನಿರಾಪೇಕ್ಷಣಾ ಪತ್ರ ನೀಡಲಾಗಿದೆ ಎಂದರು. ಮುಖ್ಯಾಧಿಕಾರಿ ಉತ್ತರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಅಧ್ಯಕ್ಷ ಪರ್ವೇಜ್ ಕಾಶೀಮಜಿ ಪುರಸಭೆಯಲ್ಲಿ ಸದಸ್ಯರ ಆಡಳಿತವಿದೆ. ಆದರೆ ಆಡಳಿತಾಧಿಕಾರಿಗಳು ವೈಯಕ್ತಿಕ ಠರಾವು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿ, ಸದಸ್ಯರ ನಿರ್ಣಯದ ಠರಾವು ಊರ್ಜಿತದಲ್ಲಿರುವಾಗ ಅದನ್ನು ರದ್ದುಪಡಿಸದೇ ಜಿಲ್ಲಾಧಿಕಾರಿಗಳು ಪುನಃ ನಿರಾಪೇಕ್ಷಣಾ ಪತ್ರ ನೀಡುವಂತೆ ಹೇಗೆ ಸೂಚಿಸಲು ಬರುತ್ತದೆ ಎಂದರು.ಇದೇ ವಿಚಾರಕ್ಕೆ ಸದಸ್ಯರೆಲ್ಲರೂ ಏಕ ನಿರ್ಣಯಕ್ಕೆ ಬಂದು ಆಡಳಿತಾಧಿಕಾರಿ ಅವರ ಅವಧಿಯಲ್ಲಿ ಎಲ್‌ಪಿಜಿ ಬಂಕ್ ನಿರ್ಮಾಣಕ್ಕೆ ನೀಡಿದ ನಿರಾಪೇಕ್ಷಣಾ ಪತ್ರ ರದ್ದುಪಡಿಸುವಂತೆ ಒತ್ತಾಯಿಸಿದರು.
ಪಟ್ಟಣದ ರಂಗಿನಕಟ್ಟೆ, ಮಣ್ಕುಳಿ, ಸಾಗರ ರಸ್ತೆ ಹಾಗೂ ಮಣ್ಕುಳಿಯಲ್ಲಿ ಐಆರ್‌ಬಿಯವರಿಂದಾಗಿ ಹೆದ್ದಾರಿಯಲ್ಲಿ ತುಂಬಿದ ಮಳೆ ನೀರು ಮನೆಗಳಿಗೆ ನುಗ್ಗುತ್ತಿದೆ. ಪುರಸಭೆ ಹಾಗೂ ಐಆರ್‌ಬಿಯ ನಿರ್ಲಕ್ಷ್ಯದಿಂದಾಗಿ ಭಟ್ಕಳ ರಾಜ್ಯವ್ಯಾಪಿ ಸುದ್ದಿಯಾಗುತ್ತಿದೆ. ಇದರ ಬಗ್ಗೆ ಪುರಸಭೆಯಿಂದ ಕ್ರಮ ಆಗಬೇಕು ಎಂದು ಸದಸ್ಯರಾದ ಅಲ್ತಾಫ ಖರೂರಿ, ರಾಘವೇಂದ್ರ ಗವಾಳಿ ಸಭೆಯ ಗಮನಕ್ಕೆ ತಂದರು.ಇದಕ್ಕೆ ಉತ್ತರಿಸಿದ ಆಡಳಿತಾಧಿಕಾರಿ ಡಾ. ನಯನಾ ಅವರು ಹೆದ್ದಾರಿ ಸಮಸ್ಯೆ ಬಗ್ಗೆ ಬೆಂಗಳೂರಿನಲ್ಲಿ ಚರ್ಚೆಯಾಗಿದ್ದು, ಶೀಘ್ರವೇ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ ಎಂದರು.
ಪಟ್ಟಣದಲ್ಲಿ ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿಯಿಂದ ನಿರ್ಮಿಸಿದ ಮ್ಯಾನ್‌ಹೋಲ್‌ಗಳು ಸೋರಿಕೆಯಾಗಿ ಬಾವಿಗೆ ಸೇರಿ ನೀರು ಕಲುಷಿತಗೊಂಡಿದೆ. ಛೇಂಬರ್ ಮಾಡಲು ಅಗೆದ ರಸ್ತೆಗಳಿಗೆ ಸರಿಯಾಗಿ ಡಾಂಬರೂ ಹಾಕದೇ ಇರುವುದರಿಂದ ಜನರು ತಿರುಗಾಡದ ಸ್ಥಿತಿ ಬಂದಿದೆ. ಈ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಸುಮ್ಮನಿದ್ದಾರೆ. ಇದಕ್ಕೆಲ್ಲಾ ಯಾರು ಜವಾಬ್ದಾರಿ ಎಂದು ಸದಸ್ಯ ಫಯಾಜಮುಲ್ಲಾ, ಇಮಶ್ಯಾದ್, ಮೊಹ್ಮದ್ ಕೈಸರ್ ಪ್ರಸ್ತಾಪಿಸಿದರು.ಇದಕ್ಕೆ ಉತ್ತರ ನೀಡಿದ ಆಡಳಿತಾಧಿಕಾರಿ ಡಾ. ನಯನಾ ಮುಂದಿನ ವಾರ ಸಂಬಂಧ ಪಟ್ಟ ಇಲಾಖೆಯ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದರು.
ಸದಸ್ಯರು, ಅಭಿಯಂತರ ಅರವಿಂದ ರಾವ್, ಪರಿಸರ ಅಭಿಯಂತರ ವೆಂಕಟೇಶ ನಾವಡ, ಆರೋಗ್ಯಾಧಿಕಾರಿ ಸೋಜಿಯಾ ಸೋಮನ್, ಕಂದಾಯ ಅಧಿಕಾರಿ ವೆಂಕಟೇಶ ನಾಯ್ಕ ಮುಂತಾದವರಿದ್ದರು.