ಗ್ರಾಮಸಭೆಗೆ ಗೈರಾಗುವ ಸದಸ್ಯರ ಸದಸ್ಯತ್ವ ರದ್ದಿಗೆ ಆಗ್ರಹ

| Published : Jan 01 2025, 12:02 AM IST

ಸಾರಾಂಶ

ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ವಿಶೇಷ ಸಭೆಗೆ ಕೆಲವು ಸದಸ್ಯರು ಗೈರುಹಾಜರಾಗುವ ಮೂಲಕ ಸಭೆ ಹಾಗೂ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯುಂಟಾಗಿದೆ. ಕೂಡಲೇ ಗೈರುಗೊಂಡಿರುವವರ ಸದಸ್ಯತ್ವ ರದ್ದುಪಡಿಸಬೇಕೆಂದು ಎಸ್‌ಡಿಟಿಯು ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ವಿಶೇಷ ಸಭೆಯನ್ನು ಗ್ರಾ.ಪಂ.ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಕರೆದಿದ್ದು ಸಭೆಗೆ ಕೆಲವು ಸದಸ್ಯರು ಗೈರುಹಾಜರಾಗುವ ಮೂಲಕ ಸಭೆ ಹಾಗೂ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯುಂಟಾಗಿದೆ. ಕೂಡಲೇ ಗೈರುಗೊಂಡಿರುವವರ ಸದಸ್ಯತ್ವ ರದ್ದುಪಡಿಸಬೇಕೆಂದು ಎಸ್‌ಡಿಟಿಯು ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಸಂಘಟನೆ ಕಾರ್ಯದರ್ಶಿ ಲತೀಫ್‌, ಗ್ರಾ.ಪಂ. ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಪಂಚಾಯತ್ ರಾಜ್ ಅಧಿನಿಯಮದ ಅಡಿಯಲ್ಲಿ ಕಾಲಕಾಲಕ್ಕೆ ಗ್ರಾಮ ಪಂಚಾಯಿತಿ ಸಭೆಗಳನ್ನು ಕರೆಯುತ್ತಿದ್ದಾರೆ. ಸಭೆಗಳಿಗೆ ಗೈರಾಗುವ ಮೂಲಕ ಬಹಿಷ್ಕಾರ ಹಾಕುವುದರಿಂದ ಏನು ಸಾಧಿಸಲು ಸಾಧ್ಯವಿಲ್ಲ. ಸಾಕಷ್ಟು ಮುಂಚಿತವಾಗಿ ಸಭಾ ತಿಳಿವಳಿಕೆ ಪತ್ರ ನೀಡುವ ಹಿನ್ನಲೆಯಲ್ಲಿ ಜನಪ್ರತಿನಿಧಿಗಳಾಗಿರುವ ಸದಸ್ಯರು ಲಿಖಿತವಾಗಿ ಇಲ್ಲವೇ ಸಭೆಗೆ ಹಾಜರಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿರುವಾಗ ಅನಾವಶ್ಯಕವಾಗಿ ಸಭೆಗಳನ್ನು ಮುಂದೂಡುವಂತೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ 3 ತಿಂಗಳಿನಿಂದ 2 ಸಾಮಾನ್ಯ ಸಭೆ ಹಾಗೂ 1 ವಿಶೇಷ ಸಭೆ ನಡೆದಿದ್ದು ಗ್ರಾಮಸ್ಥರ 90 ಅರ್ಜಿಗಳು ಬಂದಿದ್ದವು. ಕೊರಂ ಕೊರತೆ ಹಿನ್ನಲೆಯಲ್ಲಿ ಅರ್ಜಿಗಳು ವಿಲೇವಾರಿಗೊಳ್ಳದೆ ಸಮಸ್ಯೆಯಾಗಿದೆ. ನಂತರ ಅಂದಾಜು 110 ಮಿಕ್ಕಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಬಾರಿಯಾದರೂ ಸಭೆಯಲ್ಲಿ ಸದಸ್ಯರೆಲ್ಲಾರೂ ಪಾಲ್ಗೊಂಡು ಅಭಿವೃದ್ಧಿ ಪರ ಚಿಂತನೆಯಲ್ಲಿ ಕೈಜೋಡಿಸಲಿ ಎಂದು ಎಸ್‌ಡಿಟಿಯು ಸಂಘಟನೆ ಜಿಲ್ಲಾಧ್ಯಕ್ಷ ಅಣ್ಣಾ ಶರೀಫ್ ಸಲಹೆ ಮಾಡಿದ್ದಾರೆ.

ಸುಂಟಿಕೊಪ್ಪ ಎಸ್‌ಡಿಟಿಯು ಅಧ್ಯಕ್ಷ ಪಿರೋಜ್ ಖಾನ್, ಕಾರ್ಯದರ್ಶಿ ನೌಶದ್ ಧ್ವನಿಗೂಡಿಸಿದ್ದಾರೆ.