ಸಾರಾಂಶ
ಶಿರಹಟ್ಟಿ: ಶಿರಹಟ್ಟಿ ತಾಲೂಕು ಕೇಂದ್ರ ಸ್ಥಳವಾಗಿದ್ದರೂ ಅನೇಕ ರೀತಿಯ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ನಿತ್ಯ ಗ್ರಾಮೀಣ ಪ್ರದೇಶದಿಂದ ಸರ್ಕಾರಿ ಕೆಲಸ ಕಾರ್ಯಗಳಿಗೆ ಹಾಗೂ ಶಾಲಾ-ಕಾಲೇಜಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಆಗಮಿಸುತ್ತಾರೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿದ್ದು, ಈ ಕೂಡಲೆ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಪ್ರಜಾಪರ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಹಸನ್ ತಹಸೀಲ್ದಾರ್ ನೇತೃತ್ವದಲ್ಲಿ ಶನಿವಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಶಿರಹಟ್ಟಿ ಘಟಕದ ವ್ಯವಸ್ಥಾಪಕರಿಗೆ ಲಿಖಿತ ಮನವಿ ಸಲ್ಲಿಸಲಾಯಿತು.ಈ ವೇಳೆ ಹಸನ್ ತಹಸೀಲ್ದಾರ್ ಮಾತನಾಡಿ, ಶಿರಹಟ್ಟಿ ಬಸ್ ನಿಲ್ದಾಣದಲ್ಲಿ ದಿನೆ ದಿನೆ ಜನದಟ್ಟಣೆ ಹೆಚ್ಚಾಗುತ್ತಿದೆ. ನಿತ್ಯ ವಿವಿಧ ಗ್ರಾಮಗಳಿಂದ ರೈತರು, ವ್ಯಾಪಾರಸ್ಥರು, ಸಾರ್ವಜನಿಕರು, ಮಹಿಳೆಯರು ತಮ್ಮ ಕೆಲಸ ಕಾರ್ಯಗಳಿಗೆ ಆಗಮಿಸುತ್ತಿದ್ದು, ಸರಿಯಾದ ಸಮಯಕ್ಕೆ ಬಸ್ ಬಾರದೇ ಇರುವ ವೇಳೆ ತೀವ್ರ ಜನದಟ್ಟಣೆಯಿಂದ ಮಹಿಳೆಯರಿಗೆ, ಶಾಲಾ ವಿದ್ಯಾರ್ಥಿನಿಯರಿಗೆ ಸುರಕ್ಷತೆ ಇಲ್ಲದಾಗಿದೆ. ಪ್ರಯಾಣಿಕರಿಗೆ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ಇಲ್ಲ. ಈ ಕೂಡಲೇ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು.ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಇರುವದರಿಂದ ಮಹಿಳೆಯರು, ಚಿಕ್ಕಚಿಕ್ಕ ಮಕ್ಕಳು, ಶಾಲಾ- ಕಾಲೇಜು ವಿದ್ಯಾರ್ಥಿಗಳು ಅಶುದ್ಧ ನೀರು ಸೇವನೆ ಮಾಡಿ ಕಾಯಿಲೆಗೆ ಸಿಲುಕುವಂತಾಗಿದೆ ಎಂದರು.
ಸರ್ಕಾರ ಏನೆಲ್ಲ ಅನುಕೂಲತೆ ಕಲ್ಪಿಸಿ ಕೊಡುತ್ತಿದ್ದು, ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಹೆಚ್ಚು ಆಸಕ್ತಿ ತೋರಬೇಕು. ಬಸ್ ನಿಲ್ದಾಣದ ಹಿಂಬದಿಯಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದು ಕಂಡು ಬರುತ್ತಿದೆ. ಮಳೆಗಾಲವಾದ್ದರಿಂದ ಕಾಯಿಲೆಗಳು ಸಹಜವಾಗಿ ಹರಡುತ್ತಿದ್ದು, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಡೆಂಘೀ ಪ್ರಕರಣಗಳು ಉಲ್ಬಣವಾಗುತ್ತಿದ್ದು, ಸ್ವಚ್ಛತೆಗೆ ಗಮನಹರಿಸಬೇಕು. ಒಟ್ಟಾರೆ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗೆ ತುರ್ತು ಸ್ಪಂದಿಸಿ ಎಲ್ಲ ವ್ಯವಸ್ಥೆ ಕಲ್ಪಿಸಿಕೊಡಲು ಮುಂದಾಗಬೇಕು ಎಂದು ಆಗ್ರಹಿಸಿದರು.ಸಾರಿಗೆ ನಿಗಮದ ಘಟಕ ವ್ಯವಸ್ಥಾಪಕರು ಮನವಿ ಸ್ವೀಕರಿಸಿ ಮಾತನಾಡಿ, ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿ ಕೊಡಲು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಮನವಿ ನೀಡುವಲ್ಲಿ ಶರೀಫ ಗುಡಿಮನಿ, ಭರಮಪ್ಪ ಎಚ್., ಸಾಧಿಕ ಮುಳಗುಂದ, ಕಳಕಪ್ಪ ಬಿಸನಳ್ಳಿ ಸೇರಿ ಅನೇಕರು ಇದ್ದರು.