ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರ ಸರ್ಕಾರ ₹2 ಲಕ್ಷ ಕೋಟಿ ಹಣ ಮೀಸಲಿಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ವತಿಯಿಂದ ಜಿಲ್ಲಾಡಳಿತ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.ಒಂದು ಕುಟುಂಬಕ್ಕೆ ನೂರು ದಿನಗಳ ಬದಲಿಗೆ 200 ದಿನಗಳ ಕೆಲಸ ಖಾತ್ರಿಗೊಳಿಸಬೇಕು, ಕೆಲಸ ಮಾಡುವಾಗ ಕಾರ್ಮಿಕರು ಮರಣ ಹೊಂದಿದರೆ 5 ಲಕ್ಷ ರೂ., ಪರಿಹಾರ ನೀಡಬೇಕೆಂದು ಸಂಘಟನೆಯಿಂದ ಆಗ್ರಹಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಅಲ್ಲದೇ, ವಿಧವೆ, ಪತಿಯಿಂದ ದೂರವಿರುವ ಹಾಗೂ ಅವಿವಾಹಿತ ಒಂಟಿ ಮಹಿಳೆಯರಿಗೆ ಪ್ರತ್ಯೇಕವಾಗಿ ರೇಷನ್ ಕಾರ್ಡ ನೀಡಬೇಕು, ದೇಶದಲ್ಲಿ ಅಪೌಷ್ಠಿಕ ಮಕ್ಕಳು ಹಾಗೂ ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ. ಅತಿ ಅಗತ್ಯ ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೆ ಏರಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅದನ್ನು ಕೊಂಡಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಸರಕಾರ ರಾಗಿ, ಜೋಳ, ತೊಗರಿ ಬೆಳೆ ಹಾಗೂ ಎಣ್ಣೆ, ನ್ಯಾಯಬೆಲೆ ಅಂಗಡಿಯ ಮೂಲಕ ವಿತರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಹೊಸ ರೇಷನ್ ಕಾರ್ಡಗೆ ಅರ್ಜಿ ಸಲ್ಲಿಸಲು ಅವಕಾಶ ಹಾಗೂ ಅರ್ಜಿ ಸಲ್ಲಿಸಿ ವರ್ಷಗಳು ಕಳೆದರು ರೇಷನ ಕಾರ್ಡ ದೊರೆಯುತ್ತಿಲ್ಲ. ನಿಜವಾದ ಬಡವರು ತೊಂದರೆ ಅನುಭವಿಸುತ್ತಿದ್ದಾರೆ ಆದ್ದರಿಂದ ತಕ್ಷಣ ಅರ್ಜಿ ಸಲ್ಲಿಸಿದ ಕುಟುಂಬಗಳಿಗೆ ಕಾರ್ಡ ನೀಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಪಿ.ಎಸ್. ಸುಧಾ, ಕೆ.ಎಸ್. ಶಶಿಕಲಾ, ನಾಗಮ್ಮ, ದುರುಗಮ್ಮ, ರತ್ನಮ್ಮ, ಬಸಣ್ಣ, ನಾಗರಾಜ್, ಹನುಮಂತಪ್ಪ, ರಾಜ, ಪರಶುರಾಮಪ್ಪ, ಗೀತಾ, ನಾಗರತ್ನ, ಮಂಜುಳಮ್ಮ ಮತ್ತಿತರರು ಇದ್ದರು.