ಸಾರಾಂಶ
ಸಂವಿಧಾನ ವಿರೋಧಿಯಾಗಿ ಕೆರೆಗಳಿಗೆ ತ್ಯಾಜ್ಯ ನೀರನ್ನು ಬಿಡಲಾಗುತ್ತಿದೆ. ಕುಡಿಯುವ ನೀರು ವಿಷವಾಗಿದ್ದು, ಗ್ರಾಮಗಳಿಗೆ ಶುದ್ದ ಕುಡಿಯುವ ನೀರಿಗಾಗಿ ಹಕ್ಕೊತ್ತಾಯ ಮಂಡಿಸಿ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ದಿನದಂದು ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ನಡೆಸಿದರು.
ದೊಡ್ಡಬಳ್ಳಾಪುರ: ಸಂವಿಧಾನ ವಿರೋಧಿಯಾಗಿ ಕೆರೆಗಳಿಗೆ ತ್ಯಾಜ್ಯ ನೀರನ್ನು ಬಿಡಲಾಗುತ್ತಿದೆ. ಕುಡಿಯುವ ನೀರು ವಿಷವಾಗಿದ್ದು, ಗ್ರಾಮಗಳಿಗೆ ಶುದ್ದ ಕುಡಿಯುವ ನೀರಿಗಾಗಿ ಹಕ್ಕೊತ್ತಾಯ ಮಂಡಿಸಿ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ದಿನದಂದು ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ನಡೆಸಿದರು.
ಅರ್ಕಾವತಿ ನದಿ ಹೋರಾಟ ಸಮಿತಿ ಮೂರನೇ ಹಂತದ ಶುದ್ಧೀಕರಣಕ್ಕಾಗಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ದೊಡ್ಡಬಳ್ಳಾಪುರದ ನಗರದ ತಹಸೀಲ್ದಾರ್ ಕಚೇರಿ ಮುಂದೆ ಹಮ್ಮಿಕೊಂಡಿದ್ದರು.ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರನ್ನು ಶುದ್ಧೀಕರಣ ಮಾಡದೆ ನೇರವಾಗಿ ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ಬಿಡಲಾಗುತ್ತಿದೆ. ಕೆರೆಗಳಿಗೆ ತ್ಯಾಜ್ಯ ನೀರನ್ನು ಬಿಡುವ ಮೂಲಕ ಗ್ರಾಮಸ್ಥರ ಶುದ್ಧ ನೀರು ಕುಡಿಯುವ ಹಕ್ಕನ್ನ ಕಸಿದುಕೊಂಡಿದ್ದಾರೆ ಎಂಬುದು ಹೋರಾಟಗಾರರ ಆಕ್ರೋಶವಾಗಿದೆ.
ಮುಖಂಡ ವಸಂತಕುಮಾರ್ ಮಾತನಾಡಿ, ಭಾರತಕ್ಕೆ ಸಂವಿಧಾನ ಕೊಟ್ಟು ಸಮಾನತೆಯ ಹಾದಿ ತೋರಿಸಿದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ನಾವು ಬಹಳ ಸಂಭ್ರಮದಿಂದ ಆಚರಿಸಬೇಕು. ಆದರೆ ಸಂವಿಧಾನ ವಿರೋಧಿಯಾಗಿ ಕೆರೆಗಳಿಗೆ ತ್ಯಾಜ್ಯ ನೀರನ್ನು ಬಿಡುತ್ತಿದ್ದಾರೆ. ಇದರಿಂದ ದೊಡ್ಡತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಪಂ 17 ಗ್ರಾಮಗಳ ಜನರ ಕುಡಿಯುವ ನೀರನ್ನು ವಿಷ ಮಾಡಿದ್ದಾರೆ. ಶುದ್ಧ ನೀರು ಕೊಡುವುದು ಸರ್ಕಾರದ ಕರ್ತವ್ಯ. ಶುದ್ಧ ನೀರನ್ನು ಕೇಳುವುದು ನಮ್ಮ ಹಕ್ಕು. ಆ ಕಾರಣಕ್ಕಾಗಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದಾಗಿ ಹೇಳಿದರು.ಗ್ರಾಮಸ್ಥರಾದ ವಿಜಯಕುಮಾರ್, ಮುನಿಕೃಷ್ಣಪ್ಪ, ಚನ್ನಕೇಶವ, ರಮೇಶ್, ಸತೀಶ್, ಮೂರ್ತಿ , ವಿಜಯಕುಮಾರ್ ದೊಂಬರಹಳ್ಳಿ, ವಸಂತ್ ಕುಮಾರ್, ಮಂಜುನಾಥ್ ಭಾಗವಹಿಸಿದ್ದರು.