ಸಾರಾಂಶ
ಹೂವಿನಹಡಗಲಿ: ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ ಎದುರು ರೈತರು ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡಿದರು.
ಮುಂಡರಗಿ ತಾಲೂಕಿನ ಮುಂಡವಾಡ, ಹಮ್ಮಿಗಿ ಮತ್ತು ಕೇರಳಿ ತಾಂಡಾದ 50ಕ್ಕೂ ಹೆಚ್ಚು ರೈತರು, ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು.ಈ ವೇಳೆ ಮಾತನಾಡಿದ ಮುಂಡವಾಡದ ಎಂ.ಎಸ್. ಪಾಟೀಲ್, ನಮ್ ಜಮೀನು ನಿಮಗ ಕೊಟ್ಟು ಪರಿಹಾರಕ್ಕಾಗಿ ಕಚೇರಿಗೆ ಅಲೆದಾಡಲು ಇನ್ನೊಂದು ಭೂಮಿ ಮಾರಾಟ ಮಾಡ ಪರಿಸ್ಥಿತಿ ಬಂದೈತಿ, ರೈತರ ಕೆಲಸ ಮಾಡಿರೇನು ಬಿಟ್ಟರೇನು, ತಿಂಗಳ ಪಗಾರ ಬಂದು ನಿಮ್ ಖಾತೆಗೆ ಬಂದು ಬೀಳುತ್ತೈತಿ, ನಮಗ್ಯಾರು ಪಗಾರ ಕೊಡತಾರ? ನಾವು ಇಲ್ಲಿ ಪ್ರತಿಭಟನೆ ಮಾಡಕ ಬಂದಿರೋದು, ನಿಮ್ಮಿಂದ ಹಿಂಬರಹ ಪಡೆದು ಹಿಂದಕ್ಕೆ ಹೋಗಲಿಕ್ಕ ಬಂದಿಲ್ಲ. ನಮ್ ಜಮೀನು ಕೊಡ್ರಿ ಇಲ್ಲ ಪರಿಹಾರ ಕೊಡ್ರಿ, ನೀವು ರೈತರನ್ನು ಕಾಲ ಕಸ ಮಾಡಿದ್ದೀರಿ, ಎಷ್ಟು ಅಂತಾ ಅಲೆದಾಡೋದು? ಹುಡುಗಾಟ ಹಚ್ಚೀರಾ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ್ ಮಾತನಾಡಿ, ನಮ್ ಕಷ್ಟ ಕೇಳಕ ಕಚೇರಿಯಲ್ಲಿ ಜವಾಬ್ದಾರಿಯುತ ಅಧಿಕಾರಿಗಳೇ ಇಲ್ಲ, ರೈತರು ಮನಿಗ್ಯಾನಿ ಕೆಲ್ಸ ಬಿಟ್ಟು, ದನಕರ ಬೀದೀಲಿ ಕಟ್ಟಿ, ಹೆಂಡರು ಮಕ್ಕಳ್ನ ಬಿಟ್ಟು ಪರಿಹಾರ ಕೇಳಕ ಬಂದ್ರ ಅಧಿಕಾರಿಗಳ ಕ್ಯಾರೆ ಅನ್ನೋರಿಲ್ಲ. ರೈತರಿಗೆ ಕಿಮ್ಮತ್ತು ಇಲ್ಲದಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಬೇಕು ಎಂದು ಒತ್ತಾಯಿಸಿದರು.ಸಂಗನಗೌಡ ಪಾಟೀಲ್ ಮಾತನಾಡಿ, ಯೋಜನೆಯ ಕಾಲುವೆಗಾಗಿ ಮುಂಡವಾಡ, ಹಮ್ಮಿಗಿ ಮತ್ತು ಕೇರಳಿ ತಾಂಡಾದ 67 ಎಕ್ರೆ ಜಮೀನು ಭೂ ಸ್ವಾಧೀನವಾಗಿದೆ. ರೈತರಿಗೆ ಪರಿಹಾರ ವಿತರಣೆಯಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ. ಇನ್ನು 33 ಎಕರೆ ಪರಿಹಾರದ ಹಣ ಬಂದಿಲ್ಲ. ನಮ್ಮ ಭೂಮಿ ಪಡೆದು ಮಾಡಿರುವ ಕಾಲುವೆಗಳಲ್ಲಿ ನೀರು ಹರಿಯುತ್ತಿಲ್ಲ. ಇದರಿಂದ ನೀರಾವರಿ ಸೌಲಭ್ಯ ರೈತರಿಗೆ ಮರೀಚಿಕೆಯಾಗಿದೆ. ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರ ವಿರುದ್ಧ ಕ್ರಮವಿಲ್ಲ, ಕಾಲುವೆ ತುಂಬೆಲ್ಲಾ ಗಿಡ-ಗಂಟಿಗಳು ಬೆಳೆದು ಹಾಳಾಗಿವೆ. ಪರಿಹಾರ ನೀಡುವ ಜತೆಗೆ ಕಾಲುವೆಗಳನ್ನು ನಿರ್ವಹಣೆ ಮಾಡಿ ರೈತರ ಜಮೀನುಗಳಿಗೆ ನೀರು ಒದಗಿಸಬೇಕು ಎಂದು ಒತ್ತಾಯಿಸಿದರು.
ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ವಿ.ಬಿ. ಕೊಟ್ರೇಶ, ಕೆಆರ್‌ಎಸ್ ಪಕ್ಷದ ಚಂದ್ರಶೇಖರ ದೊಡ್ಮನಿ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಹೊಸಮನಿ ಸಿದ್ದಪ್ಪ ಮಾತನಾಡಿದರು.ರೈತರ ಸಮಸ್ಯೆ ಆಲಿಸಿದ ಮುಂಡರಗಿ ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಎಇಇ ರಮೇಶ ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯ ಬಾಷಾ ಸಾಹೇಬ್ ಮಾತನಾಡಿ, ಮುಂಡವಾಡ ಶಾಖಾ ಕಾಲುವೆ ನಿರ್ಮಾಣಕ್ಕಾಗಿ 33 ಎಕರೆ ಜಮೀನಿನ ಪರಿಹಾರ ಮಾತ್ರ ಬಾಕಿ ಇದೆ. ಈಗಾಗಲೇ ಅಂತಿಮ ಅಧಿಸೂಚನೆಗಾಗಿ ಬೆಂಗಳೂರು ಕಚೇರಿಗೆ ಕಡತಗಳನ್ನು ಸಲ್ಲಿಸಲಾಗಿದೆ. ಮುಂದಿನ 2 ತಿಂಗಳೊಳಗೆ ರೈತರ ಪರಿಹಾರ ವಿತರಿಸುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಹಿಂದೆ ಸರಿದರು.
ಸಿಪಿಐ ದೀಪಕ ಬೂಸರೆಡ್ಡಿ, ಪಿಎಸ್‌ಐ ವಿಜಯ ಕೃಷ್ಣ ಹಾಗೂ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಮಾಡಿದ್ದರು.