ನಿರಂತರ ಸುರಿಯುತ್ತಿರುವ ಮಳೆ ಹಾನಿಗೆ ಪರಿಹಾರ ನೀಡಲು ಆಗ್ರಹ

| Published : Jul 23 2024, 12:32 AM IST

ನಿರಂತರ ಸುರಿಯುತ್ತಿರುವ ಮಳೆ ಹಾನಿಗೆ ಪರಿಹಾರ ನೀಡಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಒಂದು ವಾರದಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಆಗಿರುವ ಹಾನಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತ ಸಂಘಟನೆ ಹಾಗೂ ಆಮ್ ಆದ್ಮಿ ಪಕ್ಷದ ವತಿಯಿಂದ ಉಪ ತಹಸೀಲ್ದಾರ್‌ ಎಸ್.ಟಿ. ದೊಡ್ಮನಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ರಾಣಿಬೆನ್ನೂರು: ಕಳೆದ ಒಂದು ವಾರದಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಆಗಿರುವ ಹಾನಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತ ಸಂಘಟನೆ ಹಾಗೂ ಆಮ್ ಆದ್ಮಿ ಪಕ್ಷದ ವತಿಯಿಂದ ಉಪ ತಹಸೀಲ್ದಾರ್‌ ಎಸ್.ಟಿ. ದೊಡ್ಮನಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಮಯದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಜನರು ತತ್ತರಿಸಿ ಹೋಗಿದ್ದಾರೆ. ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಮನೆಗಳು ಮತ್ತು ರೈತರು ಬೆಳೆದ ಬೆಳೆಗಳು ಮತ್ತು ದಿನನಿತ್ಯ ನಡೆಯುತ್ತಿರುವ ಚಟುವಟಿಕೆಗಳು ಕುಂಠಿತಗೊಂಡಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಾಧಿಕಾರಿಗಳು ಹಳ್ಳಿಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಹಳೆಯ ಮನೆಗಳಿಗೆ ಭೇಟಿ ನೀಡಬೇಕು. ನದಿಪಾತ್ರದ ಗ್ರಾಮಗಳಿಗೆ ತೆರಳಿ ಮುಳುಗಡೆಯಾಗಿರುವ ರೈತರ ಜಮೀನುಗಳಲ್ಲಿ ಆಗಿರುವ ಹಾನಿಯನ್ನು ಸರಿಯಾದ ರೀತಿಯಲ್ಲಿ ವೀಕ್ಷಣೆ ಮಾಡಬೇಕು. ಹಾನಿಯ ಕುರಿತು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿ ಪರಿಹಾರ ಕೊಡಿಸುವಂತಾಗಬೇಕು ಹಾಗೂ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಕೆಲಸ ನಿರ್ವಹಿಸಬೇಕು. ಹೆಸ್ಕಾಂ ಇಲಾಖೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಹಳ್ಳಿಗಳಲ್ಲಿ ವಿದ್ಯುತ್ ಕಂಬಗಳು ಮತ್ತು ಜಮೀನುಗಳಲ್ಲಿ ವಿದ್ಯುತ್ ತಂತಿಗಳಿಂದ ಆಗಬಹುದಾದ ಅನಾಹುತಗಳನ್ನು ತಪ್ಪಿಸುವಂತಹ ವ್ಯವಸ್ಥೆ ಮಾಡಬೇಕು. ಈಗಾಗಲೇ ಜಿಲ್ಲೆಯ ಸವಣೂರು ತಾಲೂಕಿನ ಮಾದಾಪುರದಲ್ಲಿ ಮನೆ ಬಿದ್ದು ಅವಳಿ-ಜವಳಿ ಮಕ್ಕಳು ಮತ್ತು ತಾಯಿಯು ಮರಣ ಹೊಂದಿದ್ದು, ಇಡೀ ರಾಜ್ಯಾದ್ಯಂತ ಜನರು ಭಯಭೀತಿಗೊಂಡಿದ್ದಾರೆ. ಹವಾಮಾನ ತಜ್ಞರು ಇನ್ನೂ ನಾಲ್ಕು ದಿನಗಳ ಕಾಲ ಮಳೆ ಸುರಿಯಬಹುದು ಎಂದು ಮುನ್ನೆಚ್ಚರಿಕೆ ನೀಡಿರುವುದರಿಂದ ಈಗಾಗಲೇ ಬಿದ್ದಿರುವ ಮನೆಗಳಿಗೆ ರು. 5 ಲಕ್ಷ ಪರಿಹಾರ ಘೋಷಣೆ ಮಾಡಬೇಕು ಹಾಗೂ ಹಸಿರು ಬರಗಾಲ ಎಂದು ಘೋಷಣೆ ಮಾಡಿ ರೈತರಿಗೆ ಪರಿಹಾರ ಮತ್ತು ಸಾಲ ಮನ್ನಾ ಮಾಡುವಂತಹ ವ್ಯವಸ್ಥೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರುದ್ರಗೌಡ ಪಾಟೀಲ, ದುರಗಪ್ಪ ಬಾಲಬಸವರ, ಕಿರಣ ಗುಳೇದ, ಲಲಿತವ್ವ ಲಮಾಣಿ, ಮಂಜವ್ವ ಲಮಾಣಿ, ಗಂಗವ್ವ ಲಮಾಣಿ, ಮಂಜವ್ವ ಚವಡಣ್ಣನವರ, ಸುರೇಶ ಕೂಲಕುಂಟೆ, ಗಜೇಂದ್ರ ಬಾಲಬಸವರ, ನಾಗರಾಜ ಚಿನ್ನಿಕಟ್ಟಿ, ಹನುಮವ್ವ ಬಾಲಬಸವರ, ನಾಗವ್ವ ಬಾಲಬಸವರ, ಹೊನ್ನವ್ವ ಬಾರ್ಕಿ, ಪುಟ್ಟವ್ವ ಬಾರ್ಕಿ ಮತ್ತಿತರರಿದ್ದರು.