ಶಿರೂರು ಸಂತ್ರಸ್ತರಿಗೆ ತಲಾ ₹1 ಕೋಟಿ ಪರಿಹಾರ ನೀಡಲು ಆಗ್ರಹ

| Published : Sep 13 2024, 01:30 AM IST

ಶಿರೂರು ಸಂತ್ರಸ್ತರಿಗೆ ತಲಾ ₹1 ಕೋಟಿ ಪರಿಹಾರ ನೀಡಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಶಿರೂರು ದುರಂತದಲ್ಲಿ ಮರಣ ಹೊಂದಿರುವವರ ಪ್ರತಿ ಕುಟುಂಬಗಳಿಗೂ ತಲಾ ಒಂದು ಕೋಟಿ ರುಪಾಯಿ ಪರಿಹಾರ ನೀಡಬೇಕು.

ಹೊನ್ನಾವರ: ಶಿರೂರು ದುರಂತ ಸಂತ್ರಸ್ತರಿಗೆ ನ್ಯಾಯ ನೀಡಬೇಕೆಂದು ಆಗ್ರಹಿಸಿ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಗುರುವಾರ ನಾಮಧಾರಿ, ಈಡಿಗ, ಹಾಲಕ್ಕಿ ಸಮಾಜ, ವಿವಿಧ ಜನಪರ ಸಂಘಟನೆಗಳ ಸಹಯೋಗದಲ್ಲಿ ಪಟ್ಟಣದಲ್ಲಿ ಪ್ರತಿಭಟಿಸಲಾಯಿತು.ಪಟ್ಟಣದ ಶರಾವತಿ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ರಾಷ್ಟ್ರೀಯ ಹೆದ್ದಾರಿ 66 ರ ಮೂಲಕ ಪಟ್ಟಣದ ಮಾಸ್ತಿಕಟ್ಟೆ ರಸ್ತೆ ಮೂಲಕ ಎನ್ಎಚ್ಎಐ ಕಚೇರಿಯವರೆಗೆ ತೆರಳಿತು. ಎನ್ಎಚ್ಎಐ, ಐಆರ್‌ಬಿ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಘೋಷಣೆ ಕೂಗಿದರು. ಈ ವೇಳೆ ಪ್ರತಿಭಟನಾನಿರತರನ್ನು ಪೊಲೀಸರು ಬ್ಯಾರಿಕೇಡ್ ಹಾಕುವ ಮೂಲಕ ತಡೆದರು.

ಪ್ರತಿಭಟನಾನಿರತರು ಪೊಲೀಸರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಎನ್ಎಚ್ಎಐ ಕಚೇರಿಗೆ ಮುತ್ತಿಗೆ ಹಾಕಲು ಬ್ಯಾರಿಕೇಡ್‌ ತೆರವುಗೊಳಿಸುವಂತೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ರವಿರಾಜ ದೀಕ್ಷಿತ್ ಮನವಿ ಸ್ವೀಕರಿಸಿದರು.

ಈ ವೇಳೆ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಶಿರೂರು ದುರಂತದಲ್ಲಿ ಮರಣ ಹೊಂದಿರುವವರ ಪ್ರತಿ ಕುಟುಂಬಗಳಿಗೂ ತಲಾ ಒಂದು ಕೋಟಿ ರುಪಾಯಿ ಪರಿಹಾರ ನೀಡಬೇಕು. ಮರಣ ಹೊಂದಿರುವವರ ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ ನೌಕರಿ ಒದಗಿಸಬೇಕು. ಕರ್ತವ್ಯಲೋಪ ಎಸಗಿದ ಎನ್ಎಚ್ಎಐ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ರಾಷ್ಟ್ರೀಯ ಈಡಿಗ ನಾಮಧಾರಿ ಮಹಾಮಂಡಳಿಯ ರಾಜ್ಯ ಯುವ ಘಟಕದ ಅಧ್ಯಕ್ಷ ಸಚಿನ್ ನಾಯ್ಕ ಮಾತನಾಡಿ, ಶಿರೂರು ಸಂತ್ರಸ್ತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದರು.ಕರವೇ ಘಟಕದ ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿ, ಪೊಲೀಸರು ಜನರಿಗೆ ರಕ್ಷಣೆ ಕೊಡುವ ಬದಲು ಅಧಿಕಾರಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಬ್ಯಾರಿಕೇಡ್‌ ಹಾಕುವ ಮೂಲಕ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೆಳಗಿನೂರು ಗ್ರಾಪಂ ಅಧ್ಯಕ್ಷೆ ಚಿತ್ರಾಕ್ಷಿ ಗೌಡ, ಉಪಾಧ್ಯಕ್ಷ ಸುರೇಶ ಗೌಡ, ಕೇರಳದ ಅರ್ಜುನ ಕುಟುಂಬದ ಪರ ಅಡ್ವೋಕೇಟ್‌ ರಾಜನ್, ಹೊನ್ನಾವರ ಉಳಿಸಿ ಬೆಳೆಸಿ ಸಂಘಟನೆಯ ಅಧ್ಯಕ್ಷ ಜಿ.ಎನ್. ಗೌಡ, ರಾಷ್ಟ್ರೀಯ ಈಡಿಗ ನಾಮಧಾರಿ ಮಹಾಮಂಡಳಿಯ ಜಿಲ್ಲಾಧ್ಯಕ್ಷ ದೇವರಾಜ ನಾಯ್ಕ, ಕಾರ್ಯದರ್ಶಿ ರಾಜೇಶ ನಾಯ್ಕ, ನಾಗೇಶ ನಾಯ್ಕ, ಹರಿಶ್ಚಂದ್ರ ನಾಯ್ಕ, ಅಯ್ಯಪ್ಪ ನಾಯ್ಕ, ಶ್ರೀನಿವಾಸ ನಾಯ್ಕ, ಕೆಆರ್‌ಎಸ್ ಪಕ್ಷದ ನೀಲಕಂಠ ನಾಯ್ಕ ಮತ್ತಿತರಿದ್ದರು.