ಸಾರಾಂಶ
ಶಾಸಕ ಬಸವರಾಜ ಶಿವಣ್ಣವರ ಮತ್ತು ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ರೈತ ಹೋರಾಟ ಸಮಿತಿ ಸದಸ್ಯರ ಮನವಿ
ಕನ್ನಡಪ್ರಭ ವಾರ್ತೆ ಬ್ಯಾಡಗಿಬರಪೀಡಿತ ಜಿಲ್ಲೆಯ ರೈತರ ಪ್ರತಿ ಎಕರೆಗೆ₹25 ಸಾವಿರ ಪರಿಹಾರ ನೀಡುವುದೂ ಸೇರಿದಂತೆ ಕೃಷಿ ಅಭಿವೃದ್ಧಿಗೆ ಮಾಡಿದ ವಿಎಸ್ಎಸ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ರೈತ ಹೋರಾಟ ಸಮಿತಿ ಸದಸ್ಯರು ಶಾಸಕ ಬಸವರಾಜ ಶಿವಣ್ಣವರ ಮತ್ತು ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅಮುರಿಗೆಪ್ಪ ಶೆಟ್ಟರ, ಬರಗಾಲ ಘೋಷಣೆ ಮಾಡಿ 4 ತಿಂಗಳು ಗತಿಸಿವೆ. ಕೇಂದ್ರದ ಕಡೆಗೆ ಕೈತೋರಿಸುತ್ತಿರುವ ರಾಜ್ಯ ಸರ್ಕಾರ ಹೇಡಿತನ ಪ್ರದರ್ಶಿಸುತ್ತಿದೆ. ರಾಜ್ಯದ ರೈತರ ಹಿತಾಸಕ್ತಿ ದೃಷ್ಟಿಯಿಂದಲಾದರೂ ತಮ್ಮ ಪಾಲಿನ ಪರಿಹಾರ ಮೊತ್ತ ಘೋಷಿಸುವಂತೆ ಆಗ್ರಹಿಸಿದರು.ರೈತ ಸಂಘ ಬರಪೀಡಿತ ಪ್ರದೇಶದ ವ್ಯಾಪ್ತಿಯ ಪ್ರತಿ ಎಕರೆಗೆ ₹25 ಪರಿಹಾರ ನೀಡುವಂತೆ ಬೇಡಿಕೆ ಇಟ್ಟಿದೆ. ಪ್ರಕೃತಿ ವಿಪತ್ತು ನಿಧಿಯಿಂದ (ಎನ್‌ಡಿಆರ್‌ಎಫ್) ಹೆಕ್ಟೇರ್‌ಗೆ ₹8500 ಕೇಂದ್ರ ಸರ್ಕಾರದಿಂದ ಸಿಗುವ ಸಾಧ್ಯತೆಯಿದೆ. ಅದಕ್ಕೆ ಇನ್ನಷ್ಟು ಸೇರಿಸಿ ಪರಿಹಾರ ನೀಡುವ ಕುರಿತು ಕೇಂದ್ರದ ಬಳಿಯೇ ಕೇಳುತ್ತೇವೆ. ಆದರೆ ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ ತನ್ನ ಪಾಲನ್ನು ಘೋಷಿಸುವಂತೆ ಆಗ್ರಹಿಸಿದರು.
ಮಳೆ ಕೈಕೊಟ್ಟು ಬರಗಾಲ ಘೋಷಣೆ ಆದರೂ ಸಹ ರೈತರಿಗೆ ಸಂಕಷ್ಟ ತಪ್ಪಿಲ್ಲ. ಎಲ್ಲವನ್ನು ಹೋರಾಟ ಮಾಡಿಯೇ ಪಡೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದು ನೋವಿನ ಸಂಗತಿ. ರಾಜ್ಯದ ರೈತರು ಸಮಸ್ಯೆಗಳಲ್ಲಿ ಮುಳುಗಿದ್ದಾರೆ, ಆದರೆ ಸರ್ಕಾರದ ಭಾಗವಾಗಿರುವ ಸಚಿವರು ವಿದೇಶಗಳಿಗೆ ತೆರಳಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಜಿಲ್ಲೆಗೆ 3 ಬಾರಿ ಬಂದು ಹೋದ ಬಳಿಕವೂ ಪರಿಹಾರದ ಮೊತ್ತ ಇಲ್ಲಿನ ರೈತರಿಗೆ ಘೋಷಣೆಯಾಗಿಲ್ಲ ಎಂದು ಆರೋಪಿಸಿದರು.ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆ, ಹಗಲಿನಲ್ಲಿ 7 ತಾಸು ತ್ರಿಫೇಸ್ ವಿದ್ಯುತ್ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ಸಮಸ್ಯೆಗಳ ಪರಿಹಾರಕ್ಕೆ ಇನ್ನೆಷ್ಟು ವರ್ಷಗಳು ಕಾಯಬೇಕು ಎಂದು ಪ್ರಶ್ನಿಸಿದ ಅವರು, ಸೂಕ್ತ ಸಮಯದಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಹೋರಾಟ ಅನಿವಾರ್ಯ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಈರಪ್ಪ ಸಂಕಣ್ಣನವರ, ನಿಂಗಪ್ಪ ಮಾಗೋಡ, ವಿ.ಎಸ್. ಬೇವಿನಮರದ, ಶಶಿಧರಯ್ಯ ಗೊಲ್ಲರಹಳ್ಳಿಮಠ, ಶಿವಣ್ಣ ಎಲಿ, ಆರ್.ಎಸ್. ದೇಸೂರ, ಗೋಣೆಪ್ಪ ಸಂಕಣ್ಣನವರ, ಚನ್ನಬಸಪ್ಪ ಕಲಕಟ್ಟಿ, ರಾಮಣ್ಣ ಹಡಗಲಿ, ರುದ್ರಪ್ಪ ಹೊಸ್ಮನಿ, ಬಸವಂತಪ್ಪ ದಾಸರ, ಚನ್ನಬಸಪ್ಪ ಮೋಟೆಬೆನ್ನೂರ, ಮಲಕಪ್ಪ ಸಂಕಣ್ಣನವರ, ಮುತ್ತಪ್ಪ ಸಂಕಣ್ಣನವರ, ಬಸವರಾಜ ಸಂಕಣ್ಣನವರ, ಚಂದ್ರಶೇಖರ ಮಾಗೋಡ ಇತರರಿದ್ದರು.