ಕಂಪ್ಲಿ: ಭಾರತದಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣದ ಗೋಸೇವಕರು ಆಗ್ರಹಿಸಿದರು. ಈ ಸಂಬಂಧ ಸೋಮವಾರ ತಹಸೀಲ್ದಾರ್ ಜೂಗಲ ಮಂಜುನಾಯಕ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸುವ ಮೊದಲು, ಪಟ್ಟಣದ ಉದ್ಭವ ಮಹಾಗಣಪತಿ ದೇವಸ್ಥಾನದಿಂದ ತಹಸೀಲ್ ಕಚೇರಿ ವರೆಗೆ “ಗೋಮಾತೆಯ ಗೌರವ ಅಭಿಯಾನ” ಹೆಸರಿನಲ್ಲಿ ಪಾದಯಾತ್ರೆ ನಡೆಸಲಾಯಿತು. ಪಾದಯಾತ್ರೆಯಲ್ಲಿ ಗೋಸೇವಕರು ಹಾಗೂ ಸ್ಥಳೀಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗೋ ರಕ್ಷಣೆ ಕುರಿತ ಘೋಷಣೆಗಳನ್ನು ಕೂಗಿ ಜಾಗೃತಿ ಮೂಡಿಸಿದರು.ಗೋಸೇವಕ ಗೊರ್ತಿ ಶ್ರೀನಿವಾಸುಲು ಮಾತನಾಡಿ, ದೇಶದ ವಿವಿಧ ಭಾಗಗಳಲ್ಲಿ ಕೈಬಿಡಲ್ಪಟ್ಟಿರುವ ದನಗಳ ರಕ್ಷಣೆಗಾಗಿ ಪ್ರತಿಯೊಂದು ರಾಜ್ಯದಲ್ಲೂ ಸಮರ್ಪಕ ಗೋಶಾಲೆಗಳನ್ನು ಸ್ಥಾಪಿಸಿ, ಅವುಗಳಿಗೆ ಸರ್ಕಾರದಿಂದ ಅಗತ್ಯ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು. ಗೋಹತ್ಯೆ ಸಂಪೂರ್ಣ ನಿಷೇಧಕ್ಕೆ ಸಂಬಂಧಿಸಿದಂತೆ ಸಮಗ್ರ ಮತ್ತು ಕಠಿಣ ಕಾನೂನುಗಳನ್ನು ರೂಪಿಸಿ, ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯವಿದೆ ಎಂದರು.
ಗೋಸೇವೆ, ಗೋರಕ್ಷಣೆ ಮತ್ತು ಗೋಮಾತೆಯ ಗೌರವಕ್ಕಾಗಿ ಸರ್ಕಾರಗಳು ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಮಾಜದಲ್ಲಿ ಗೋಮಾತೆಯ ಬಗ್ಗೆ ಗೌರವ ಮತ್ತು ಸಂರಕ್ಷಣೆಯ ಮನೋಭಾವ ಹೆಚ್ಚಿಸುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಗೋಸೇವಕರಾದ ಕೃಷ್ಣ, ಎಂ.ಕೆ. ಗೋವಿಂದ, ಕಲ್ಯಾಣ ಚೌಕಿಮಠದ ಬಸವರಾಜಶಾಸ್ತ್ರಿ, ಎಚ್. ಸತೀಶ್, ಡಾ. ರಾಮು, ಸೋಮನಗೌಡ ದೇವಲಾಪುರ, ಯಣ್ಣಿ ವೆಂಕಟೇಶ, ಎಲಿಗಾರ ವೆಂಕಟರೆಡ್ಡಿ, ಎನ್.ಎಂ. ಪತ್ರೆಯ್ಯಸ್ವಾಮಿ, ಡಿ.ವಿ. ಸತ್ಯನಾರಾಯಣ, ಸೋಗಿ ಸಂತೋಷ್, ಎಲ್‌ಐಸಿ ಈರಣ್ಣ, ಉಗಾದಿ ಬಸವರಾಜ, ಪ್ರಭು, ಟಿ. ಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.